ಉಕ್ರೇನ್‌ನ ಆಳಸಮುದ್ರ ಡ್ರೋನ್‌ಗಳು, ಕಪ್ಪು ಸಮುದ್ರದ ಬಂದರಿನ ನೊವೊರೊಸಿಸ್ಕ್ ಎಂಬಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆಯನ್ನು ಹೊಡೆದುರುಳಿಸಿವೆ. ತನ್ನ ಸಬ್‌ ಸೀ ಬೇಬಿ ಆಳಸಮುದ್ರ ಡ್ರೋನ್‌ಗಳನ್ನು ಬಳಸಿ ರಷ್ಯಾ ಮೇಲೆ ದಾಳಿ

ಕೀವ್: ಉಕ್ರೇನ್‌ನ ಆಳಸಮುದ್ರ ಡ್ರೋನ್‌ಗಳು, ಕಪ್ಪು ಸಮುದ್ರದ ಬಂದರಿನ ನೊವೊರೊಸಿಸ್ಕ್ ಎಂಬಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆಯನ್ನು ಹೊಡೆದುರುಳಿಸಿವೆ.

ಈ ಮೂಲಕ ಇತಿಹಾಸದಲ್ಲಿ ಮೊದಲ ಬಾರಿ ಉಕ್ರೇನ್‌ ತನ್ನ ಸಬ್‌ ಸೀ ಬೇಬಿ ಆಳಸಮುದ್ರ ಡ್ರೋನ್‌ಗಳನ್ನು ಬಳಸಿ ರಷ್ಯಾ ಮೇಲೆ ದಾಳಿ ನಡೆಸಿದಂತಾಗಿದೆ.

ರಷ್ಯನ್‌ ಪಡೆಗಳು ಉಕ್ರೇನ್‌ನ ಒಡೆಸಾ ಬಂದರಿನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಪ್ಪು ಸಮುದ್ರದಲ್ಲಿ ರಷ್ಯಾ ಹಡಗುಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್‌ ನೌಕಾ ದಾಳಿ ತೀವ್ರಗೊಳಿಸಿದೆ. ಇತ್ತೀಚೆಗೆ 2 ಟರ್ಕಿಶ್ ಸರಕು ಸಾಗಣೆ ಹಡಗುಗಳ ಮೇಲೆ ದಾಳಿ ಮಾಡಲಾಗಿದೆ. ಇದಕ್ಕೆ ರಷ್ಯಾ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. 2022ರಲ್ಲಿ ಯುದ್ಧ ಆರಂಭವಾದಾಗಿನಿಂದಲೂ ರಷ್ಯಾ ಹಡಗುಗಳ ಮೇಲೆ ಉಕ್ರೇನ್ ಡ್ರೋನ್‌ ಮತ್ತು ಕ್ಷಿಪಣಿ ಬಳಸಿ ದಾಳಿ ನಡೆಸುತ್ತಲೇ ಇದೆ.

ಮಸೂದೆಗೆ ಹಿಂದಿ ಹೆಸರು: ಚಿದಂಬರಂ ಗರಂ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರುವ ಮಸೂದೆಗಳ ಶೀರ್ಷಿಕೆಯಲ್ಲಿ ಇತ್ತೀಚೆಗೆ ಹಿಂದಿ ಪದಗಳ ಬಳಕೆ ಹೆಚ್ಚಾಗುತ್ತಿರುವುದಕ್ಕೆ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಕಿಡಿಕಾರಿದ್ದು, ‘ಇದು ಹಿಂದಿಯೇತರರಿಗೆ ಮಾಡುವ ಅವಮಾನ’ ಎಂದು ಗರಂ ಆಗಿದ್ದಾರೆ.

