ಎಐಸಿಸಿ ಅಧಿವೇಶನ : ಪಕ್ಷವನ್ನು ತಳಮಟ್ಟದಿಂದ ಮರುಸಂಘಟನೆ ಮಾಡಲು ಕಾಂಗ್ರೆಸ್‌ ನಾಯಕರ ನಿರ್ಧಾರ

KannadaprabhaNewsNetwork | Updated : Apr 09 2025, 04:47 AM IST

ಸಾರಾಂಶ

ಇಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದ ಮೊದಲ ದಿನವಾದ ಮಂಗಳವಾರ ಕಾಂಗ್ರೆಸ್‌ ನಾಯಕರು ಪಕ್ಷವನ್ನು ತಳಮಟ್ಟದಿಂದ ಮರುಸಂಘಟನೆ ಮಾಡಲು ತೀರ್ಮಾನಿಸಿದ್ದಾರೆ.

 ಅಹಮದಾಬಾದ್‌: ಇಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದ ಮೊದಲ ದಿನವಾದ ಮಂಗಳವಾರ ಕಾಂಗ್ರೆಸ್‌ ನಾಯಕರು ಪಕ್ಷವನ್ನು ತಳಮಟ್ಟದಿಂದ ಮರುಸಂಘಟನೆ ಮಾಡಲು ತೀರ್ಮಾನಿಸಿದ್ದಾರೆ. ಅಲ್ಲದೆ, ಪಕ್ಷದ ಜಿಲ್ಲಾ ಘಟಕಗಳ ಬಲವರ್ಧನೆ ಮತ್ತು ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಒಲವು ತೋರಿದ್ದಾರೆ.

ಮರುಸಂಘಟನೆ ಹಾಗೂ ಜಿಲ್ಲಾಧ್ಯಕ್ಷರಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನೀಡುವುದರ ಬಗ್ಗೆ ಅಧಿವೇಶನದ ಮೊದಲ ದಿನ ಚರ್ಚೆಯಾಗಿದ್ದು, ಕೊನೆಯ ದಿನವಾದ ಏ.9ರಂದು ಅಂತಿಮ ನಿರ್ಧಾರವನ್ನು ಕಾಂಗ್ರೆಸ್‌ ನಾಯಕರು ತೆಗೆದುಕೊಳ್ಳಲಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ‘ಪಕ್ಷವನ್ನು ತಳಮಟ್ಟದಿಂದ ಭಾರಿ ಪ್ರಮಾಣದಲ್ಲಿ ಮರುಸಂಘಟನೆ ಮಾಡಲು ತೀರ್ಮಾನಿಸಲಾಗಿದೆ. ಈ ವರ್ಷವನ್ನು ಮರುಸಂಘಟನೆಗೆ ಮೀಸಲಿಡಲಾಗಿದೆ’ ಎಮದರು.

