ಸಾರಾಂಶ
ಮಲ್ಪೆ : ಇಲ್ಲಿಗೆ ಸಮೀಪದ ಕೊಡವೂರು ಗ್ರಾಮದ ಮಲ್ಪೆ ಕಡಲ ತೀರದಲ್ಲಿ ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿ, ಶೆಡ್ ಹಾಗೂ ಮನೆಗಳನ್ನು ನಿರ್ಮಿಸಿಕೊಂಡಿರುವ ಸ್ಥಳಗಳನ್ನು ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲಾ ಆಡಳಿತದ ವತಿಯಿಂದ ಮಂಗಳವಾರ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
ಸರ್ಕಾರದ ಜಾಗವನ್ನು ಯಾವುದೇ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡುವಂತಿಲ್ಲ. ಒಂದು ವೇಳೆ ಒತ್ತುವರಿ ಮಾಡಿದಲ್ಲಿ ಅವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 192(ಎ) ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಕಲಂ 11 ರಂತೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಉಡುಪಿ ತಹಸೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.
ಮರಳು, ಮಣ್ಣು ಸಾಗಾಟಕ್ಕೆ ಸೂಚನೆ:
ಜಿಲ್ಲೆಯಲ್ಲಿ ಮರಳು ಮತ್ತು ಮಣ್ಣು ಸಾಗಾಟ ಮಾಡುವ ವಾಹನಗಳು ಟರ್ಪಾಲ್ ನಿಂದ ಮುಚ್ಚದೆ ಸಾಗಾಟ ಮಾಡುತ್ತಿರುವುದರಿಂದ, ಅದೇ ರಸ್ತೆಯಲ್ಲಿ ಸಂಚರಿಸುತ್ತಿರುವ ಇತರ ವಾಹನ ಚಾಲಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಮರಳು ಮತ್ತು ಮಣ್ಣು ಸಾಗಾಟ ಮಾಡುವ ವಾಹನಗಳು ಕಡ್ಡಾಯವಾಗಿ ಟರ್ಪಾಲ್‌ನಿಂದ ಮುಚ್ಚಿ ಸಾಗಾಟ ಮಾಡುವಂತೆ ಸಂಬಂಧಪಟ್ಟ ಎಲ್ಲಾ ವಾಹನ ಚಾಲಕರು ಹಾಗೂ ಮಾಲೀಕರು ಕ್ರಮವಹಿಸಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಿ ಅಂತಹ ವಾಹನಗಳ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.