ಮಾಲೂರು ಶಾಸಕ ನಂಜೇಗೌಡಆಯ್ಕೆ ರದ್ದತಿಗೆ ಹೈಕೋರ್ಟ್‌ ಆದೇಶ

KannadaprabhaNewsNetwork |  
Published : Sep 17, 2025, 02:07 AM IST
ನಂಜೇಗೌಡ  | Kannada Prabha

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಲ್ಲಿ 248 ಮತದಿಂದ ಗೆದ್ದಿದ್ದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಅಮಾನ್ಯಗೊಳಿಸಿರುವ ಹೈಕೋರ್ಟ್‌, 4 ವಾರದಲ್ಲಿ ಹೊಸದಾಗಿ ಮತ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣೆ ಆಯೋಗಕ್ಕೆ ಮಂಗಳವಾರ ಆದೇಶಿಸಿದೆ.

- 4 ವಾರಗಳಲ್ಲಿ ಮರು ಮತಎಣಿಕೆ ಮಾಡಿ: ಸೂಚನೆ

- ಇದರ ಬೆನ್ನಲ್ಲೇ ರಿಲೀಫ್‌ । ಆದೇಶಕ್ಕೆ 30 ದಿನ ತಡೆ

----

- ಮಾಲೂರು ಚುನಾವಣೆ ಕುರಿತು ತಕರಾರು ಅರ್ಜಿ

- ಪರಾಜಿತ ಅಭ್ಯರ್ಥಿ ಮಂಜುನಾಥ್‌ ಸಲ್ಲಿಸಿದ್ದ ಅರ್ಜಿ

- 4 ವಾರದಲ್ಲಿ ಮರುಮತಎಣಿಕೆ, ರಿಸಲ್ಟ್‌ ಪ್ರಕಟಿಸಿ

- ಕೇಂದ್ರ ಚುನಾವಣಾ ಆಯೋಗಕ್ಕೆ ಕೋರ್ಟ್ ಆದೇಶ

- ಆದ್ರೂ ಈ ಆದೇಶಕ್ಕೆ 30 ದಿನ ತಡೆ ನೀಡಿದ ಕೋರ್ಟ್

- ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಶಾಸಕಗೆ ಅ‍ವಕಾಶ

- ಅಲ್ಲಿವರೆಗೆ ನಂಜೇಗೌಡ ಅವರ ಶಾಸಕತ್ವ ರದ್ದಾಗಲ್ಲ

---ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಲ್ಲಿ 248 ಮತದಿಂದ ಗೆದ್ದಿದ್ದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಅಮಾನ್ಯಗೊಳಿಸಿರುವ ಹೈಕೋರ್ಟ್‌, 4 ವಾರದಲ್ಲಿ ಹೊಸದಾಗಿ ಮತ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣೆ ಆಯೋಗಕ್ಕೆ ಮಂಗಳವಾರ ಆದೇಶಿಸಿದೆ.

ಈ ಆದೇಶ ಪ್ರಕಟಿಸಿದ ಬೆನ್ನಲ್ಲೇ ಕೆ.ವೈ.ನಂಜೇಗೌಡ ಅವರು ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ತನ್ನ ಆದೇಶಕ್ಕೆ 30 ದಿನಗಳವರೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ. ಇದರಿಂದ ಕೆ.ವೈ.ನಂಜೇಗೌಡ ಅವರ ಆಯ್ಕೆ ಅಸಿಂಧುವಾದರೂ, 30 ದಿನಗಳ ಕಾಲ ಅವರು ಶಾಸಕರಾಗಿಯೇ ಮುಂದುವರಿಯಲಿದ್ದಾರೆ.

ಆಯ್ಕೆ ರದ್ದು:

ಮಾಲೂರು ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ ಆಯ್ಕೆ ಅನೂರ್ಜಿತಗೊಳಿಸಬೇಕು, ತಮ್ಮನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಬೇಕು, ಮತಗಳ ಮರು ಎಣಿಕೆಗೆ ಆದೇಶಿಸಬೇಕು ಎಂದು ಕೋರಿ ಪರಾಜಿತ ಅಭ್ಯರ್ಥಿ ಬಿಜೆಪಿಯ ಕೆ.ಎಸ್.ಮಂಜುನಾಥ್ ಗೌಡ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಆರ್.ದೇವದಾಸ್ ಅವರ ಪೀಠ, 2023ರ ಮೇ ಮಾಲೂರು ಕೋಲಾರ ವಿಧಾನಸಭೆ ಚುನಾವಣೆಯಿಂದ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಅವರು ಆಯ್ಕೆಯಾಗಿರುವುದಾಗಿ 2023ರ ಮೇ 13ರಂದು ಪ್ರಕಟಿಸಿದ ಫಲಿತಾಂಶ ರದ್ದುಪಡಿಸಿತು.

