ಆಸ್ಟ್ರೇಲಿಯಾದ ಬೋಂಡಿ ಕಡಲತೀರದಲ್ಲಿ 15 ಮಂದಿ ಯಹೂದಿಗಳ ಮಾರಣಹೋಮಕ್ಕೆ ಹೊಸ ತಿರುವು ಸಿಕ್ಕಿದೆ. ದಾಳಿಕೋರರಲ್ಲಿ ಒಬ್ಬನಾದ ಸಾಜಿದ್‌ ಅಕ್ರಂ ಪಾಕಿಸ್ತಾನದವನಲ್ಲ. ಬದಲಾಗಿ ಭಾರತದವ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

 ಹೈದರಾಬಾದ್‌ : ಆಸ್ಟ್ರೇಲಿಯಾದ ಬೋಂಡಿ ಕಡಲತೀರದಲ್ಲಿ 15 ಮಂದಿ ಯಹೂದಿಗಳ ಮಾರಣಹೋಮಕ್ಕೆ ಹೊಸ ತಿರುವು ಸಿಕ್ಕಿದೆ. ದಾಳಿಕೋರರಲ್ಲಿ ಒಬ್ಬನಾದ ಸಾಜಿದ್‌ ಅಕ್ರಂ ಪಾಕಿಸ್ತಾನದವನಲ್ಲ. ಬದಲಾಗಿ ಭಾರತದವ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ‘ಈತ ಹೈದರಾಬಾದ್‌ ಮೂಲದವನು, 27 ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ’ ಎಂದು ತೆಲಂಗಾಣ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

‘ಸಾಜಿದ್‌ ಹೈದರಾಬಾದ್‌ನ ಟೋಲಿಚೌಕಿಯವನು. ಬಿ.ಕಾಂ. ಪದವಿ ಮುಗಿಸಿ, ಉದ್ಯೋಗವನ್ನರಸಿ 1998ರಲ್ಲಿ ಆಸ್ಟ್ರೇಲಿಯಾಕ್ಕೆ ಹೋಗಿದ್ದ. ಈತನ ಮಗ ಹಾಗೂ ಇದೇ ಸಿಡ್ನಿ ದಾಳಿಯಲ್ಲಿ ಈತನಿಗೆ ಸಾಥ್‌ ನೀಡಿ ಬಂಧನಕ್ಕೆ ಒಳಗಾಗಿರುವ ನವೀದ್‌ ಅಕ್ರಂ (24), 2001ರಲ್ಲಿ ಆಸ್ಟ್ರೇಲಿಯಾದಲ್ಲಿಯೇ ಹುಟ್ಟಿದ್ದ’ ಎಂದು ತೆಲಂಗಾಣ ಪೊಲೀಸರು ಹೇಳಿಕೆ ನೀಡಿದ್ದಾರೆ.

‘ಸಾಜಿದ್‌ನ ಇತರ ಕುಟುಂಬಸ್ಥರು ಹೈದರಾಬಾದ್‌ನಲ್ಲಿಯೇ ನೆಲೆಸಿದ್ದಾರೆ. ಅಣ್ಣ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದ ಸೈನ್ಯದಲ್ಲಿ ಕೆಲಸ ಮಾಡಿ 1984ರಲ್ಲಿ ನಿವೃತ್ತರಾಗಿದ್ದರು. ಕುಟುಂಬದ ಜತೆ ಸಾಜಿದ್‌ಗೆ ಆಸ್ತಿ ವ್ಯಾಜ್ಯ ಇತ್ತು. ಹೀಗಾಗಿ 2017ರಲ್ಲಿ ತಂದೆ ಮೃತರಾದಾಗಲೂ ಸಾಜಿದ್‌ ಊರಿಗೆ ಬಂದಿರಲಿಲ್ಲ. ಇಲ್ಲಿಂದ ಆಸ್ಟ್ರೇಲಿಯಾಕ್ಕೆ ಹೋದ ಬಳಿಕ 6 ಸಲ ಮಾತ್ರ ಆತ ಭಾರತಕ್ಕೆ ಬಂದಿರಬಹುದು. ಆದಾಗ್ಯೂ ಆತನಿಗೆ ಸ್ಥಳೀಯವಾಗಿ ಯಾವ ಸಂಪರ್ಕವೂ ಇದ್ದಂತಿಲ್ಲ. ತೆಲಂಗಾಣದಲ್ಲಿಯೂ ಅವನಿಗೆ ಯಾವುದೇ ಪ್ರಭಾವ ಇರಲಿಲ್ಲ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಸಾಜಿದ್ ಬಂಧುಗಳೂ ಹೇಳಿಕೆ ನೀಡಿ, ‘ಆಸ್ಟ್ರೇಲಿಯಾದಲ್ಲಿ ಕ್ರೈಸ್ತ ಸಮುದಾಯದ ಮಹಿಳೆಯನ್ನು ಸಾಜಿದ್‌ ಮದುವೆ ಆಗಿದ್ದ. ಆಗಿನಿಂದ ಆತನ ಸಂಬಂಧವನ್ನು ನಾವು ಕಡಿದುಕೊಂಡಿದ್ದೆವು’ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ ಪಾಸ್‌ಪೋರ್ಟ್‌ಬಳಸಿ ಉಗ್ರ ತರಬೇತಿ

ಸಿಡ್ನಿ: 15 ಯಹೂದಿಗಳ ಹತ್ಯಾಕಾಂಡ ನಡೆಸಿದ ಪಾಕಿಸ್ತಾನ ಮೂಲದ ಅಪ್ಪ-ಮಗ ಕಳೆದ ತಿಂಗಳು ಫಿಲಿಪ್ಪೀನ್ಸ್‌ ದೇಶಕ್ಕೆ ತೆರಳಿ, ಅಲ್ಲಿ ಉಗ್ರಗಾಮಿ ಇಸ್ಲಾಮಿಕ್ ಬೋಧಕರಿಂದ ತರಬೇತಿ ಪಡೆದಿದ್ದರು. ತಂದೆ ಸಾಜಿದ್‌ ಅಕ್ರಂ ಭಾರತದ ಪಾಸ್‌ಪೋರ್ಟ್‌ ಬಳಸಿ ಅಲ್ಲಿಗೆ ತೆರಳಿದ್ದ ಎಂದು ತಿಳಿದುಬಂದಿದೆ. 

3 ಭಾರತೀಯರಿಗೆ ದಾಳಿಯಲ್ಲಿ ಗಾಯ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಕಡಲತೀರದಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳೂ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಆದರೆ ಆಸ್ಟ್ರೇಲಿಯಾ ಪೊಲೀಸರು ಇವರ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.