ಇನ್ನೊಬ್ಬ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್‌ ಮಾತನಾಡಿ, ‘ಸಬಲೀಕೃತ ಜಿಲ್ಲಾ ಘಟಕವನ್ನು ರಚಿಸುವುದು ಕಾಂಗ್ರೆಸ್‌ ಅಧ್ಯಕ್ಷರು ಮತ್ತು ವಿಪಕ್ಷದ ನಾಯಕರ ಉದ್ದೇಶ. ಇದಕ್ಕಾಗಿ ನಾವು ಜಿಲ್ಲಾ ಘಟಕದ ಅಧ್ಯಕ್ಷರಿಗೆ ನೀಡಿರುವ ಹೊಣೆಗಾರಿಕೆ, ಜವಾಬ್ದಾರಿ ಮತ್ತು ರಾಜಕೀಯ ಬಲವನ್ನು ಹೆಚ್ಚಿಸಲಿದ್ದೇವೆ. ಜಿಲ್ಲಾ ಪ್ರದೇಶ ಕಾಂಗ್ರೆಸ್‌(ಡಿಸಿಸಿ) ಅಧ್ಯಕ್ಷರನ್ನು ಮೊದಲಿಗಿಂತ ಹೆಚ್ಚು ಸಬಲರನ್ನಾಗಿ ಮಾಡುವುದು ಕಾಂಗ್ರೆಸ್‌ ಉದ್ದೇಶ’ ಎಂದು ಹೇಳಿದರು.ಈ ವರ್ಷ ಸಂಘಟನೆಗೆ ಆದ್ಯತೆ ನೀಡಲಿದ್ದೇವೆ ಎಂದಿರುವ ಅವರು, ‘2025 ನಮ್ಮ ಕಾರ್ಯಕರ್ತರನ್ನು ಬಲ ಪಡಿಸಲು, ಪಕ್ಷದ ಸಿದ್ಧಾಂತವನ್ನು ವಿಸ್ತರಿಸಲು, ಜೊತೆಗೆ ಪಾದಯಾತ್ರೆ. ಮನೆ ಮನೆಗೆ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್‌ ಸಾಮೂಹಿಕ ಸಂಪರ್ಕ ಕಾರ್ಯಕ್ರಮವನ್ನು ತಲುಪುವಂತೆ ನೋಡಿಕೊಳ್ಳಲು ಸಂಘಟನೆಯ ವರ್ಷವಾಗಿದೆ’ ಎಂದರು. 

ಹೋರಾಟದಿಂದ ಹಿಂದೆ ಸರಿಯಲ್ಲ:

ಚುನಾವಣೆಗಳ ಬಗ್ಗೆಯೂ ಈ ವೇಳೆ ಮಾತನಾಡಿದ ಪೈಲಟ್‌, ‘ಕಾಂಗ್ರೆಸ್‌ ಸಂಸತ್ ಮತ್ತು ಸದನ ಹೊರಗಡೆ ತನ್ನ ಆಕ್ರಮಣಕಾರಿ ಹೋರಾಟಗಳಿಂದ ಹಿಂದೆ ಸರಿಯುವುದಿಲ್ಲ. ಇದು ಮುಂದಿನ ರಾಜಕೀಯ ಸವಾಲುಗಳಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಡಲಿದೆ. ಕಾಂಗ್ರೆಸ್‌ ಮತ್ತು ಅದರ ಬೆಂಬಲಿತ ಸಿದ್ಧಾಂತಗಳು ಒಟ್ಟಾಗಿ, ಬಿಜೆಪಿ ಮತ್ತು ಎನ್‌ಡಿಎಗೆ ಕಠಿಣ ಸ್ಪರ್ಧೆಯನ್ನು ನೀಡುತ್ತವೆ ಎಂಬ ವಿಶ್ವಾಸವಿದೆ’ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಪಟೇಲ್ ಸಿದ್ಧಾಂತ ಆರ್‌ಎಸ್‌ಎಸ್‌ಗೆ ವಿರುದ್ಧ: ಖರ್ಗೆ

ಅಹಮದಾಬಾದ್: ‘ಸರ್ದಾರ್ ಪಟೇಲರ ಸಿದ್ಧಾಂತ ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ವಿರುದ್ಧವಾಗಿತ್ತು. ಅವರು ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಏನೂ ಕೊಡುಗೆ ನೀಡದ ಆರ್‌ಎಸ್‌ಎಸ್‌ ಪಟೇಲರ ಪರಂಪರೆ ಕುರಿತು ಮಾತಾಡುವುದು ಹಾಸ್ಯಾಸ್ಪದ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ಸ್ಮಾರಕದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಅವರು ಮಾತನಾಡಿದರು.