ಅಲ್ಲದೆ, ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತಗಳನ್ನು ನಾಲ್ಕು ವಾರದಲ್ಲಿ ಮರು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು. ಫಲಿತಾಂಶದ ನಂತರದ ಎಲ್ಲಾ ಪ್ರಕ್ರಿಯೆಗಳನ್ನು ಕಾನೂನು ಪ್ರಕಾರ ಪಾಲಿಸಬೇಕು. ಮತ ಎಣಿಕೆಯ ವಿಡಿಯೋ ರೆಕಾರ್ಡಿಂಗ್‌ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸದೆ ಕರ್ತವ್ಯ ಲೋಪ ಎಸಗಿರುವ ಅಂದಿನ ಚುನಾವಣಾಧಿಕಾರಿಯ (ಜಿಲ್ಲಾಧಿಕಾರಿ) ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿ ತೀರ್ಪು ನೀಡಿತು.

ಆದೇಶಕ್ಕೆ ತಡೆ:

ನಂತರ ಕೆ.ವೈ.ನಂಜೇಗೌಡ ಪರ ವಕೀಲರು ಹಾಜರಾಗಿ, ನ್ಯಾಯಾಲಯ ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ರದ್ದುಪಡಿಸಿದೆ. ಆದರೆ, ಈ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಆದ್ದರಿಂದ 30 ದಿನಗಳ ಅವಧಿಗೆ ಈ ತೀರ್ಪಿಗೆ ತಡೆಯಾಜ್ಞೆ ನೀಡಬೇಕು. ಚುನಾವಣಾ ಫಲಿತಾಂಶ ರದ್ದುಪಡಿಸಿದ ಸಂದರ್ಭದಲ್ಲಿ ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ 30 ದಿನಗಳ ಕಾಲ ತೀರ್ಪು ಜಾರಿಗೆ ತಡೆಯಾಜ್ಞೆ ನೀಡಲು ಕಾನೂನಿನಲ್ಲೇ ಅವಕಾಶವಿದೆ. ಆದ್ದರಿಂದ ನಮ್ಮ ಮನವಿ ಪುರಸ್ಕರಿಸಬೇಕು ಎಂದು ಕೋರಿದರು.

ಅರ್ಜಿದಾರ ಮಂಜುನಾಥ್‌ ಪರ ವಕೀಲರು, ನ್ಯಾಯಾಲಯ ಈಗಾಗಲೇ ಫಲಿತಾಂಶ ಪ್ರಕಟಿಸಿದೆ. ತೀರ್ಪಿನಂತೆ ಮತಗಳ ಮರು ಎಣಿಕೆ ಕಾರ್ಯ ನಡೆಸಲು ಅನುಮತಿ ನೀಡಬೇಕು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೆ.ವೈ.ನಂಜೇಗೌಡ ಅವರು ಹಾಲಿ ಶಾಸಕರಾಗಿದ್ದಾರೆ. ಅವರು ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ತಮ್ಮ ತೀರ್ಪಿನ ಜಾರಿಗೆ 30 ದಿನಗಳ ಕಾಲ ತಡೆಯಾಜ್ಞೆ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಇಂದಿನ ತೀರ್ಪಿಗೆ 30 ದಿನಗಳ ಕಾಲ ತಡೆಯಾಜ್ಞೆ ನೀಡುವುದು ಸೂಕ್ತ ಆದೇಶಿಸಿತು.

