ಚೆನ್ನೈ: ತಮಿಳುನಾಡಿನಲ್ಲಿ ನಟರ ರಾಜಕೀಯ ಪ್ರವೇಶ ಮುಂದುವರೆದಿದ್ದು, ಇದೀಗ ನಟ ವಿಜಯ್ ದಳಪತಿ ಲೋಕಸಭೆ ಚುನಾವಣೆಗೂ ಮುನ್ನ ರಾಜಕೀಯಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಮುಂದಿನ ಒಂದು ತಿಂಗಳಲ್ಲಿ ತಮ್ಮ ಪಕ್ಷವನ್ನು ನೊಂದಣಿ ಮಾಡಲು ಅವರು ಸಕಲ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯ್ ಅವರ ಫ್ಯಾನ್ ಕ್ಲಬ್ ಆದಂತಹ ‘ವಿಜಯ್ ಮಕ್ಕಳ್ ಇಯಕ್ಕಮ್’ ಸಹ ಪಕ್ಷ ನೋಂದಣಿಯನ್ನು ಒಪ್ಪಿಕೊಂಡಿದ್ದು, ಗುರುವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ವಿಜಯ್ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟ ವಿಜಯ್‌ಗೆ ತಮಿಳುನಾಡು ಮತ್ತು ಕೇರಳದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ವಿಜಯ್ ಸಹ ಹಲವು ಬಾರಿ ರಾಜಕೀಯ ಪ್ರವೇಶದ ಮಾತುಗಳನ್ನಾಡಿದ್ದಾರೆ.
2018ರಲ್ಲಿ ತೂತುಕುಡಿಯಲ್ಲಿ ನಡೆದ ಪೊಲೀಸ್ ಫೈರಿಂಗ್ ಬಳಿಕ ಮೃತಪಟ್ಟವರ ಮನೆಗೆ ವಿಜಯ್ ಭೇಟಿ ನೀಡಿ ಸಹಾಯ ಮಾಡಿದ್ದರು.
ತಮಿಳುನಾಡಿನಲ್ಲಿ ಪ್ರವಾಹ ಸಂಭವಿಸಿದಾಗಲೂ ಸಹ ವಿಜಯ್ ಸಾಕಷ್ಟು ಸಹಾಯ ಮಾಡಿ ಜನಪ್ರಿಯತೆ ಗಳಿಸಿದ್ದಾರೆ.
ತಮಿಳುನಾಡಿನ ಸ್ಥಳೀಯ ಚುನಾವಣೆಗಳಲ್ಲಿ ಅವರ ಫ್ಯಾನ್ ಕ್ಲಬ್ ವಿಜಯ್ ಮಕ್ಕಳ್ ಇಯಕ್ಕಮ್ ಸ್ಪರ್ಧೆ ಮಾಡುತ್ತಿದೆ. ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಈಗಾಗಲೇ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ.