ನವದೆಹಲಿ: ವಸಾಹತುಶಾಹಿ ಗುರುತುಗಳನ್ನು ಅಳಿಸಿಹಾಕುವ ಉದ್ದೇಶದಿಂದ ರಾಜ್ಯಪಾಲರ ಅಧಿಕೃತ ನಿವಾಸವನ್ನು ‘ರಾಜಭವನ’ದ ಬದಲಿಗೆ ‘ಲೋಕ ಭವನ’ ಎಂದು ಮರುನಾಮಕರಣ ಮಾಡಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಇದರ ಬೆನ್ನಲ್ಲೇ, ಕೇರಳ ರಾಜಭವನವು ಸೋಮವಾರ ಮರುನಾಮಕರಣಕ್ಕೆ ಮುಂದಾಗಿದೆ. ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಲಡಾಖ್ ರಾಜ್ಯಪಾಲರು ಈಗಾಗಲೇ ಈ ಆದೇಶವನ್ನು ಜಾರಿಗೆ ತಂದಿದ್ದಾರೆ. ಕೇಂದ್ರದ ಆದೇಶದನ್ವಯ ದೆಹಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳ ‘ರಾಜ ನಿವಾಸ’ವನ್ನು ‘ಲೋಕ ನಿವಾಸ’ವಾಗಿ ಹೆಸರಿಸಲು ನಿರ್ಧರಿಸಲಾಗಿದೆ.
2024ರ ಆ.2ರಂದು ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರ ಸಭೆ ನಡೆದಿತ್ತು. ಈ ವೇಳೆ, ‘ರಾಜಭವನ ಎಂಬುದು ಬ್ರಿಟಿಷ್ ವಸಾಹತುಶಾಹಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಭಾರತೀಯವಾಗಿ ಪರಿವರ್ತಿಸಬೇಕು’ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ನೇತೃತ್ವದ ರಾಜ್ಯಪಾಲರ ಸಮಿತಿ ಶಿಫಾರಸು ಮಾಡಿತ್ತು ಹಾಗೂ ಬಳಿಕ ಇದನ್ನು ಸಭೆ ಅಂಗೀಕರಿಸಿತ್ತು. ಈಗ ಕೇಂದ್ರ ಗೃಹ ಸಚಿವಾಲಯವೂ ಈ ಪ್ರಸ್ತಾವವನ್ನು ಅಂಗೀಕರಿಸಿ, ಮರುನಾಮಕರಣ ಮಾಡುವಂತೆ ರಾಜ್ಯಗಳಿಗೆ ಸೂಚಿಸಿದೆ.
- ರಾಜಭವನ ಎಂಬುದು ಬ್ರಿಟಿಷ್ ವಸಾಹತುಶಾಹಿಯನ್ನು ಪ್ರತಿಬಿಂಬಿಸುತ್ತದೆ. ಅದನ್ನು ಭಾರತೀಯವಾಗಿಸಬೇಕು ಎಂಬ ಬೇಡಿಕೆ- 2024ರ ಆ.2ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ರಾಜ್ಯಪಾಲರ ಸಭೆಯಲ್ಲಿ ಗವರ್ನರ್‌ಗಳು ಸಮಿತಿಯಿಂದ ಈ ಬಗ್ಗೆ ಶಿಫಾರಸು- ಈ ಪ್ರಸ್ತಾವವನ್ನು ಅಂಗೀಕರಿಸಿದ್ದ ಗೃಹ ಸಚಿವಾಲಯ ಮರುನಾಮಕರಣ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು- ಅದರಂತೆ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಲಡಾಖ್ ರಾಜ್ಯಪಾಲರಿಂದ ಈಗಾಗಲೇ ಹೆಸರು ಬದಲಾವಣೆ ಪೂರ್ಣ