ಚಂಡಮಾರುತ ಮಳೆಗೆ ಚೆನ್ನೈ ಮುಳುಗಡೆ

KannadaprabhaNewsNetwork |  
Published : Dec 05, 2023, 01:30 AM IST
ಮ್ಯಾಪ್‌  | Kannada Prabha

ಸಾರಾಂಶ

ಏರ್‌ಪೋರ್ಟ್‌ಗೆ ನೀರು: ವಿಮಾನ ಹಾರಾಟ ಸ್ಥಗಿತ. ಕೊಚ್ಚಿ ಹೋದ ಕಾರು, ಬೈಕ್‌ಗಳು. 5 ಬಲಿ. ಆಂಧ್ರ, ಪುದುಚೇರಿ, ಒಡಿಶಾದಲ್ಲೂ ಮಳೆ ಅಬ್ಬರ. ಇಂದು ಆಂಧ್ರ ಕರಾವಳಿಗೆ ‘ಮೈಚಾಂಗ್‌’ ದಾಳಿ. ‘ಮೈಚಾಂಗ್‌’ ಚಂಡಮಾರುತದ ಪ್ರಭಾವದಿಂದ ಚೆನ್ನೈ, ಉತ್ತರ ತ.ನಾಡಲ್ಲಿ ಧಾರಾಕಾರ ಮಳೆ. 29 ಸೆಂ.ಮೀ.ವರೆಗೂ ಮಳೆ ಸುರಿದಿದ್ದರಿಂದ ಚೆನ್ನೈನಲ್ಲಿ ಭಾರಿ ಪ್ರವಾಹ ಸ್ಥಿತಿ. ಎಲ್ಲೆಲ್ಲೂ ನೀರು. ಜನವಸತಿ, ಕೈಗಾರಿಕಾ ಪ್ರದೇಶಗಳಿಗೂ ನುಗ್ಗಿದ ನೀರು. ವಿದ್ಯುತ್‌, ಇಂಟರ್ನೆಟ್‌ ಸೇವೆ ಬಂದ್‌. ಚೆನ್ನೈ ಏರ್‌ಪೋರ್ಟ್‌ ಜಲಾವೃತ. ವಿಮಾನ ಹಾರಾಟ ಸ್ಥಗಿತ. 35 ವಿಮಾನ ಬೆಂಗಳೂರಿಗೆ ವರ್ಗ. ಹಳಿಗಳ ಮೇಲೆ ನೀರು ಹರಿಯುತ್ತಿರುವ ಕಾರಣ ಹಲವಾರು ರೈಲುಗಳ ಸಂಚಾರವೂ ರದ್ದು. ಉತ್ತರ ತಮಿಳುನಾಡಿನ ಜಿಲ್ಲೆಗಳಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ. ತಮಿಳುನಾಡು, ಆಂಧ್ರ, ಪುದುಚೇರಿ, ಒಡಿಶಾ ಸಿಎಂಗೆ ಗೃಹ ಸಚಿವ ಅಮಿತ್‌ ಶಾ ಫೋನ್‌.

ಪಿಟಿಐ ಚೆನ್ನೈ/ಅಮರಾವತಿ/ಭುವನೇಶ್ವರ‘ಮೈಚಾಂಗ್‌’ ಚಂಡಮಾರುತದ ಪರಿಣಾಮ ಉತ್ತರ ತಮಿಳುನಾಡು ಹಾಗೂ ರಾಜಧಾನಿ ಚೆನ್ನೈನಲ್ಲಿ ಭಾರಿ ಮಳೆ ಸುರಿದಿದ್ದು ಭೀಕರ ಪ್ರವಾಹ ಸೃಷ್ಟಿಯಾಗಿದೆ. ಭಾರೀ ಮಳೆ ಸಾಮಾನ್ಯ ಜನಜೀವನವನ್ನು ಸಂಪೂರ್ಣ ವ್ಯತ್ಯಯಗೊಳಿಸಿದ್ದು, ಮಳೆ ಸಂಬಂಧಿ ಘಟನೆಗಳಿಗೆ ಐವರು ಸಾವನ್ನಪ್ಪಿದ್ದಾರೆ. ಇದು 2015ರಲ್ಲಿ ಸಂಭವಿಸಿದ್ದ ಪ್ರವಾಹದ ಪುನರಾವರ್ತನೆಯ ಭೀತಿ ಹುಟ್ಟು ಹಾಕಿದೆ.