‘ಸದನಗಳಲ್ಲಿ ಜಾರಿಗೆ ತರಲಾಗುವ ಮಸೂದೆಗಳ ಶೀರ್ಷಿಕೆಗಳನ್ನು ಬರೆಯುವ ವೇಳೆ ಇಂಗ್ಲೀಷ್‌ ಅಕ್ಷರಗಳಲ್ಲಿ ಹಿಂದಿ ಪದ ಬರೆಯುವುದಕ್ಕೆ ನನ್ನ ವಿರೋಧವಿದೆ. ಈ ಹಿಂದೆ ಹಿಂದಿ ಮತ್ತು ಇಂಗ್ಲೀಷ್‌ ಎರಡೂ ಭಾಷೆಯಲ್ಲಿ ಬರೆಯುವ ಪದ್ಧತಿಯಿತ್ತು. 75 ವರ್ಷಗಳಲ್ಲಿ ಯಾರೂ ಇದಕ್ಕೆ ಆಕ್ಷೇಪಿಸಿರಲಿಲ್ಲ. ಆದರೆ ಈಗ ಏಕೆ ಬದಲಾವಣೆ ಆಗುತ್ತಿದೆ’ ಎಂದು ಪ್ರಶ್ನಿಸಿದ್ದಾರೆ‘ಈ ಬದಲಾವಣೆಯು ಹಿಂದಿಯೇತರರಿಗೆ ಮತ್ತು ಹಿಂದಿಯನ್ನು ಹೊರತುಪಡಿಸಿ ಬೇರೆ ಅಧಿಕೃತ ಭಾಷೆಯನ್ನು ಹೊಂದಿರುವ ರಾಜ್ಯಗಳಿಗೆ ಮಾಡಿರುವ ಅವಮಾನ’ ಎಂದು ಕಿಡಿಕಾರಿದ್ದಾರೆ.

ಅನುಮತಿ ಇಲ್ಲದ ಚಿತ್ರಗಳೂ ಕೇರಳ ಚಿತ್ರೋತ್ಸವದಲ್ಲಿ ಪ್ರದರ್ಶನ

ತಿರುವನಂತಪುರ: 15 ಹೆಚ್ಚು ಸಿನಿಮಾಗಳಿಗೆ ಕೇಂದ್ರ ಸರ್ಕಾರದ ಸರ್ಕಾರದ ಅನುಮತಿ ಸಿಗದ ಹೊರತಾಗಿಯೂ ಡಿ.12ರಿಂದ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಪ್ಯಾಲೆಸ್ತೀನ್‌ 360’ ಸೇರಿ ನಿಗದಿಪಡಿಸಿದ ಎಲ್ಲಾ ಚಿತ್ರಗಳನ್ನು ಪ್ರದರ್ಶಿಸಲು ಕೇರಳ ಚಲನಚಿತ್ರ ಅಕಾಡೆಮಿ ನಿರ್ಧರಿಸಿದೆ.ಕೇರಳದಲ್ಲಿ ಡಿ.12ರಿಂದ ಡಿ.19ರ ವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ವಿವಾದಗಳನ್ನು ಬದಿಗಿಟ್ಟು ನಾವು ಕೇರಳ ಸರ್ಕಾರ ಹೊರಡಿಸಿದ ನೋಟಿಫಿಕೇಷನ್ ಪ್ರಕಾರ ಎಲ್ಲಾ ಸಿನಿಮಾಗಳ ಪ್ರದರ್ಶನ ಮಾಡಲಿದ್ದೇವೆ. 15 ಸಿನಿಮಾಗೆ ಕೇಂದ್ರದ ಅನುಮತಿ ಸಿಕ್ಕಿಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಬೇಕು ಎಂಬ ಕೇರಳ ಸರ್ಕಾರದ ಸೂಚನೆ ಮೇರೆಗೆ ಈ ಚಿತ್ರಗಳನ್ನೂ ಪ್ರದರ್ಶಿಸಲಾಗುತ್ತದೆ ಎಂದು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರೆಸೂಲ್‌ ಪೂಕುಟ್ಟಿ ತಿಳಿಸಿದ್ದಾರೆ.