‘ಡಾ. ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಯ ಸದಸ್ಯರನ್ನಾಗಿ ಮಾಡುವಲ್ಲಿ ಗಾಂಧೀಜಿ ಮತ್ತು ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸಂವಿಧಾನ ರಚನೆಯಾದಾಗ ಆರ್‌ಎಸ್‌ಎಸ್ ಗಾಂಧೀಜಿ, ನೆಹರು, ಅಂಬೇಡ್ಕರ್ ಮತ್ತು ಕಾಂಗ್ರೆಸ್ ಅನ್ನು ಟೀಕಿಸಿ, ಸಂವಿಧಾನದ ಪ್ರತಿಕೃತಿಗಳನ್ನು ಸುಟ್ಟುಹಾಕಿತು. ಈಗ ಅದೇ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾಂಗ್ರೆಸ್‌ ವಿರುದ್ಧ ಮಾತಾಡುತ್ತಿವೆ’ ಎಂದು ವಾಗ್ದಾಳಿ ನಡೆಸಿದರು.

ವಿಭಜಕ ರಾಜಕೀಯ, ಕೋಮುವಾದ ವಿರುದ್ಧ ಸಿಡಬ್ಲುಸಿ ನಿರ್ಣಯ

ಅಹಮದಾಬಾದ್: ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸರ್ದಾರ್ ಪಟೇಲ್ ಮತ್ತು ನೆಹರು ಅವರಲ್ಲಿ ಪ್ರತ್ಯೇಕತೆ ಸೃಷ್ಟಿಸುವ ಪಿತೂರಿ ನಡೆಸಿವೆ. ಹಿಂಸೆ ಮತ್ತು ಕೋಮುವಾದದಿಂದ ದೇಶವನ್ನು ದ್ವೇಷದ ಪ್ರಪಾತಕ್ಕೆ ತಳ್ಳುತ್ತಿವೆ. ಅವರ ​​ವಿರುದ್ಧ ಹೋರಾಡುವ ಮೂಲಕ ಪಟೇಲರ ದೃಢನಿಶ್ಚಯವನ್ನು ಅನುಕರಿಸಲಾಗುತ್ತದೆ’ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ನಿರ್ಣಯ ಅಂಗೀಕರಿಸಿದೆ.‘ಪಟೇಲ್ ಮತ್ತು ನೆಹರು ನಡುವಿನ ಸಂಘರ್ಷಗಳ ಬಗ್ಗೆ ಉದ್ದೇಶಪೂರ್ವಕ ಸುಳ್ಳುಗಳ ಜಾಲವನ್ನು ಹರಡಲಾಗುತ್ತಿದೆ. ಇದು ನಮ್ಮ ಸ್ವಾತಂತ್ರ್ಯ ಹೋರಾಟದ ನೀತಿಯ ಮೇಲೆ ಮತ್ತು ಗಾಂಧಿ-ನೆಹರು-ಪಟೇಲ್ ಅವರ ಬೇರ್ಪಡಿಸಲಾಗದ ನಾಯಕತ್ವದ ಮೇಲೆ ನಡೆದ ದಾಳಿಯಾಗಿದೆ’ ಎಂದು ಮಂಗಳವಾರ ಇಲ್ಲಿ ನಡೆದ ಸಭೆ ಖೇದ ವ್ಯಕ್ತಪಡಿಸಿದೆ.

‘ಇಂದು, ದ್ವೇಷ ಮತ್ತು ವಿಭಜಕ ಶಕ್ತಿಗಳು ಈ ಸೌಹಾರ್ದತೆ ಮತ್ತು ಸ್ನೇಹಪರತೆಯ ಮನೋಭಾವವನ್ನೇ ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದ, ಕಾಂಗ್ರೆಸ್ ಪಕ್ಷವು ಪಟೇಲರ ಜೀವನ ತತ್ವಗಳನ್ನು ಅನುಸರಿಸಲು, ವಿಭಜಕ ಶಕ್ತಿಗಳನ್ನು ಸೋಲಿಸಲು ಮತ್ತು ಅವರ ನಕಲಿ ಸುದ್ದಿ ಕಾರ್ಖಾನೆಯನ್ನು ಬಹಿರಂಗಪಡಿಸಲು ನಿಶ್ಚಯಿಸಿದೆ’ ಎಂದು ನಿರ್ಣಯದಲ್ಲಿ ತಿಳಿಸಿದೆ.

Share this article