ಮತಚೋರಿ ವಿರುದ್ಧ ಇಂದು ಇಂಡಿಯಾ ಕೂಟ ಪ್ರತಿಭಟನಾ ಮೆರವಣಿಗೆ

KannadaprabhaNewsNetwork |  
Published : Aug 11, 2025, 12:30 AM ISTUpdated : Aug 11, 2025, 05:13 AM IST
ಪ್ರತಿಭಟನೆ | Kannada Prabha

ಸಾರಾಂಶ

ಚುನಾವಣೆಗಳಲ್ಲಿ ಬಿಜೆಪಿ ಜತೆ ಸೇರಿಕೊಂಡು ಚುನಾವಣಾ ಆಯೋಗ ಅಕ್ರಮ ಎಸಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌, ತನ್ನ ಇಂಡಿಯಾ ಮಿತ್ರಪಕ್ಷಗಳ ಸಂಸದರ ಜತೆ ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿ ವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.

  ನವದೆಹಲಿ :  ಚುನಾವಣೆಗಳಲ್ಲಿ ಬಿಜೆಪಿ ಜತೆ ಸೇರಿಕೊಂಡು ಚುನಾವಣಾ ಆಯೋಗ ಅಕ್ರಮ ಎಸಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌, ತನ್ನ ಇಂಡಿಯಾ ಮಿತ್ರಪಕ್ಷಗಳ ಸಂಸದರ ಜತೆ ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿ ವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಇಂಡಿಯಾ ಕೂಟದ ಪಕ್ಷಗಳ ಪ್ರಮುಖ ನಾಯಕರ ನೇತೃತ್ವದಲ್ಲಿ ಬೆಳಗ್ಗೆ 11.30ರ ಸಮಾರಿಗೆ ಪ್ರತಿಭಟನೆ ನಡೆಯಲಿದೆ. ಅಂತೆಯೇ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇನ್ನಿಬ್ಬರು ಚುನಾವಣಾ ಆಯುಕ್ತರ ಭೇಟಿ ಆಗುವ ಸಾಧ್ಯತೆಯೂ ಇದೆ.

ಔತಣ ಸಭೆ:

ಅತ್ತ ಅದೇ ಸಂಜೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಕೂಟದ ಸಂಸದರಿಗಾಗಿ ತಾಜ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ ಭೋಜನ ಕೂಟ ಆಯೋಜಿಸಲಿದ್ದಾರೆ. ಈ ಮೂಲಕ, ಚುನಾವಣಾ ಅಕ್ರಮದ ವಿರುದ್ಧದ ಹೋರಾಟದಲ್ಲಿ ಇಂಡಿಯಾ ಕೂಟದ ಸದಸ್ಯ ಪಕ್ಷಗಳು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿವೆ. 

ಕಾಂಗ್ರೆಸ್‌ ಪ್ರತ್ಯೇಕ ಸಭೆ:

ಇನ್ನು ಮತ ಅಕ್ರಮ ವಿರುದ್ಧ ದೇಶವ್ಯಾಪಿ ಆಂದೋಲನಕ್ಕೆ ಕಾಂಗ್ರೆಸ್ ಚಿಂತಿಸುತ್ತಿದೆ. ಈ ಕುರಿತು ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು ಮತ್ತು ಪ್ರಮುಖ ನಾಯಕರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಸಂಜೆ 4.30ಕ್ಕೆ ಸಭೆ ಸೇರಲಿದ್ದಾರೆ.

ಮತಚೋರಿ ವಿರೋಧಿಸಿ ಕೈ ವೆಬ್‌ ಪೋರ್ಟಲ್‌ ಅಭಿಯಾನ

 ನವದೆಹಲಿ : ಚುನಾವಣಾ ಆಯೋಗದ ವಿರುದ್ಧ ಅಕ್ರಮವೆಸಗಿರುವ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಇದೀಗ ತಮ್ಮ ಹೋರಾಟಕ್ಕೆ ಸಾರ್ವಜನಿಕರ ಬೆಂಬಲ ಯಾಚಿಸಲು ವೆಬ್‌ ಪೋರ್ಟಲ್‌ ಒಂದನ್ನು ಬಿಡುಗಡೆ ಮಾಡಿದೆ. votechori.in/ecdemand ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಸಾರ್ವಜನಿಕರು, ಆಯೋಗದ ವಿರುದ್ಧದ ಹೋರಾಟದ ಭಾಗವಾಗಬಹುದು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಮತ ಕಳ್ಳತನವು ಎಂಬುದು ಪ್ರಜಾಪ್ರಭುತ್ವ ಮೂಲಭೂತ ತತ್ವವಾದ ಒಬ್ಬ ವ್ಯಕ್ತಿ, ಒಂದು ಮತದ ಮೇಲಿನ ದಾಳಿ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಅಕ್ರಮರಹಿತ ಮತಪಟ್ಟಿ ಅತ್ಯಗತ್ಯ. ಆದ್ದರಿಂದ ಚುನಾವಣಾ ಆಯೋಗದ ಬಳಿ ಡಿಜಿಟಲ್ ಮತದಾರರ ಪಟ್ಟಿಯನ್ನು ಸಾರ್ವಜನಿಕಗೊಳಿಸುವಂತೆ ಕೇಳಿಕೊಳ್ಳುತ್ತಿದ್ದೇವೆ. ಇದು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಹೋರಾಟವಾಗಿದೆ’ ಎಂದರು.

‘ವೋಟ್‌ಚೋರಿ’ ಪೋರ್ಟಲ್‌ನಲ್ಲಿ, ಮತಗಳ್ಳತನ ಮತ್ತು ಕಾಂಗ್ರೆಸ್‌ ಆರೋಪಗಳಿಗೆ ಸಂಬಂಧಿಸಿದ ಕಡತಗಳನ್ನು ಪಡೆಯಬಹುದು. ಇದರಲ್ಲಿ, ಬೆಂಗಳೂರು ಸೆಂಟ್ರಲ್‌ ವ್ಯಾಪ್ತಿಯಲ್ಲಿ ಬರುವ ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷ ಮತಚೋರಿ ಆಗಿದೆ ಎಂದು ರಾಹುಲ್‌ ಮಾಡಿದ ಆರೋಪಗಳ ವಿಡಿಯೋ ಕೂಡ ಲಭ್ಯವಿದೆ. ಇದರಲ್ಲಿ ನೋಂದಾಯಿಸಿಕೊಂಡವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕೋಶಾಧಿಕಾರಿ ಅಜಯ್‌ ಮಾಖನ್‌ ಅವರ ಸಹಿಯಿರುವ ತಮ್ಮ ಹೆಸರಿನ ಪ್ರಮಾಣಪತ್ರವನ್ನು ಪಡೆಯಬಹುದುಈಗಾಗಲೇ ಹಲವು ಕಾಂಗ್ರೆಸ್‌ ನಾಯಕರು ಮತ್ತು ಬೆಂಬಲಿಗರು ನೋಂದಣಿಯಾಗಿ, ಪ್ರಮಾಣಪತ್ರಗಳನ್ನು ಹಂಚಿಕೊಂಡಿದ್ದಾರೆ.

PREV
Read more Articles on

Recommended Stories

ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್‌
ಪಾಕ್‌ನ ಭಾರತ ದೂತರಿಗೆಪತ್ರಿಕೆ, ಗ್ಯಾಸ್‌, ನೀರು ಕಟ್‌ - ಮತ್ತೆ ರಾಜತಾಂತ್ರಿಕ ಸಮರ