ಪಟ್ಟನಂತಿಟ್ಟ: ‘ಕೇರಳದ ಜನಪ್ರಿಯ ಪಕ್ಷವೊಂದರ ಯುವ ನಾಯಕರೊಬ್ಬರು ನನ್ನೊಂದಿಗೆ ಕಳೆದ 3 ವರ್ಷಗಳಿಂದ ಅನುಚಿತವಾಗಿ ವರ್ತಿಸುತ್ತಿದ್ದಾರೆ’ ಎಂದು ನಟಿ ರಿನಿ ಜಾರ್ಜ್ ಆರೋಪಿಸಿದ್ದಾರೆ. ಜತೆಗೆ, ಈ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಂತೆ ತಮ್ಮ ಮೇಲೆ ಸೈಬರ್ ದಾಳಿ ಆಗಿದೆ ಎಂದು ಹೇಳಿದ್ದಾರೆ.
ನಟಿಯ ಆರೋಪದ ಬೆನ್ನಲ್ಲೇ ಬಿಜೆಪಿಯಿಂದ ಒತ್ತಡ ಹೆಚ್ಚಾದ ಕಾರಣ, ಪಾಲಕ್ಕಾಡ್‌ನ ಕಾಂಗ್ರೆಸ್ ಶಾಸಕ, ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಮಕೂಟಥಿಲ್ ಅವರು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ‘ರಿನಿ ನನ್ನ ಸ್ನೇಹಿತೆ. ಆಕೆ ನನ್ನ ಮೇಲೆ ಆರೋಪಗಳನ್ನು ಮಾಡಿಲ್ಲ’ ಎಂದೂ ಹೇಳಿದ್ದಾರೆ.
ರಿನಿ ಆರೋಪವೇನು?: ಬುಧವಾರ ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಿನಿ, ‘ಸಾಮಾಜಿಕ ಮಾಧ್ಯಮಗಳ ಮೂಲಕ ಆ ರಾಜಕಾರಣಿಯೊಂದಿಗೆ ಸಂಪರ್ಕ ಬೆಳೆಯಿತು. ಕಳೆದ 3 ವರ್ಷಗಳಿಂದ ಅವರು ನನಗೆ ಅನುಚಿತ ಸಂದೇಶ ಕಳಿಸುತ್ತಿದ್ದಾರೆ. ಮೊದಲ ಬಾರಿ ಅವರು ಹಾಗೆ ಮಾಡಿದಾಗ, ಅದನ್ನು ಬಹಿರಂಗಪಡಿಸುವುದಾಗಿ ನಾನು ಎಚ್ಚರಿಸಿದ್ದೆ. ಅದಕ್ಕವರು, ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಉಡಾಫೆಯ ಉತ್ತರ ಕೊಟ್ಟಿದ್ದರು’ ಎಂದು ಆರೋಪಿಸಿದ್ದರು.
ಜತೆಗೆ, ‘ಅವರಿಂದ ನನ್ನ ಮೇಲೆ ಹಲ್ಲೆಯಾಗಿಲ್ಲ. ಆದರೆ ಇನ್ನೊಮ್ಮೆ 5 ಸ್ಟಾರ್ ಹೋಟೆಲ್‌ಗೆ ಕರೆದಿದ್ದರು. ನಾನು ಗಂಭೀರವಾಗಿ ಪ್ರತಿಕ್ರಿಯಿಸಿದ್ದರಿಂದ ಸ್ವಲ್ಪ ದಿನ ಸುಮ್ಮನಾದರು. ಆದರೆ ಮತ್ತೆ ಅಸಭ್ಯ ಸಂದೇಶ ಕಳಿಸತೊಡಗಿದರು. ಈ ಬಗ್ಗೆ ಪಕ್ಷದ ಹಿರಿಯರಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಆ ವ್ಯಕ್ತಿಗೆ ಉನ್ನತ ಹುದ್ದೆ ನೀಡಿದರು’ ಎಂದು ಹೇಳಿದರು. ತಮಗೆ ಪಕ್ಷದ ಹೆಸರಿಗೆ ಕಳಂಕ ತರಲು ಇಷ್ಟವಿಲ್ಲವಾದ ಕಾರಣ, ಅವರ ಹೆಸರನ್ನು ಹೇಳದೇ ಇರಲು ನಿರ್ಧರಿಸಿರುವುದಾಗಿಯೂ ನಟಿ ತಿಳಿಸಿದರು.
ದೂರು ಏಕೆ ದಾಖಲಿಸಿಲ್ಲ?:
ಇಷ್ಟೇಲ್ಲಾ ಸಮಸ್ಯೆ ಅನುಭವಿಸಿದ್ದರೂ ರಿನಿ ಈ ಬಗ್ಗೆ ದೂರು ದಾಖಲಿಸಿಲ್ಲ. ಕಾರಣ ಕೇಳಿದರೆ, ‘ನಾನು ಹಾಗೆ ಮಾಡಿದರೆ ನನಗೆ ತೊಂದರೆಯಿದೆ. ನನ್ನಂತೆ ಅನೇಕ ಮಹಿಳೆಯರಿಗೆ ಆ ರಾಜಕಾರಣಿಯಿಂದ ಸಮಸ್ಯೆಯಾಗುತ್ತಿರುವುದು ತಿಳಿಯಿತು. ಹಾಗಾಗಿ ಅವರೆಲ್ಲರ ಪರವಾಗಿ ಮಾತನಾಡುತ್ತಿದ್ದೇನೆ’ ಎಂದರು.