ಅಮೆರಿಕದ ‘ಸ್ಟ್ಯಾಚು ಆಫ್‌ ಲಿಬರ್ಟಿ’ಯನ್ನು ಹೋಲುವ ಬ್ರೆಜಿಲ್‌ನ ಗುಯಿಬಾದಲ್ಲಿರುವ 114 ಅಡಿ ಎತ್ತರದ ಪ್ರತಿಮೆಯು ಭೀಕರ ಬಿರುಗಾಳಿಯಿಂದಾಗಿ ಸೋಮವಾರ ಧರೆಗುರುಳಿದೆ. ಆದರೆ ಇದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಆಡಳಿತ ಮತ್ತು ಪ್ರತಿಮೆಯ ಮಾಲೀಕ ಕಂಪನಿ ಹೇಳಿದೆ.

ಗುಯಿಬಾ: ಅಮೆರಿಕದ ‘ಸ್ಟ್ಯಾಚು ಆಫ್‌ ಲಿಬರ್ಟಿ’ಯನ್ನು ಹೋಲುವ ಬ್ರೆಜಿಲ್‌ನ ಗುಯಿಬಾದಲ್ಲಿರುವ 114 ಅಡಿ ಎತ್ತರದ ಪ್ರತಿಮೆಯು ಭೀಕರ ಬಿರುಗಾಳಿಯಿಂದಾಗಿ ಸೋಮವಾರ ಧರೆಗುರುಳಿದೆ. ಆದರೆ ಇದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಆಡಳಿತ ಮತ್ತು ಪ್ರತಿಮೆಯ ಮಾಲೀಕ ಕಂಪನಿ ಹೇಳಿದೆ.

 ರಸ್ತೆಯ ಮಧ್ಯದಲ್ಲಿರುವ ಈ ಪ್ರತಿಮೆಯು, ಗಂಟೆಗೆ 90 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿಯಿಂದಾಗಿ ಕೊಂಚಕೊಂಚವೇ ಮುಂದೆ ಬಾಗಿ, ಕೊನೆಗೆ ತಲೆಕೆಳಗಾಗಿ ಬಿಳುವ ದೃಶ್ಯಾವಳಿಗಳು ಭಾರೀ ವೈರಲ್‌ ಆಗಿವೆ. ಏಕಾಏಕಿ ಬಿದ್ದ ಪರಿಣಾಮ, ಪ್ರತಿಮೆಯ (ತಲೆ ಭಾಗದಿಂದ) 78 ಅಡಿಗೆ ಹಾನಿಯಾಗಿದ್ದು, 36 ಅಡಿ ಉದ್ದದ ಪೀಠಕ್ಕೆ ಯಾವುದೇ ಹಾನಿಯಾಗಿಲ್ಲ. ಪ್ರತಿಮೆ ಬೀಳುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ, ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಈ ದುರ್ಘಟನೆಗೆ ಹವಾಮಾನ ವೈಪರೀತ್ಯವನ್ನು ಹೊರತುಪಡಿಸಿ ಬೇರೇನಾದರೂ ಕಾರಣ ಇದೆಯೇ ಎಂದು ಪರಿಶೀಲಿಸಲು ತಾಂತ್ರಿಕ ತಪಾಸಣೆ ನಡೆಸಲಾಗುವುದು.

ಮಸ್ಕ್‌ ಈಗ $60 ಶತಕೋಟಿ ಒಡೆಯ: ವಿಶ್ವದಲ್ಲೇ ಮೊದಲ ವ್ಯಕ್ತಿ

ವಾಷಿಂಗ್ಟನ್‌: ವಿಶ್ವದ ನಂ.1 ಶ್ರೀಮಂತನ ಪಟ್ಟಕ್ಕೆ ಈಗಾಗಳೇ ಏರಿದ್ದ ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌, ಇದೀಗ 60 ಶತಕೋಟಿ ಡಾಲರ್‌ (54.5 ಲಕ್ಷ ಕೋಟಿ ರು.) ಮೌಲ್ಯದ ಆಸ್ತಿ ಹೊಂದುವ ಮೂಲಕ, ಈ ಸಾಧನೆ ಮಾಡಿದ ಮೊದಲಿಗ ಎನಿಸಿಕೊಂಡಿದ್ದಾರೆ.

ಮಸ್ಕ್‌ ಒಡೆತನದ 72 ಲಕ್ಷ ಕೋಟಿ ರು. ಮೌಲ್ಯದ ಸ್ಪೇಸ್‌ಎಕ್ಸ್‌ ಕಂಪನಿ 2026ರಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶಿಸಲು ಮುಂದಾಗಿರುವುದೇ ಅವರ ಸಿರಿವಂತಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಫೋರ್ಬ್ಸ್ ಹೇಳಿದೆ. ಈ ಕಂಪನಿಯಲ್ಲಿ ಮಸ್ಕ್‌ ಶೇ.42ರಷ್ಟು ಪಾಲು ಹೊಂದಿದ್ದಾರೆ. ಷೇರು ಮಾರುಕಟ್ಟೆ ಪ್ರವೇಶದಿಂದ ಅವರ ಸಂಪತ್ತಿಗೆ 15 ಲಕ್ಷ ಕೋಟಿ ರು. ಸೇರ್ಪಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.ಅತ್ತ ಮಸ್ಕ್‌ ಶೇ.12ರಷ್ಟು ಪಾಲು ಹೊಂದಿರುವ 17 ಲಕ್ಷ ಕೋಟಿ ರು. ಮೌಲ್ಯದ ಟೆಸ್ಲಾದ ಷೇರುಗಳ ಬೆಲೆಯಲ್ಲಿ ಶೇ.13ರಷ್ಟು ಏರಿಕೆಯಾಗಿರುವುದು ಕೂಡ ಮಸ್ಕ್‌ ಸಂಪತ್ತು ವೃದ್ಧಿಗೆ ಕಾರಣವಾಗಿದೆ.

