ಬಣ್ಣಗಳ ಹಬ್ಬ ಹೋಳಿಯನ್ನು ಅನಾಗರಿಕರ ಹಬ್ಬ ಎಂದು ಬಾಲಿವುಡ್‌ ನಿರ್ಮಾಪಕಿ ಫರಾ ಖಾನ್‌ : ವಿವಾದ

KannadaprabhaNewsNetwork |  
Published : Feb 23, 2025, 12:30 AM ISTUpdated : Feb 23, 2025, 09:57 AM IST
ಫರಾ | Kannada Prabha

ಸಾರಾಂಶ

ಬಣ್ಣಗಳ ಹಬ್ಬ ಹೋಳಿಯನ್ನು ಛಪ್ರಿಗಳ (ಅನಾಗರಿಕರ) ಹಬ್ಬ ಎಂದು ಬಾಲಿವುಡ್‌ ನಿರ್ಮಾಪಕಿ ಫರಾ ಖಾನ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಮುಂಬೈ: ಬಣ್ಣಗಳ ಹಬ್ಬ ಹೋಳಿಯನ್ನು ಛಪ್ರಿಗಳ (ಅನಾಗರಿಕರ) ಹಬ್ಬ ಎಂದು ಬಾಲಿವುಡ್‌ ನಿರ್ಮಾಪಕಿ ಫರಾ ಖಾನ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಸೆಲಬ್ರಿಟಿ ಮಾಸ್ಟರ್‌ಚೆಫ್‌ ಕಾರ್ಯಕ್ರಮದಲ್ಲಿ ಫರಾ, ‘ಎಲ್ಲಾ ಛಪ್ರಿಗಳ ಪ್ರಿಯವಾದ ಹಬ್ಬ ಹೋಳಿ’ ಎಂದಿದ್ದರು. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮ ಪ್ರಭಾವಿ, ಹಿಂದುಸ್ತಾನಿ ಭಾವು ಎಂದೇ ಜನಪ್ರಿಯರಾಗಿರುವ ವಿಕಾಸ್‌ ಜಾಯರಾಂ ಪಾಠಕ್‌ ದೂರು ದಾಖಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ಸಂಬಂಧ ಇನ್ನೂ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ ಹಾಗೂ ತನಿಖೆ ನಡೆಯುತ್ತಿದೆ ಎಂದು ಖಾರ್‌ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಬಿಐ ಮಾಜಿ ಗೌರ್ನರ್‌ ಶಕ್ತಿಕಾಂತ್‌ ದಾಸ್‌ಗೆ ಪ್ರಧಾನಿ ಮುಖ್ಯ ಕಾರ್‍ಯದರ್ಶಿ-2 ಹುದ್ದೆ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗೌವರ್ನರ್‌ ಶಕ್ತಿಕಾಂತ್‌ ದಾಸ್‌ ಅವರನ್ನು ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ 2ನೇ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಇವರ ಅಧಿಕಾರ ಅವಧಿಯು ಪ್ರಧಾನಿ ಮೋದಿ ಅವರ ಅವಧಿವರೆಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ.ಗುಜರಾತ್‌ ಕೇಡರ್‌ನ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಕೆ.ಮಿಶ್ರಾ ಅವರು ಪ್ರಸ್ತುತ ಪ್ರಧಾನಿ ಮೋದಿ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದು, ಇವರೊಂದಿಗೆ ದಾಸ್‌ ಕಾರ್ಯನಿರ್ವಹಿಸಲಿದ್ದಾರೆ. ದಾಸ್‌ ಅವರ ನೇಮಕವನ್ನು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.

ಶಕ್ತಿಕಾಂತ್‌ ದಾಸ್‌ ಅವರು 2018ರಿಂದ 2024ರ ಡಿಸೆಂಬರ್‌ವರೆಗೆ ಆರ್‌ಬಿಐನ ಗವರ್ನರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ ಭಾರತದ ಜಿ20 ಅಧ್ಯಕ್ಷತೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ರಾಜಸ್ಥಾನ ಸಿಎಂ ಭಜನ್‌ಲಾಲ್ ಶರ್ಮಾಗೆ ಜೈಲಿಂದ ಕೊಲೆ ಬೆದರಿಕೆ

ಜೈಪುರ: ಶುಕ್ರವಾರ ರಾತ್ರಿ ದೌಸಾದ ಸಲಾವಾಸ್ ಜೈಲಿನ ಕೈದಿಯೊಬ್ಬ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 29 ವರ್ಷದ ರಿಂಕು, ಜೈಲ್ಲಲೇ ಅಕ್ರಮವಾಗಿ ಮೊಬೈಲ್‌ ಇರಿಸಿಕೊಂಡಿದ್ದ ಹಾಗೂ ಅದರಿಂದ ಜೈಪುರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ತನಿಖೆ ವೇಳೆ, ಕರೆಗೆ ಬಳಸಿದ ಮೊಬೈಲ್ ಫೋನ್‌ನ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಳಗಿನ ಜಾವ 3ರಿಂದ 7ರವರೆಗೆ ಜೈಲಿನಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

