ನವದೆಹಲಿ: ನಮ್ಮ ನೆಲದಿಂದಲೇ ಒಬ್ಬರು, ನಮ್ಮದೇ ಕ್ಯಾಪ್ಸೂಲ್‌ನಲ್ಲಿ ಕುಳಿತು, ನಮ್ಮದೇ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ತೆರಳುವ ದಿನ ಸನಿಹದಲ್ಲಿದೆ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಭರವಸೆ ವ್ಯಕ್ತಪಡಿಸಿದ್ದಾರೆ.
ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿ ಹಲವು ಸಂಶೋಧನೆಗಳನ್ನು ಮಾಡಿ ಭೂಮಿಗೆ ವಾಪಸಾಗಿರುವ ಅವರು ಸದ್ಯ ಸ್ವದೇಶ ಭಾರತದಲ್ಲಿದ್ದಾರೆ.ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶುಕ್ಲಾ, ‘ನೀವು ಎಷ್ಟೇ ತರಬೇತಿ ಪಡೆದಿದ್ದರೂ, ರಾಕೆಟ್ ಒಳಗೆ ಕೂತು, ಅದು ಬೆಂಕಿಯುಗುಳುತ್ತಾ ಮೇಲಕ್ಕೆ ಚಿಮ್ಮುವಾಗಿನ ಅನುಭವವೇ ಬೇರೆ. ಆ ಅನುಭವ ಹೇಗಿರುತ್ತದೆ ಎಂಬುದು ನನ್ನ ಊಹೆಗೂ ನಿಲುಕದ್ದಾಗಿತ್ತು. ಇನ್ನೇನು ಸದ್ಯದಲ್ಲೇ ನಮ್ಮ ನೆಲದಿಂದಲೇ ಒಬ್ಬರು, ನಮ್ಮದೇ ಕ್ಯಾಪ್ಸೂಲ್‌ನಲ್ಲಿ ಕುಳಿತು, ನಮ್ಮದೇ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ’ ಎಂದರು.
ಈ ವೇಳೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಗ್ರುಪ್ ಕ್ಯಾಪ್ಟನ್ ಪ್ರಶಾಂತ್ ಬಿ. ನಾಯರ್ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಸೆ.2ಕ್ಕೆ ಆ್ಯಪಲ್ ಮೊದಲ ಮಳಿಗೆ
ಬೆಂಗಳೂರು: ಟೆಕ್ ದಿಗ್ಗಜ ಆ್ಯಪಲ್ ಭಾರತದಲ್ಲಿ ತನ್ನ ಮೂರನೇ ಮಳಿಗೆ ಪ್ರಾರಂಭಕ್ಕೆ ಸಜ್ಜಾಗಿದ್ದು, ಇದೇ ಸೆ.2ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಹೊಸ ಶಾಖೆ ಆರಂಭಿಸಲಿದೆ. ಹೆಬ್ಬಾಳದಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಪ್ರಾರಂಭವಾಗಲಿದೆ.ಆ್ಯಪಲ್ ಕಂಪನಿ ಈಗಾಗಲೇ ವಾಣಿಜ್ಯ ನಗರಿ ಮುಂಬೈ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಶಾಖೆಯನ್ನು ಹೊಂದಿದ್ದು, ಇದೀಗ ಕರ್ನಾಟಕಕ್ಕೂ ವಿಸ್ತರಿಸಲಿದೆ. ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಶಾಖೆ ಆರಂಭವಾಗಲಿದ್ದು, ಇಲ್ಲಿ ಇತರ ಮಳಿಗೆಗಳ ರೀತಿಯಲ್ಲಿ ಗ್ರಾಹಕರಿಗೆ ಐಫೋನ್, ಮ್ಯಾಕ್, ಐಪ್ಯಾಡ್ ಸೇರಿದಂತೆ ಕಂಪನಿಯ ಎಲ್ಲಾ ಉತ್ಪನ್ನಗಳು ಸಿಗಲಿದೆ. ಇನ್ನು ಗ್ರಾಹಕ ಸ್ನೇಹಿ ವಾತಾವರಣ ಉತ್ತೇಜಿಸುವ ಸಲುವಾಗಿ ಹೊಸ ಶಾಖೆಯು ಡೆಲಿವರಿ ಅವಕಾಶವನ್ನೂ ನೀಡಿದ್ದು, ಆ್ಯಪಲ್ ಇಂಡಿಯಾ ಅನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಗ್ರಾಹಕರಿಗೆ ಹೆಬ್ಬಾಳದಿಂದ ಗ್ರಾಹಕರ ವಿಳಾಸಕ್ಕೆ ಉತ್ಪನ್ನಗಳು ತಲುಪಲಿದೆ.
ಹಿಂದಿ ಬಿಗ್‌ಬಾಸ್-19ಕ್ಕೆ ಬಾಕ್ಸರ್ ಮೈಕ್ ಟೈಸನ್, ಅಂಡರ್‌ಟೇಕರ್ ಎಂಟ್ರಿ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನ 19ನೇ ಆವೃತ್ತಿ ಆ.24ರಿಂದ ಆರಂಭವಾಗಲಿದ್ದು, ವಿಶ್ವ ಶ್ರೇಷ್ಠ ಮಾಜಿ ಬಾಕ್ಸರ್ ಮೈಕ್ ಟೈಸನ್ ಮತ್ತು ಡಬ್ಲ್ಯುಡಬ್ಲ್ಯುಡಬ್ಲು ಖ್ಯಾತಿಯ ಅಂಡರ್‌ಟೇಕರ್ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ 15 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಬಳಿಕ 3 ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ನೀಡಲಿದ್ದಾರೆ. ಬಾಕ್ಸಿಂಗ್ ದಿಗ್ಗಜ ಟೈಸನ್ ಅಕ್ಟೋಬರ್‌ನಲ್ಲಿ 7ರಿಂದ 10 ದಿನಗಳ ಕಾಲ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.