ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಬಾರಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ಈಗ ಮತ್ತೊಮ್ಮೆ ಅಂತಹ ಸ್ಥಿತಿ ಎದುರಿಸಿದ್ದಾರೆ. ತುರ್ಕಮೇನಿಸ್ತಾನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿ ಮಾಡಲು ಷರೀಫ್‌ ಸುಮಾರು 40 ನಿಮಿಷ ಕಾದಿದ್ದಾರೆ

 ಅಶ್ಗಾಬಾತ್‌ (ತುರ್ಕಮೇನಿಸ್ತಾನ): ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಬಾರಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ಈಗ ಮತ್ತೊಮ್ಮೆ ಅಂತಹ ಸ್ಥಿತಿ ಎದುರಿಸಿದ್ದಾರೆ. ತುರ್ಕಮೇನಿಸ್ತಾನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿ ಮಾಡಲು ಷರೀಫ್‌ ಸುಮಾರು 40 ನಿಮಿಷ ಕಾದಿದ್ದಾರೆ. ಅಷ್ಟಾದರೂ ಅವಕಾಶ ಸಿಗದಾಗ ಟರ್ಕಿ ಅಧ್ಯಕ್ಷರ ಜತೆಗೆ ಪುಟಿನ್‌ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದ್ದ ಕೋಣೆಯೊಳಗೇ ನುಗ್ಗಿಬಿಟ್ಟಿದ್ದಾರೆ!

ಷರೀಫ್ ಪರದಾಟವು ನಗೆಪಾಟಲಿಗೆ ಕಾರಣವಾಗಿದೆ

ರಷ್ಯಾ ಮೂಲದ ‘ಆರ್‌ಟಿ ಇಂಡಿಯಾ’ ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಷರೀಫ್ ಪರದಾಟವು ನಗೆಪಾಟಲಿಗೆ ಕಾರಣವಾಗಿದೆ.

ಆಗಿದ್ದೇನು?:

ಪುಟಿನ್‌ ಅವರು ಟರ್ಕಿ ಅಧ್ಯಕ್ಷ ಎರ್ಡೋಗನ್‌ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ, ಷರೀಫ್‌ ಹಾಗೂ ಪಾಕ್‌ನ ವಿದೇಶಾಂಗ ಸಚಿವ ಇಶಾಕ್ ದಾರ್‌ ಇದ್ದಕ್ಕಿದ್ದಂತೆ ಒಳಹೋಗಿದ್ದಾರೆ. ಬಳಿಕ 10 ನಿಮಿಷದ ಬಳಿಕ ಪೇಲವ ಮುಖದೊಂದಿಗೆ ಎದ್ದು ಬರುವುದನ್ನು ಕಾಣಬಹುದಾಗಿದೆ. ಪುಟಿನ್‌ ಜತೆ ಅಲ್ಲಿ ಅವರು ಏನು ಮಾತನಾಡಿದರು ಎಂಬುದು ಸ್ಪಷ್ಟವಿಲ್ಲ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ‘ಪುಟಿನ್‌ಗೆ ಭಿಕ್ಷುಕರ ಭೇಟಿಯಲ್ಲಿ ಸಮಯ ವ್ಯರ್ಥಮಾಡಲು ಇಷ್ಟವಿರಲಿಲ್ಲವೇನೋ’ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ.

ಷರೀಫ್‌ರನ್ನು ಇಬ್ಬರೂ ಕಣ್ಣೆತ್ತಿ ನೋಡಿರಲಿಲ್ಲ

ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆವರು ಶೃಂಗವೊಂದರಲ್ಲಿ ಪುಟಿನ್‌ರನ್ನು ಭೇಟಿಯಾಗಿದ್ದಾಗ ಅಲ್ಲೇ ಇದ್ದ ಷರೀಫ್‌ರನ್ನು ಇಬ್ಬರೂ ಕಣ್ಣೆತ್ತಿ ನೋಡಿರಲಿಲ್ಲ. ಆಗಲೂ ಷರೀಫ್ ಮುಖಭಂಗ ಅನುಭವಿಸಿದ್ದರು.

- ತುರ್ಕಮೇನಿಸ್ತಾನದಲ್ಲಿ ನಿಗದಿಯಾಗಿತ್ತು ಅಂತಾರಾಷ್ಟ್ರೀಯ ಮಟ್ಟದ ಸಭೆ

- ಪುಟಿನ್‌ ಜತೆ ಶೆಹಬಾಜ್‌ ಸಭೆ ನಡೆಸಬೇಕಿತ್ತು. ಆದರೆ ಟರ್ಕಿ ಜತೆ ಅವರ ಸಭೆ

- 40 ನಿಮಿಷ ಪುಟಿನ್‌ಗಾಗಿ ಕಾದು ಕುಳಿತ ಶೆಹಬಾಜ್‌. ಆದರೂ ಮುಗಿಯದ ಸಭೆ

- ಸಿಟ್ಟಿನಿಂದ ರಷ್ಯಾ- ಟರ್ಕಿ ದ್ವಿಪಕ್ಷೀಯ ಸಭೆ ನಡೆವ ಕೋಣೆಗೇ ನುಗ್ಗಿದ ಷರೀಫ್‌

- ಹತ್ತೇ ನಿಮಿಷದಲ್ಲಿ ವಾಪಸ್‌. ಹೋಗುವ, ಬರುವ ವಿಡಿಯೋ ಭಾರಿ ವೈರಲ್‌