ಮೋದಿ ತೆಗಳಿ ರಾಹುಲ್‌ ಮೆಚ್ಚಿದ ಪಾಕ್‌ ಕ್ರಿಕೆಟಿಗ ಆಫ್ರಿದಿ: ಬಿಜೆಪಿ ಗರಂ

KannadaprabhaNewsNetwork |  
Published : Sep 17, 2025, 01:10 AM IST
ಶಾಹಿದ್‌ ಅಫ್ರಿದಿ | Kannada Prabha

ಸಾರಾಂಶ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ, ‘ರಾಹುಲ್‌ ಗಾಂಧಿ ಸಕಾರಾತ್ಮಕ ಮನಸ್ಥಿತಿ ಹೊಂದಿರುವ ವ್ಯಕ್ತಿ’ ಎಂದು ಕೊಂಡಾಡಿದ್ದಾರೆ.

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ, ‘ರಾಹುಲ್‌ ಗಾಂಧಿ ಸಕಾರಾತ್ಮಕ ಮನಸ್ಥಿತಿ ಹೊಂದಿರುವ ವ್ಯಕ್ತಿ’ ಎಂದು ಕೊಂಡಾಡಿದ್ದಾರೆ. ಏಷ್ಯಾ ಕಪ್‌ನಲ್ಲಿ ಭಾರತ- ಪಾಕ್‌ ಪಂದ್ಯದ ಬಗ್ಗೆ ಟೀವಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅಫ್ರಿದಿ, ‘ ಭಾರತದಲ್ಲಿರುವ ಕೇಂದ್ರ ಸರ್ಕಾರ ಯಾವಾಗಲೂ ಅಧಿಕಾರದಲ್ಲಿ ಉಳಿಯಲು ಧರ್ಮ, ಹಿಂದೂ- ಮುಸ್ಲಿಂ ಅಸ್ತ್ರ ಪ್ರಯೋಗಿಸುತ್ತದೆ, ಇದು ತುಂಬಾ ಕೆಟ್ಟ ಮನಸ್ಥಿತಿ. ರಾಹುಲ್‌ ಗಾಂಧಿ ಅವರದ್ದು ಸಕಾರಾತ್ಮಕ ಮನೋಭಾವ. ಅವರು ಮಾತಿನ ಮೇಲೆ ನಂಬಿ ಇಡುತ್ತಾರೆ’ ಎಂದು ಹಾಡಿ ಹೊಗಳಿದ್ದಾರೆ. ಶಾಹಿದ್‌ ಈ ನಡೆಗೆ ಬಿಜೆಪಿ ಕಿಡಿ ಕಾರಿದ್ದು, ‘ಉಗ್ರ ಹಫೀಜ್‌ ಸಯೀದ್ ಬಳಿಕ ಇದೀಗ ಶಾಹಿದ್‌ ಅಫ್ರಿದಿ ರಾಹುಲ್‌ ಗಾಂಧಿಯವರನ್ನು ಹೊಗಳುತ್ತಿದ್ದಾರೆ, ಇದು ಅಚ್ಚರಿಯ ವಿಷಯವಲ್ಲ. ಭಾರತವನ್ನು ವಿರೋಧಿಸುವ ಪ್ರತಿಯೊಬ್ಬರು ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಯವರಲ್ಲಿ ಮಿತ್ರತ್ವ ಕಂಡುಕೊಳ್ಳುತ್ತಾರೆ’ ಎಂದಿದೆ.

==

ಚಿನ್ನದ ಬೆಲೆ ₹1.16 ಲಕ್ಷ, ಬೆಳ್ಳಿ ಮೌಲ್ಯ ₹1.37 ಲಕ್ಷ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಟ್ರೆಂಡ್‌ ಮಂಗಳವಾರವೂ ಮುಂದುವರೆದಿದೆ. ರುಪಾಯಿ ಬೆಲೆಯೆದುರು ಡಾಲರ್‌ ಮೌಲ್ಯ ನಿರಂತರ ಕುಸಿತ ಕಾಣುತ್ತಿರುವ ಪರಿಣಾಮ, ಬೆನ್ನದ ಬೆಲೆ ದಾಖಲೆಯಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,16,100 ರು. ಆಗಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿ ಕೆ.ಜಿ.ಗೆ 1,37,200 ರು. ತಲುಪಿದೆ. ದೆಹಲಿಯಲ್ಲಿ 99.5 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,800 ರು. ಏರಿಕೆಯಾಗಿ 1,14,600 ರು. ಆಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ 1,32,870 ರು. ಆಗಿದೆ.

==

ಜಪಾನ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಶತಾಯುಷಿಗಳು: 55ನೇ ವರ್ಷ ದಾಖಲೆ

ಟೋಕಿಯೋ: ಹಿರಿಯ ವಯಸ್ಕರಿಗೆ ನಾಡೆಂಬ ಖ್ಯಾತಿ ಹೊಂದಿರುವ ಜಪಾನ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ. ಈ ದಾಖಲೆಯನ್ನು ಸತತ 55ನೇ ವರ್ಷವೂ ಜಪಾನ್‌ ತನ್ನದಾಗಿಸಿಕೊಂಡಿದೆ.ಜಪಾನ್‌ನ ಆರೋಗ್ಯ ಸಚಿವ ಟಕಮಾರೋ ಫುವೋಕಾ ಈ ಬಗ್ಗೆ ಮಾಹಿತಿ ನೀಡಿದ್ದು, 1 ಲಕ್ಷಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ. ಈ ಪೈಕಿ 87,784 ಮಹಿಳೆಯರು 11,979 ಪುರುಷರಿದ್ದಾರೆ. 99,763 ಶತಾಯುಷಿಗಳು 100 ವರ್ಷ ಪೂರೈಸಿದ್ದಾರೆ. ಶೇ.88ರಷ್ಟು ಮಹಿಳೆಯರೇ ಇದ್ದಾರೆ. ಇವರ ಸಂಖ್ಯೆ ಜಪಾನ್‌ನ 12.4 ಕೋಟಿ ಜನಸಂಖ್ಯೆಯಲ್ಲಿ ಶೇ.0.81ರಷ್ಟಿದೆ ಎಂದು ತಿಳಿಸಿದರು.

