ತಿರುವನಂತಪುರ: ಕಳೆದ ಚುನಾವಣೆಯಲ್ಲಿ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿ ನೆರೆಯ ಕರ್ನಾಟಕದಿಂದ ಕಣಕ್ಕೆ ಇಳಿಯಲಿದ್ದಾರೆಯೇ? ಇಂಥದ್ದೊಂದು ಸಲಹೆ ಇಂಡಿಯಾ ಮೈತ್ರಿಕೂಟದಿಂದ ಕೇಳಿಬಂದಿರುವುದರ ಜೊತೆಗೆ, ಸ್ವತಃ ಕಾಂಗ್ರೆಸ್ ವಲಯದಲ್ಲೂ ಅಂಥದ್ದೊಂದು ಮಾತುಗಳು ಕೇಳಿಬರುತ್ತಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಕಳೆದ ವಾರವಷ್ಟೇ ವಯನಾಡಿಗೆ ಭೇಟಿ ನೀಡಿದ್ದ ರಾಹುಲ್, ‘ವಯನಾಡು ನನಗೆ ಮನೆ ಮತ್ತು ಕುಟುಂಬ ಇದ್ದಂತೆ’ ಎನ್ನುವ ಮೂಲಕ ಮತ್ತೆ ಅಲ್ಲೇ ಸ್ಪರ್ಧಿಸುವ ಸುಳಿವು ನೀಡಿದ್ದರು.ಆದರೆ ಭಾನುವಾರ ಪ್ರಕಟವಾದ ಪಂಚರಾಜ್ಯಗಳ ಚುನಾವಣೆಯಲ್ಲಿನ ಕಾಂಗ್ರೆಸ್ ಸೋಲು, ಕೇರಳದಿಂದ ರಾಹುಲ್ ಗಾಂಧಿ ಮರು ಸ್ಪರ್ಧೆಗೆ ವಿರೋಧ ವ್ಯಕ್ತವಾಗಲು ಕಾರಣವಾಗಿದೆ.‘ನಾವು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದೇವೆ. ಹೀಗಿರುವಾಗ ನಮ್ಮ ಪ್ರಾಬಲ್ಯ ಇರುವ ಕೇರಳದಲ್ಲೇ ರಾಹುಲ್ ಸ್ಪರ್ಧೆ ಮಾಡುವುದು ಸರಿಯಲ್ಲ. ಇಂಡಿಯಾ ಮೈತ್ರಿಕೂಟ ಹೋರಾಡುತ್ತಿರುವುದು ಬಿಜೆಪಿ ವಿರುದ್ಧ. ಹೀಗಾಗಿ ರಾಹುಲ್ ಕರ್ನಾಟಕ ಅಥವಾ ಬಿಜೆಪಿ ಶಕ್ತಿ ಹೆಚ್ಚಿರುವ ರಾಜ್ಯಗಳಲ್ಲಿ ಸ್ಪರ್ಧೆ ಮಾಡುವುದು ಸೂಕ್ತ’ ಎಂದು ಸಿಪಿಐ ಪ್ರದಾನ ಕಾರ್ಯದರ್ಶಿ ಡಿ.ರಾಜಾ, ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಎಂ.ವಿ.ಗೋವಿಂದನ್, ಕೇರಳದ ಸಚಿವ ಕೆ.ರಾಜನ್ ಮೊದಲಾದವರ ಬಹಿರಂಗವಾಗಿಯೇ ಸಲಹೆ ನೀಡಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಮೈತ್ರಿಕೂಟದ ಅವಶ್ಯಕತೆ ಇಲ್ಲ ಎಂದಾದಲ್ಲಿ ಕೇರಳದಲ್ಲಿ ಎಲ್‌ಡಿಎಫ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ನಾವಂತೂ ವಯನಾಡಿನಲ್ಲಿ ಎಲ್‌ಡಿಎಫ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದೇವೆ. ರಾಹುಲ್ ಬಿಜೆಪಿ ವಿರುದ್ಧ ಹೋರಾಡಬೇಕೋ ಅಥವಾ ಎಲ್‌ಡಿಎಫ್ ವಿರುದ್ಧವೋ ಎಂಬುದನ್ನು ಸ್ವತಃ ಕಾಂಗ್ರೆಸ್ ನಿರ್ಧರಿಸಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.ಇನ್ನೊಂದೆಡೆ, ‘ರಾಹುಲ್ ಗಾಂಧಿ ಬಿಜೆಪಿಯ ಬಲಪಂಥೀಯವಾದದ ವಿರುದ್ಧ ಹೋರಾಡಬೇಕೇ ವಿನಃ, ರಾಜಕೀಯ ಪಕ್ಷಗಳ ಅಂತಾರಾಜ್ಯ ದ್ವೇಷದ ವಿರುದ್ಧ ಅಲ್ಲ’ ಎಂದು ಸಿಪಿಎಂ ನಾಯಕ ಗೋವಿಂದನ್ ಸಲಹೆ ನೀಡಿದ್ದಾರೆ.ಸಚಿವ ರಾಜನ್ ಮಾತನಾಡಿ ‘ರಾಹುಲ್ ದಕ್ಷಿಣದ ರಾಜ್ಯದಿಂದಲೇ ಸ್ಪರ್ಧಿಸುವ ಇರಾದೆ ಹೊಂದಿದ್ದರೆ ಕೇರಳದ ಬದಲು ಕರ್ನಾಟಕದಿಂದ ಕಣಕ್ಕೆ ಇಳಿಯಬೇಕು’ ಎಂದು ಸಲಹೆ ನೀಡಿದ್ದಾರೆ.ಮತ್ತೊಂದೆಡೆ ಸ್ವತಃ ಕಾಂಗ್ರೆಸ್‌ನಲ್ಲೂ ರಾಹುಲ್ ಗಾಂಧಿ ಅವರನ್ನು ಈ ಬಾರಿ ಕೇರಳದ ಬದಲು ಕರ್ನಾಟಕದಿಂದ ಕಣಕ್ಕೆ ಇಳಿಸುವ ಕುರಿತು ಚರ್ಚೆ ನಡೆದಿದೆ ಎಂದು ಮಾತುಗಳು ಕೇಳಿಬರುತ್ತಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.