ಇದೇ ವೇಳೆ, ಒಡಿಶಾ, ಪುದುಚೇರಿ ಹಾಗೂ ಆಂಧ್ರಪ್ರದೇಶದಲ್ಲೂ ಭಾರಿ ಮಳೆ ಸುರಿದಿದೆ. ಒಡಿಶಾದ ಅನೇಕ ಊರುಗಳು, ಆಂಧ್ರಪ್ರದೇಶದ ಅಮರಾವತಿ, ತಿರುಪತಿಯಲ್ಲಿ ಜನಜೀವನ ಏರುಪೇರಾಗಿದೆ. ತಿರುಮಲ ವೆಂಕಟೇಶ್ವರ ದೇವಸ್ಥಾನವು ಬೆಟ್ಟದ ಕೆಲವು ಸಣ್ಣಪುಟ್ಟ ದೇವಸ್ಥಾನಗಳನ್ನು ಬಂದ್‌ ಮಾಡಿದೆ. ಒಟ್ಟಾರೆ ಆಂಧ್ರಪ್ರದೇಶದ 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ.

ಮೈಚಾಂಗ್‌ ಚಂಡಮಾರುತವು ಇನ್ನೂ ಬಂಗಾಳ ಕೊಲ್ಲಿಯಲ್ಲಿ ಸುತ್ತುತ್ತಿದ್ದು, ಮಂಗಳವಾರ ಅದು ಆಂಧ್ರಪ್ರದೇಶದ ನೆಲ್ಲೂರು ಹಾಗೂ ಮಚಲಿಪಟ್ಟಣಂ ಕರಾವಳಿ ಮಧ್ಯೆ ಗಂಟೆಗೆ 110 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಅಪ್ಪಳಿಸುವ ಸಂಭವವಿದೆ. ಹೀಗಾಗಿ ಇನ್ನೂ 2 ದಿನ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ‘ಮೈಚಾಂಗ್'''''''' ಎಂಬ ಹೆಸರನ್ನು ಮ್ಯಾನ್ಮಾರ್ ಸೂಚಿಸಿದೆ. ಇದರರ್ಥ ಶಕ್ತಿ ಅಥವಾ ಸ್ಥಿತಿಸ್ಥಾಪಕತ್ವ.ಚೆನ್ನೈ, ತಮಿಳ್ನಾಡಲ್ಲಿ ಭಾರಿ ಪ್ರವಾಹ:

ಸೋಮವಾರ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಏಕೆಂದರೆ ನಿರಂತರ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಅನೇಕ ಭಾಗಗಳಲ್ಲಿ ನೀರು ಉಕ್ಕೇರಿ ಜನವಸತಿ ಪ್ರದೇಶಗಳಿಗೆ ನುಗ್ಗಿದ್ದು, ಕಾರು, ಬೈಕ್‌ ಸೇರಿ ಅನೇಕ ವಾಹನಗಳು ಪ್ರವಾಹದ ನೀರಿನಲ್ಲಿ ತೇಲಿಹೋಗುವ ದೃಶ್ಯಗಳು ವೈರಲ್‌ ಆಗಿವೆ.ಚೆನ್ನೈನ ಅಂಬತ್ತೂರು ಕೈಗಾರಿಕಾ ಪ್ರದೇಶಕ್ಕೂ ನೀರು ನುಗ್ಗಿದ್ದು ಅನೇಕ ಕಾರ್ಖಾನೆ, ಉದ್ದಿಮೆಗಳು ಜಲಾವೃತವಾಗಿವೆ. ಅನೇಕ ಕಡೆ ವಿದ್ಯುತ್ತು ಹಾಗೂ ಇಂಟರ್ನೆಟ್ ಸೇವೆ ಕೂಡ ಸ್ತಬ್ಧವಾಗಿದೆ.

ಚೆನ್ನೈ ವಿಮಾನ ನಿಲ್ದಾಣಕ್ಕೆ ಭಾರಿ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 9ರವರೆಗೆ ಏರ್‌ಪೋರ್ಟ್‌ ಬಂದ್‌ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ 70 ವಿಮಾನ ಹಾರಾಟ ರದ್ದು ಮಾಡಲಾಗಿದೆ. 35 ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ.

