ಬಹುಚರ್ಚಿತ ನ್ಯಾಷನಲ್ ಹೆರಾಲ್ಡ್ ಪರಭಾರೆ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರೆ ಐವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾಖಲಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಚಾರ್ಜ್‌ಶೀಟ್ ಅನ್ನು ಸ್ವೀಕರಿಸಲು ದೆಹಲಿ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಈ ಮೂಲಕ ಪ್ರಕರಣದಲ್ಲಿ ಸೋನಿಯಾ ಕುಟುಂಬ ಹಾಗೂ ಇತರೆ ಆರೋಪಿಗಳಿಗೆ ಭಾಗಶಃ ರಿಲೀಫ್ ಸಿಕ್ಕಂತಾಗಿದೆ.
- ಇ.ಡಿ. ಚಾರ್ಜ್‌ಶೀಟ್ ಸ್ವೀಕರಿಸಲು ಕೋರ್ಟ್ ನಕಾರ
- ಆದರೆ ದಿಲ್ಲಿ ಪೊಲೀಸ್ ಎಫ್‌ಐಆರ್ ಅಬಾಧಿತ- ಕೋರ್ಟ್ ಆದೇಶ ವಿರುದ್ಧ ಮೇಲ್ಮನವಿ ಹಾಕ್ತೇವೆ
- ದಿಲ್ಲಿ ಪೊಲೀಸ್ ಎಫ್ಐಆರ್ ಆಧರಿಸಿ ಹೊಸ ಚಾರ್ಜ್‌ಶೀಟ್: ಇ.ಡಿ.ಪಿಟಿಐ ನವದೆಹಲಿಬಹುಚರ್ಚಿತ ನ್ಯಾಷನಲ್ ಹೆರಾಲ್ಡ್ ಪರಭಾರೆ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರೆ ಐವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾಖಲಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಚಾರ್ಜ್‌ಶೀಟ್ ಅನ್ನು ಸ್ವೀಕರಿಸಲು ದೆಹಲಿ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಈ ಮೂಲಕ ಪ್ರಕರಣದಲ್ಲಿ ಸೋನಿಯಾ ಕುಟುಂಬ ಹಾಗೂ ಇತರೆ ಆರೋಪಿಗಳಿಗೆ ಭಾಗಶಃ ರಿಲೀಫ್ ಸಿಕ್ಕಂತಾಗಿದೆ.
ಆದರೆ ಇದೇ ಪ್ರಕರಣದಲ್ಲಿ ದಿಲ್ಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲು) ಎಫ್‌ಐಆರ್ ದಾಖಲಿಸಿ ನಡೆಸುತ್ತಿರುವ ತನಿಖೆಗೆ ಭಂಗವಿಲ್ಲ. ಅದು ಯಥಾರೀತಿ ಮುಂದುವರಿಯಲಿದೆ.ಇದೇ ವೇಳೆ ದೆಹಲಿ ಕೋರ್ಟ್ ಕ್ರಮವನ್ನು ಪ್ರಶ್ನಿಸಿ ಮೇಲಿನ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಇದೇ ವೇಳೆ ಇ.ಡಿ. ತಿಳಿಸಿದೆ. ಅಲ್ಲದೆ, ದಿಲ್ಲಿ ಪೊಲೀಸರ ಎಫ್‌ಐಆರ್ ಆಧರಿಸಿ ಹೊಸ ಚಾರ್ಜ್‌ಶೀಟ್ ಹಾಕುವುದಾಗಿಯೂ ಹೇಳಿದೆ.
ಕೋರ್ಟ್ ಹೇಳಿದ್ದೇನು?:‘ಖಾಸಗಿ ವ್ಯಕ್ತಿಯೊಬ್ಬರು (ಡಾ.ಸುಬ್ರಹ್ಮಣ್ಯನ್ ಸ್ವಾಮಿ) ಸಲ್ಲಿಸಿದ ದೂರಿನ ಆಧಾರದಲ್ಲಿ ಚಾರ್ಜ್‌ಶೀಟ್ ಹಾಕಲಾಗಿದೆಯೇ ಹೊರತು ಮೂಲ ಅಪರಾಧ ಸಂಬಂಧ ದಾಖಲಾದ ಎಫ್‌ಐಆರ್ ಆಧರಿಸಿ ಅಲ್ಲ. ಹೀಗಾಗಿ ಪ್ರಕರಣದಲ್ಲಿ ಈ ಚಾರ್ಜ್‌ಶೀಟ್ ಅನ್ನು ಒಪ್ಪಲಾಗದು’ ಎಂದು ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಹೇಳಿದರು.