ಆದೇಶದಲ್ಲಿ ಏನಿದೆ?:

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 15 ಸ್ಪರ್ಧಿಗಳ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಮತಗಳ ಎಣಿಕೆ ಒಂದೇ ಕೊಠಡಿಯಲ್ಲಿ ನಡೆಯಬೇಕಿತ್ತು. ಆದರೆ, ಎರಡು ಪ್ರತ್ಯೇಕ ಕೊಠಡಿಗಳಲ್ಲಿ ನಡೆದಿದೆ. ಮತ ಏಣಿಕೆ ಏಜೆಂಟರುಗಳ ಸಹಿಗಳು ಕೂಡ ಅಪರಿಚಿತ ವ್ಯಕ್ತಿಗಳಾಗಿದ್ದಾಗಿವೆ. ಮತಗಳನ್ನು ಮರು ಎಣಿಕೆ ಮಾಡಲು ಆದೇಶಿಸಬೇಕು ಎಂದು ತಾವು ಕೋರಿದ್ದ ಅರ್ಜಿ ಕುರಿತು ಚುನಾವಣಾಧಿಕಾರಿ ಯಾವುದೇ ಆದೇಶ ಮಾಡಿಲ್ಲ. ಮತ ಎಣಿಕೆಯ ವಿಡಿಯೋಗಳು ಕಾಣೆಯಾಗಿದೆ. ಇದರಿಂದ ಚುನಾವಣೆ ಫಲಿತಾಂಶ ರದ್ದುಪಡಿಸಬೇಕು ಎಂದು ಅರ್ಜಿದಾರ, ಬುಜೆಪಿ ಅಭ್ಯರ್ಥಿ ಮಂಜುನಾಥ್‌ ಕೋರಿದ್ದರು.

ಈ ವಾದ ಪುರಸ್ಕರಿಸಿರುವ ನ್ಯಾಯಾಲಯ ಮತ ಎಣಿಕೆ ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳ ಬಗ್ಗೆ ಅರ್ಜಿದಾರರು ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ವಿವಿಧ ಫಾರ್ಮ್-17ಸಿ ಭಾಗ -2 ದಾಖಲೆಗಳಲ್ಲಿ ಅರ್ಜಿದಾರರ ಎಣಿಕೆ ಏಜೆಂಟ್‌ಗಳ ಸಹಿಗಳು ಕಂಡುಬಂದಿಲ್ಲ. ಕೆಲ ದಾಖಲೆಗಳಲ್ಲಿ, ಅರ್ಜಿದಾರರ ಎಣಿಕೆ ಏಜೆಂಟ್‌ ಅಲ್ಲದವರ ಸಹಿಗಳಿವೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಮರು ಎಣಿಕೆಗೆ ಕೋರಿದ ಅರ್ಜಿಗೆ ಸಂಬಂಧಿಸಿ ಚುನಾವಣಾಧಿಕಾರಿ ಹೊರಡಿಸಿದ ಆದೇಶದ ಪ್ರತಿ ಚುನಾವಣಾಧಿಕಾರಿ ಬಳಿ ಲಭ್ಯವಿಲ್ಲ. ಕೋರ್ಟ್‌ಗೆ ಹಾಜರುಪಡಿಸಿದ ಸ್ಟ್ರಾಂಗ್ ರೂಮಿನ ದಾಖಲೆಗಳೊಂದಿಗೆ ಅದು ಕಂಡುಬಂದಿಲ್ಲ. ಇದರಿಂದ ಮತ ಎಣಿಕೆಯ ದಿನದಂದು ಚುನಾವಣಾಧಿಕಾರಿ ಮತಗಳ ಮರು ಎಣಿಕೆಗೆ ಆದೇಶ ಹೊರಡಿಸದೇ ಇರಬಹುದು ಎಂಬ ಸಂಶಯ ಕಾಡುತ್ತಿದೆ. ಮರು ಎಣಿಕೆ ಅರ್ಜಿಯ ಕುರಿತು ಚುನಾವಣಾಧಿಕಾರಿ ಯಾವುದೇ ಆದೇಶ ಹೊರಡಿಸಿಲ್ಲ ಎಂಬುದು ನಿಜವೆಂದು ಕಂಡುಬಂದರೆ, ಚುನಾವಣಾಧಿಕಾರಿಯೂ ಕಾನೂನು ನಿಬಂಧನೆ ಉಲ್ಲಂಘಿಸಿದ್ದಾರೆ ಎನ್ನಬಹುದು. ಅರ್ಜಿದಾರರು ಮರು ಎಣಿಕೆಗೆ ಅರ್ಜಿ ಸಲ್ಲಿಸುವ ಹಕ್ಕು ಹೊಂದಿರುತ್ತಾರೆ ಎಂದು ತಿಳಿಸಿದ ನ್ಯಾಯಪೀಠ, ಮತಗಳ ಮರು ಎಣಿಕೆಗೆ ಆದೇಶಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!