ಪ್ಯಾಲೆಸ್ತೀನ್‌ 360, ಬ್ಯಾಟಲ್‌ಶಿಪ್‌ ಪೊಟೆಂಕಿನ್‌ ಸೇರಿ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರದಿಂದ ಅಧಿಕೃತ ಸೆನ್ಸಾರ್‌ ಸಿಕ್ಕಿರಲಿಲ್ಲ.

ರುಪಾಯಿ ಮೌಲ್ಯ ₹91.01ಕ್ಕೆ ಕುಸಿತ: ಸಾರ್ವಕಾಲಿಕ ಕನಿಷ್ಠ

ಮುಂಬೈ: ಅಮೆರಿಕದ ಡಾಲರ್‌ ಎದುರು ರುಪಾಯಿ ಮೌಲ್ಯದ ಕುಸಿತ ಪರ್ವ ಮುಂದುವರೆದಿದೆ. ಮಂಗಳವಾರವೂ ಸಹ 23 ಪೈಸೆ ಕುಸಿತ ಕಂಡಿದ್ದು ದಿನದಂತ್ಯಕ್ಕೆ ಸಾರ್ವಕಾಲಿಕ ಕನಿಷ್ಠ ₹91.01 ಕ್ಕೆ ತಲುಪಿದೆ.ತಜ್ಞರ ವಿಶ್ಲೇಷಣೆಯ ಪ್ರಕಾರ ರುಪಾಯಿ ಮೌಲ್ಯ ಡಾಲರ್‌ಗೆ ಈ ತಿಂಗಳ ಅಂತ್ಯಕ್ಕೆ ₹92 ರು.ಕ್ಕೆ ಕುಸಿತ ಕಾಣುವ ಸಾಧ್ಯತೆಯಿದೆ.

ಷೇರು ಕುಸಿತ:

ಮತ್ತೊಂದೆಡೆ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕೂಡ ನಕಾರಾತ್ಮಕ ಹಾದಿಯಲ್ಲಿ ಸಾಗಿವೆ. ಸೆನ್ಸೆಕ್ಸ್ 533 ಅಂಕ ಕುಸಿದು 84.679.86ಕ್ಕೆ ತಲುಪಿದ್ದು, ನಿಫ್ಟಿ 167 ಅಂಕ ಇಳಿದು 25,860.10 ಅಂಕಕ್ಕೆ ಕುಸಿದಿದೆ.

ಗೌರ್ನರ್‌ ಅಧಿಕಾರಕ್ಕೆ ಕತ್ತರಿ ಹಾಕುವ 3 ಬಂಗಾಳ ವಿಧೇಯಕಕ್ಕೆ ರಾಷ್ಟ್ರಪತಿ ತಡೆ

ಕೋಲ್ಕತಾ: ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಯನ್ನು ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿ ನೇಮಿಸುವ ಮಸೂದೆ ಸೇರಿದಂತೆ ಪಶ್ಚಿಮ ಬಂಗಾಳ ವಿಧಾನಸಭೆ ಅಂಗೀಕರಿಸಿದ 3 ತಿದ್ದುಪಡಿ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ನೀಡದೆ ತಡೆಹಿಡಿದಿದ್ದಾರೆಏಪ್ರಿಲ್ 2024 ರಲ್ಲಿ ರಾಜ್ಯಪಾಲ ಆನಂದ ಬೋಸ್ ಅವರು ವಿವಿಗೆ ಸಂಬಂಧಿಸಿದ 3 ವಿವಿಗಳಿಗೆ ಸಹಿಹಾಕದೆ ರಾಷ್ಟ್ರಪತಿಗೆ ಕಳಿಸಿದ್ದರು. ಈ ಎಲ್ಲಾ ಮಸೂದೆಗಳು, ರಾಜ್ಯಪಾಲರನ್ನು ಬದಲಿಸಿ ಮುಖ್ಯಮಂತ್ರಿಯನ್ನು ರಾಜ್ಯ ಅನುದಾನಿತ ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದ್ದವು.