ಹೊಗೆಮಾಲಿನ್ಯದಿಂದ 11 ವಾಹನ ಸರಣಿ ಡಿಕ್ಕಿ: 13 ಸಾವು

ಮಥುರಾ: ವಾಯುಮಾಲಿನ್ಯದ ಕಾರಣ ಗೋಚರತೆ ನಷ್ಟವಾಗಿ 8 ಬಸ್‌ಗಳು ಹಾಗೂ 3 ಸಣ್ಣ ವಾಹನಗಳು ಸರಣಿಯಾಗಿ ಒಂದಕ್ಕೊಂದು ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಮಂಗಳವಾರ ನಡೆದಿದೆ. ಇದರಿಂದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯಗಳಿಂದ 13 ಜನ ಮೃತರಾಗಿದ್ದಾರೆ. 25 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನ ಆಗ್ರಾ-ನೊಯ್ಡಾ ಮಾರ್ಗದಲ್ಲಿ ದಟ್ಟ ಹೊಗೆ ವಾತಾವರಣವನ್ನು ವ್ಯಾಪಿಸಿತ್ತು. ಮಂಗಳವಾರ ಮುಂಜಾನೆ 4.30ರ ಸುಮಾರಿಗೆ ದಾರಿಯೇ ಕಾಣದೆ ವಾಹನವೊಂದು ಮತ್ತೊಂದಕ್ಕೆ ಡಿಕ್ಕಿ ಹೊಡೆದಿದೆ. ಇದು ಮತ್ತಷ್ಟು ವಾಹನಗಳಿಗೆ ಡಿಕ್ಕಿ ಹೊಡೆದು ಕೆಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ 13 ಜನ ಸಜೀವ ದಹನವಾಗಿದ್ದಾರೆ. ಗಾಯಗೊಂಡ 25 ಮಂದಿಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದಿಲ್ಲಿ ಹವಾಮಾನ ವಿಷಮ: 126 ವಿಮಾನ ಸಂಚಾರ ರದ್ದು

ನವದೆಹಲಿ: ಸೋಮವಾರ 500 ಅಂಕದ ಗಡಿ ದಾಟಿದ್ದ ದಿಲ್ಲಿ ವಾಯುಗುಣಮಟ್ಟ ಸೂಚ್ಯಂಕ ಮಂಗಳವಾರ ಕೊಂಚ ಸುಧಾರಣೆಯಾಗಿ 377 ಅಂಕಕ್ಕೆ ಇಳಿದಿದೆ. ಆದರರೂ ದಟ್ಟವಾದ ಹೊಗೆ ನಗರವನ್ನು ಆವರಿಸಿದ್ದು, ಸ್ಪಷ್ಟ ಗೋಚರತೆ ಇಲ್ಲವಾದ ಕಾರಣ ದೆಹಲಿಯಲ್ಲಿ 126 ವಿಮಾನ ಸಂಚಾರ ರದ್ದುಗೊಳಿಸಲಾಗಿದೆ.ಈ ಪೈಕಿ ದೆಹಲಿಗೆ ಬರಬೇಕಿದ್ದ 77 ಮತ್ತು ಹೊರಡಬೇಕಿದ್ದ 49 ವಿಮಾನಗಳನ್ನು ರದ್ದುಪಡಿಸಲಾಗಿದೆ. ಇನ್ನು, ಇಂಡಿಗೋ ಏರ್‌ಲೈನ್ಸ್‌, ದೆಹಲಿ ವಾತಾವರಣದ ಕಾರಣದಿಂದ ಬೇರೆ ಬೇರೆ ಕಡೆಗಳಲ್ಲಿ ತನ್ನ 110 ವಿಮಾನಗಳನ್ನು ರದ್ದುಪಡಿಸಿದೆ.

ವಿಮಾ ವಲಯದಲ್ಲಿ 100% ವಿದೇಶಿ ನೇರ ಹೂಡಿಕೆಗೆ ಲೋಕಸಭೆ ಅನುಮೋದನೆನವದೆಹಲಿ: ದೇಶದ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು(ಎಫ್‌ಡಿಎ) ಶೇ.100ಕ್ಕೆ ಏರಿಸುವ ಮಸೂದೆಗೆ ಮಂಗಳವಾರ ಲೋಕಸಭೆಯಲ್ಲಿ ಅನುಮೋದನೆ ಲಭಿಸಿದೆ.ವಿಪಕ್ಷದ ವಿರೋಧದ ನಡುವೆಯೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇದನ್ನು ಸದನದಲ್ಲಿ ಮಂಡಿಸಿದರು. ಕೊನೆಗೆ ಧ್ವನಿಮತದ ಅನುಮೋದನೆ ಸಿಕ್ಕಿತು.ಹಣಕಾಸು ಕ್ಷೇತ್ರದ ಸುಧಾರಣೆಯ ಭಾಗವಾಗಿ, ಪ್ರಸ್ತುತ ಇರುವ ಶೇ.74 ಎಫ್‌ಡಿಐ ಪ್ರಮಾಣವನ್ನು ಶೇ.100ಕ್ಕೆ ಏರಿಸುವ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದರು. ಈ ಮಸೂದೆಗೆ ಡಿ.12ರಂದು ಸಚಿವಸಂಪುಟದ ಅನುಮೋದನೆ ಸಿಕ್ಕಿತ್ತು.