ಹಳಿಗಳ ಮೇಲೆ ಚೆನ್ನೈನಲ್ಲಿ ನೀರು ನುಗ್ಗಿ ಹತ್ತಾರು ರೈಲುಗಳು ರದ್ದುಗೊಂಡಿವೆ. ಇದಲ್ಲದೆ ರಸ್ತೆ ಸಂಚಾರ ಕೂಡ ಪ್ರವಾಹದ ಕಾರಣ ಏರುಪೇರಾಗಿದ್ದು, ಜನರು ಪರದಾಡುತ್ತಿದ್ದಾರೆ.ರಾಜ್ಯದ ರಾಜಧಾನಿಯ ಹಲವು ಭಾಗಗಳಲ್ಲದೆ ಮತ್ತು ಪಕ್ಕದ ಜಿಲ್ಲೆಗಳಾದ ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರುಗಳಲ್ಲೂ ಪ್ರವಾಹದ ವರದಿಯಾಗಿದ್ದು, ಅನೇಕ ಮನೆಗಳು ಮುಳಗಿವೆ.ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ಚೆನ್ನೈನ ಪೆರುಂಗುಡಿಯಲ್ಲಿ 29 ಸೆಂ.ಮೀ. ಮಳೆಯಾಗಿದ್ದು, ತಿರುವಳ್ಳೂರು ಜಿಲ್ಲೆಯ ಅವಡಿಯಲ್ಲಿ 28 ಸೆಂ.ಮೀ. ಮತ್ತು ಚೆಂಗಲ್‌ಪೇಟ್‌ನ ಮಾಮಲ್ಲಪುರಂನಲ್ಲಿ 22 ಸೆಂ.ಮೀ. ಮಳೆಯಾಗಿದೆ.

ಅನೇಕ ಕಡೆ ಶಾಲೆ, ಕಚೇರಿ ರಜೆ:

ಹೀಗಾಗಿ ತಮಿಳುನಾಡು ಸರ್ಕಾರವು ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳ ಎಲ್ಲಾ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಿಗೆ ಮಂಗಳವಾರ ಸಾರ್ವಜನಿಕ ರಜೆ ಘೋಷಿಸಿದೆ. ಡಿ.5ರಂದು ವರ್ಕ್‌ ಫ್ರಂ ಹೋಂಗೆ ಅವಕಾಶ ನೀಡಿ ಎಂದು ನೆರೆಪೀಡಿತ ಪ್ರದೇಶಗಳಲ್ಲಿನ ಅನೇಕ ಖಾಸಗಿ ಕಂಪನಿ ಉದ್ಯೋಗಿಗಳು ಮನವಿ ಮಾಡಿದ್ದಾರೆ.4 ಸಿಎಂಗಳಿಗೆ ಅಮಿತ್‌ ಶಾ ಫೋನ್‌:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಪುದುಚೇರಿ ಮುಖ್ಯಮಂತ್ರಿ ರಂಗಸಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಪರಿಸ್ಥಿತಿ ಬಗ್ಗೆ ವಿಚಾರಿಸಿದರು. ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದರು.

ಪೀಡಿತ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಗಳಿಗಾಗಿ 250 ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ಒಳಗೊಂಡ 10 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸರ್ಕಾರ ಹೇಳಿದೆ.

---ರಸ್ತೆ ಮೇಲೆ ಓಡಾಡಿ ಭೀತಿ

ಹುಟ್ಟು ಹಾಕಿದ ಮೊಸಳೆ

(ಫೋಟೋ- ಕ್ರೊಕೋಡೈಲ್‌)ಚೆನ್ನೈನಲ್ಲಿ ಭಾನುವಾರ ಚೆನ್ನೈ-ತಿರುಚಿರಾಪಳ್ಳಿ ಹೆದ್ದಾರಿಯ ಪೆರುಂಗಲತ್ತೂರ್‌ ಪ್ರದೇಶದ ರಸ್ತೆಯಲ್ಲಿ ‘ಮಗ್ಗರ್’ ಮೊಸಳೆಯೊಂದು ತೆವಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಜನರನ್ನು ಬೆಚ್ಚಿಬೀಳಿಸಿದೆ.

--

2015ರಲ್ಲಿ ಏನಾಗಿತ್ತು?2015ರಲ್ಲಿ ನವೆಂಬರ್‌ನಲ್ಲಿ ಉಂಟಾಗಿದ್ದ ಭೀಕರ ಪ್ರವಾಹದಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರದಲ್ಲಿ 500 ಜನರು ಸಾವನ್ನಪ್ಪಿದ್ದರು. 18 ಲಕ್ಷ ಜನ ನಿರ್ವಸಿತರಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌
ಲೆಬನಾನ್‌ ಮನೆ ಮೇಲೆ ಇಸ್ರೇಲ್‌ ಅಪಾಯಕಾರಿ ಬಿಳಿ ರಂಜಕ ಪ್ರಯೋಗ