ಸಾರಾಂಶ
ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಬಹುತೇಕ ಗ್ರಾಮಗಳ ಜನರು ಕತ್ತಲೆಯಲ್ಲಿ ಕಳೆಯುವಂತಾಗಿದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನಾದ್ಯಂತ ಬಿರುಗಾಳಿ ಸಮೇತ ಕಳೆದ ಮುರ‍್ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ತಾಲೂಕಿನ ಬಹುತೇಕ ಗ್ರಾಮಗಳ ಜನರು ಕತ್ತಲೆಯಲ್ಲಿ ಕಳೆಯುವಂತಾಗಿದೆ.ಗ್ರಾಮೀಣ ಭಾಗದಲ್ಲಿ ಮರಗಿಡಗಳು ಬುಡಸಮೇತ ಬೀಳುತ್ತಿತ್ತು. ಕೃಷಿ ಭೂಮಿಗೆ ತೆರಳಲು ಕೃಷಿಕರು ಮತ್ತು ಕಾರ್ಮಿಕರು ಭಯಪಡುವಂತಾಗಿದೆ. ಅಲ್ಲಲ್ಲಿ ರಸ್ತೆಗಳಲ್ಲಿ ಮರಗಳು ಬೀಳುತ್ತಿದ್ದು ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಬಹುತೇಕ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ನಾಲ್ಕೈದು ಇಂಚಿನಷ್ಟು ಮಳೆಯಾಗಿರುವ ಬಗ್ಗೆ ರೈತರು ತಿಳಿಸಿದ್ದಾರೆ.ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ವಿದ್ಯುತ್ ಮಾರ್ಗಗಳನ್ನು ಸರಿಪಡಿಸಲು ಸೆಸ್ಕ್ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಸೋಮವಾರಪೇಟೆ, ಶಾಂತಳ್ಳಿ, ಸಕಲೇಶಪುರ, ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಜೇಡಿಗುಂಡಿ ಬಳಿ ಬರೆ ಕುಸಿಯಲು ಪ್ರಾರಂಭಿಸಿದೆ. ರಸ್ತೆ ಬಂದ್ ಆಗುವ ಎಲ್ಲಾ ಸೂಚನೆಗಳು ಸಿಕ್ಕಿವೆ. ಜೇಡಿಗುಂಡಿಯ ಶರಣ್ ಎಂಬುವರ ವಾಹನದ ಮೇಲೆ ಮರ ಬಿದ್ದು ಹಾನಿಯಾಗಿರುವ ಕುರಿತು ವರದಿಯಾಗಿದೆ. ಕುಂಬೂರು ಸಮೀಪದ ಜಂಬೂರು ತೋಟದಿಂದ ಬರುತ್ತಿದ್ದ ಆಟೋದ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಆಟೋ ಸಂಪೂರ್ಣ ಜಖಂಗೊಂಡಿದೆ. ಚಾಲಕ ಪ್ರವೀಣ್ ಹಾಗೂ ಪ್ರಯಾಣಿಸುತ್ತಿದ್ದ ಯುವತಿಯೋರ್ವಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಂಬೂರು ರಾಜ್ಯ ಹೆದ್ದಾರಿಯಲ್ಲಿ ಮರ ಉರುಳಿ ಬಿದ್ದಿದ್ದು, ಮಾಜಿ ಸಚಿವ ಅಪ್ಪಚ್ಚುರಂಜನ್‌ರವರ ತೋಟದ ಕಾರ್ಮಿಕರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.