10 ಸಾವಿರ ಕೋಟಿ ರು. ನೀಡಿದರೂ ಎನ್‌ಇಪಿ ಜಾರಿ ಮಾಡಲ್ಲ: ಸ್ಟಾಲಿನ್

ಚೆನ್ನೈ: ಕೇಂದ್ರವು ರಾಜ್ಯಕ್ಕೆ 10,000 ಕೋಟಿ ರು. ನೀಡಿದರೂ ತಮಿಳುನಾಡಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹೇಳಿದ್ದಾರೆ.ತಮಿಳುನಾಡಿನ ಕಡಲೂರಿನಲ್ಲಿ ನಡೆದ ಪೋಷಕರ-ಶಿಕ್ಷಕರ ಸಂಘದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, ‘ನಾವು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ. ಆದರೆ ಅದರ ಹೇರಿಕೆ ವಿರೋಧಿಸುತ್ತೇವೆ. ಹಿಂದಿ ಹೇರುವ ಪ್ರಯತ್ನಕ್ಕಾಗಿ ಮಾತ್ರ ನಾವು ಎನ್‌ಇಪಿಯನ್ನು ವಿರೋಧಿಸುತ್ತಿಲ್ಲ, ಬದಲಾಗಿ ಹಲವಾರು ಇತರ ಕಾರಣಗಳಿಗಾಗಿಯೂ ಸಹ. ಎನ್‌ಇಪಿ ಪ್ರತಿಗಾಮಿಯಾಗಿದೆ. ಇದು ವಿದ್ಯಾರ್ಥಿಗಳನ್ನು ಶಾಲೆಗಳಿಂದ ದೂರವಿಡುತ್ತದೆ’ ಎಂದರು.

ಅಮೆರಿಕ ದಾಳಿಯಲ್ಲಿ ಅಲ್‌ ಖೈದಾ ನಾಯಕ ವಾಸಿಂ ಹತ್ಯೆ

ಡಮಾಸ್ಕಸ್: ಅಲ್‌ ಖೈದಾ ಉಗ್ರರ ವಿರುದ್ಧ ಭೀಕರ ದಾಳಿ ನಡೆಸಿರುವ ಅಮೆರಿಕ, ಶುಕ್ರವಾರ ವಾಯುವ್ಯ ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿ, ಅಲ್-ಖೈದಾ ಅಂಗಸಂಸ್ಥೆಯಾದ ಭಯೋತ್ಪಾದಕ ಸಂಘಟನೆ ಹುರ್ರಾಸ್ ಅಲ್-ದಿನ್ (ಎಚ್‌ಎಡಿ) ಹಿರಿಯ ನಾಯಕ ವಾಸಿಂ ತಹ್ಸಿನ್ ಬೇರಕ್ದಾರ್‌ನನ್ನು ಹತ್ಯೆ ಮಾಡಿವೆ.‘ಶುಕ್ರವಾರ ಯುಎಸ್ ಸೆಂಟ್ರಲ್ ಕಮಾಂಡ್ ಪಡೆಗಳು ವಾಯುವ್ಯ ಸಿರಿಯಾದಲ್ಲಿ ನಿಖರವಾದ ವೈಮಾನಿಕ ದಾಳಿ ನಡೆಸಿ ವಾಸಿಂನನ್ನು ಕೊಂದಿವೆ. ನಮ್ಮ ತಾಯ್ನಾಡು ಮತ್ತು ನಮ್ಮ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರನ್ನು ರಕ್ಷಿಸಲು ನಾವು ಉಗ್ರರು ಎಲ್ಲೇ ಇರಲಿ ಅವರನ್ನು ನಾಶಪಡಿಸುತ್ತೇವೆ’ ಎಂದು ಅಮೆರಿಕ ಸೇನೆ ಹೇಳಿದೆ.

PREV

Recommended Stories

ಕಮಲ್‌ ಜೊತೆ ಒಂದು ಸೇರಿ 3 ಚಿತ್ರದ ಬಳಿಕ ರಜನಿ ವಿದಾಯ?
ಕೆಲಸಕ್ಕೆ ಲೇಟಾಗಿ ಬಂದಿದ್ದಕ್ಕೆ ಬೆತ್ತಲೆ ಮಾಡಿ ಮುಟ್ಟು ಪರೀಕ್ಷಿಸಿದ ಪುರುಷ