ಶಿಗೆಕೋ ಕಗಾವಾ (114) ಹಿರಿಯ ಮಹಿಳೆಯಾಗಿದ್ದು, ಕಿಯೋಟಕಾ ಮಿಝುನೋ (111) ಹಿರಿಯ ಪುರುಷ ಎಂಬ ಖ್ಯಾತಿಗಳಿಸಿದ್ದಾರೆ. ಜೀವಿತಾವಧಿಯಲ್ಲಿ ಜಪಾನ್‌ 4ನೇ ಸ್ಥಾನದಲ್ಲಿ, ಆರೋಗ್ಯಕರ ದೇಶಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

==

ಬೆಟ್ಟಿಂಗ್‌ ಆ್ಯಪ್‌ ಪ್ರಚಾರ: ಉತ್ತಪ್ಪ, ಯುವಿ, ಸೋನು ಸೂದ್‌ಗೆ ಇ.ಡಿ. ಸಮನ್ಸ್‌

ನವದೆಹಲಿ: 1ಎಕ್ಸ್‌ ಬೆಟ್‌ ಆನ್ಲೈನ್‌ ಬೆಟ್ಟಿಂಗ್‌ ಆ್ಯಪ್‌ ಪರ ಪ್ರಚಾರ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕನ್ನಡಿಗ ಕ್ರಿಕೆಟಿಗ ರಾಬಿನ್‌ ಉತ್ತಪ್ಪ, ಯುವರಾಜ್‌ ಸಿಂಗ್‌ ಮತ್ತು ನಟ ಸೋನು ಸೂದ್‌ ಅವರಿಗೆ ಸಮನ್ಸ್‌ ನೀಡಿದೆ. ಸೆ.22ರಂದು ರಾಬಿನ್‌ ಉತ್ತಪ್ಪ, ಸೆ.23ರಂದು ಯುವರಾಜ್‌ ಸಿಂಗ್‌ ಮತ್ತು ಸೆ.24ರಂದು ಸೋನು ಸೂದ್‌ಗೆ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದೆ. ಇದೇ ಪ್ರಕರಣದಲ್ಲಿ ಮಂಗಳವಾರ ನಟಿ ಊರ್ವಶಿ ರೌಟೇಲಾ ಅವರನ್ನು ವಿಚಾರಣೆ ನಡೆಸಿದ ಇ.ಡಿ., ಕಳೆದ ಬಾರಿ ಕ್ರಿಕೆಟಿಗ ಸುರೇಶ್ ರೈನಾ, ಶಿಖರ್‌ ಧವನ್‌, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅವರನ್ನು ವಿಚಾರಣೆ ನಡೆಸಿತ್ತು. ಬೆಟ್ಟಿಂಗ್‌ ಆ್ಯಪ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ. ತನಿಖೆ ನಡೆಸುತ್ತಿದೆ.

==

ಮಾಜಿ ಕ್ರಿಕೆಟಿಗ, ಸಂಸದ ಪಠಾಣ್‌ ಭೂ ವಂಚಕ: ಕೋರ್ಟ್‌ ಘೋಷಣೆ

ಅಹಮದಾಬಾದ್‌: ಸೆಲೆಬ್ರಿಟಿಗಳಿಗೆ ಪ್ರತ್ಯೇಕ ಕಾನೂನೇನೂ ಇಲ್ಲ ಎಂದು ಮಾಜಿ ಕ್ರಿಕೆಟಿಗ, ತೃಣಮೂಲ ಕಾಂಗ್ರೆಸ್‌ ಸಂಸದ ಯೂಸುಫ್‌ ಪಠಾಣ್‌ ಅವರು ತರಾಟೆಗೆ ತೆಗೆದುಕೊಂಡಿರುವ ಗುಜರಾತ್‌ ಹೈಕೋರ್ಟ್‌, ಅತಿಕ್ರಮಿಸಿರುವ ಸರ್ಕಾರಿ ಜಾಗ ತೆರವುಗೊಳಿಸುವಂತೆ ಸೂಚಿಸಿದೆ. ವಡೋದರಾದ ತಂಡಲ್ಜಾ ಪ್ರದೇಶದಲ್ಲಿರುವ ಬಂಗಲೆಯ ಪಕ್ಕದಲ್ಲಿರುವ ಜಮೀನನ್ನು ಅತಿಕ್ರಮಿಸಿದ್ದ ಪಠಾಣ್‌ ಅದನ್ನು ತಮಗೆ ನೀಡುವಂತೆ ಪಾಲಿಕೆಗೆ ಸೂಚಿಸಿದ್ದರು. ಆದರೆ ಪಾಲಿಕೆ ನಿರಾಕರಿಸಿತ್ತು. ಬಳಿಕ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿ, ಅದು ಪಠಾಣ್‌ಗೆ ಜಾಗ ತೆರವು ಮಾಡುವಂತೆ ತಾಕೀತು ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಬರ್ಬರ ಹತ್ಯೆ
370ನೇ ವಿಧಿ ರದ್ದತಿ ಬಿಜೆಪಿಯ ಹೆಮ್ಮೆ: ಪ್ರಧಾನಿ ಮೋದಿ ಹರ್ಷ