ಜತೆಗೆ, ‘ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇ.ಡಿ. ನೀಡಿದ್ದ ದೂರು ಆಧರಸಿ ಎಫ್‌ಐಆರ್ ದಾಖಲಿಸಿದೆ. ಹೀಗಾಗಿ ಇ.ಡಿ. ವಾದವನ್ನು ಆಧರಿಸಿ ಈಗಲೇ ತೀರ್ಪು ನೀಡುವುದು ಆತುರದ ಕ್ರಮ ಆಗಲಿದೆ’ ಎಂದು ಹೇಳಿದರು.ಮೇಲ್ಮನವಿಗೆ ನಿರ್ಧಾರ:
‘ನ್ಯಾಯಾಲಯವು ಕೇವಲ ತಾಂತ್ರಿಕ ಆಧಾರದ ಮೇಲೆ ಈ ಆದೇಶ ನೀಡಿದೆ. ಪ್ರಕರಣದ ಮೆರಿಟ್ ಬಗ್ಗೆ ಯಾವುದೇ ಟಿಪ್ಪಣಿ ಮಾಡಿಲ್ಲ. ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆಯ ಸಾಕ್ಷಿಗಳು ಬೆಳಕಿಗೆ ಬಂದಿವೆ. ಇದು ಅಕ್ರಮ ಹಣ ವರ್ಗಾವಣೆ ಪ್ರಕರಣದ ಸ್ಪಷ್ಟ ಪ್ರಕರಣವಾಗಿದೆ. ಈ ಬಗ್ಗೆ ಮೇಲ್ಮನವಿ ಹಾಕಲಾಗುವುದು ಹಾಗೂ ದಿಲ್ಲಿ ಪೊಲೀಸ್ ಎಫ್ಐಆರ್ ಆಧರಿಸಿ ಹೊಸ ಚಾರ್ಜ್‌ಶೀಟ್ ಹಾಕಲಾಗುವುದು’ ಎಂದು ಇ.ಡಿ. ಮೂಲಗಳು ತಿಳಿಸಿವೆ.ನ್ಯಾಷನನ್ ಹೆರಾಲ್ಡ್ ಪತ್ರಿಕೆ ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿ.ನ (ಎಜೆಜೆಎಲ್) 2 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಕೇವಲ 50 ಲಕ್ಷ ರು.ಗೆ ವಶಪಡಿಸಿಕೊಂಡ ಆರೋಪ ಸಂಬಂಧ ಇ.ಡಿ., ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಯಂಗ್ ಇಂಡಿಯಾ ವಿರುದ್ಧ ಸಂಚು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಮಾಡಿತ್ತು.
ಇದೇ ಮಾದರಿಯಲ್ಲಿ ಇ.ಡಿ. ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಅ.3ರಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.ಕೈ ಮುಖಂಡರಿಗೆ ಎಫ್‌ಐಆರ್ ಕಾಪಿ ಬೇಡ:
ಇದೇ ವೇಳೆ ದೆಹಲಿ ಪೊಲೀಸರ ಪ್ರತ್ಯೇಕ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಸೇರಿ ಇತರೆ ಆರೋಪಿಗಳಿಗೆ ಎಫ್‌ಐಆರ್ ಕಾಪಿ ನೀಡಬೇಕೆಂಬ ಮ್ಯಾಜಿಸ್ಟೀರಿಯಲ್ ಕೋರ್ಟ್‌ನ ಆದೇಶವನ್ನು ರದ್ದು ಮಾಡಿದೆ. ಮೌಖಿಕವಾಗಿ ಅವರಿಗೆ ಈ ಕುರಿತು ಮಾಹಿತಿ ನೀಡಬಹುದಷ್ಟೆ ಎಂದು ತಿಳಿಸಿದೆ.ಮೋದಿ ಸರ್ಕಾರದ ಉದ್ದೇಶ ಬಯಲು: ಕಾಂಗ್ರೆಸ್
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ. ಚಾರ್ಜ್‌ಶೀಟ್ ಸ್ವೀಕರಿಸಲು ನಿರಾಕರಿಸಿದ ದೆಹಲಿ ಕೋರ್ಟ್ ಕ್ರಮವನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸಿದೆ. ಜತೆಗೆ ಮೋದಿ ಸರ್ಕಾರದ ರಾಜಕೀಯ ಪ್ರೇರಿತ ಕಾನೂನು ಕ್ರಮ ಇದೀಗ ಬಯಲಾಗಿದೆ ಎಂದು ಆರೋಪಿಸಿದೆ.‘ಪ್ರಕರಣದಲ್ಲಿ ಮೋದಿ ಸರ್ಕಾರದ ದುರುದ್ದೇಶ ಬಯಲಾಗಿದೆ. ಇ.ಡಿ. ವ್ಯಾಪ್ತಿಗೆ ಈ ಪ್ರಕರಣ ಬರುವುದೇ ಇಲ್ಲ. ಕಳೆದೊಂದು ದಶಕದಿಂದ ಮೋದಿ ಸರ್ಕಾರ ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ರಾಜಕೀಯ ಪ್ರೇರಿತ ಕಾನೂನು ಕ್ರಮ ಇದಾಗಿದೆ. ಜನರ ಮುಂದೆ ಈಗ ಅದು ಬಯಲಾಗಿದೆ’ ಎಂದು ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ತಿಳಿಸಿದ್ದಾರೆ.