ನವದೆಹಲಿ: ಇಲ್ಲಿನ 9ಎ ಕೋಟ್ಲಾ ರಸ್ತೆಯಲ್ಲಿರುವ ಕಾಂಗ್ರೆಸ್‌ನ ಹೊಸ ಪ್ರಧಾನ ಕಚೇರಿಯಾದ ‘ಇಂದಿರಾ ಗಾಂಧಿ ಭವನ’ವನ್ನು ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಬುಧವಾರ ಉದ್ಘಾಟಿಸಿದರು.
ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಸಂಸದೆ ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಭಾಗವಹಿಸಿದರು. ಈ ವೇಳೆ ವಂದೆ ಮಾತರಂ ಗಾಯನದೊಂದಿಗೆ ಪಕ್ಷದ ಧ್ವಜವನ್ನು ನೂತನ ಕಚೇರಿಯ ಮೇಲೆ ಹಾರಿಸಲಾಯಿತು.
1978ರಿಂದ ಸತತ 47 ವರ್ಷ ಪಕ್ಷದ ಪ್ರಧಾನ ಕಚೇರಿಯಾಗಿದ್ದ 24 ಅಕ್ಬರ್ ರಸ್ತೆಯಲ್ಲಿದ್ದ ಕಟ್ಟಡವನ್ನು ಏಕಾಏಕಿ ಖಾಲಿ ಮಾಡದೆ, ಕೆಲ ಇಲಾಖೆಗಳು ಅಲ್ಲಿಂದಲೇ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಇಂದಿರಾ ಗಾಂಧಿ ಭವನದ ನಿರ್ಮಾಣವು ಸೋನಿಯಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾಗ ಆರಂಭವಾಗಿತ್ತು. ಆದರೆ ಪಕ್ಷ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದ ಹಣದ ಕೊರತೆಯಿಂದಾಗಿ ನಿರ್ಮಾಣ ವಿಳಂಬವಾಗಿತ್ತು.
ಈ ವೇಳೆ ಮಾತನಾಡಿದ ವೇಣುಗೋಪಾಲ್, ‘ಇದು ಸಮಯದೊಂದಿಗೆ ಮುಂದುವರೆದು ಹೊಸತನಕ್ಕೆ ತೆರೆದುಕೊಳ್ಳುವ ಸಮಯ. ಹೊಸ ಕಟ್ಟಡವನ್ನು ಪಕ್ಷ ಹಾಗೂ ನಾಯಕರ ಅಗತ್ಯತೆಗಳಿಗೆ ತಕ್ಕಹಾಗೆ ಆಧುನಿಕನ ವ್ಯವಸ್ಥೆಗಳೊಂದಿಗೆ ನಿರ್ಮಿಸಲಾಗಿದೆ. ಇದು ಆಡಳಿತ, ಸಂಘಟನೆ ಹಾಗೂ ವ್ಯೂಹಾತ್ಮಕ ಚಟುವಟಿಕೆಗಳಿಗೆ ಪೂರಕವಾಗಿದೆ. ಇದು ಕಾಂಗ್ರೆಸ್‌ನ ದೂರದೃಷ್ಟಿ ಹಾಗೂ ಭಾರತದ ರಾಜಕೀಯವನ್ನು ರೂಪಿಸಿದ ಗತಕಾಲಕ್ಕೆ ಗೌರವ ಸಲ್ಲಿಸುವಂತಿದೆ’ ಎಂದರು.
ಕಾಂಗ್ರೆಸ್ ಹೊಸ ಕಚೇರಿಗೆ ಇಂದಿರಾ ಬದಲು ಸಿಂಗ್ ಹೆಸರಿಡಿ: ಬಿಜೆಪಿ ಟಾಂಗ್
ನವದೆಹಲಿ: ಹೊಸದಾಗಿ ಉದ್ಘಾಟನೆಗೊಂಡಿರುವ ಕಾಂಗ್ರೆಸ್ ಮುಖ್ಯಕಚೇರಿಯ ಎದುರು ಹಾಕಿದ್ದ ಪೋಸ್ಟರ್‌ಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾವಚಿತ್ರ ಕಿರುವುದನ್ನು ಉಲ್ಲೇಖಿಸಿ ‘ಇಂದಿರಾ ಭವನದ ಬದಲು ಮನಮೋಹನ್ ಸಿಂಗ್ ಭವನ’ ಎಂದು ಹೆಸರಿಡಿ ಎಂದು ಬಿಜೆಪಿ ಕಾಂಗ್ರೆಸ್‌ಗೆ ಒತ್ತಾಯಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿಯ ಲತಾಣ ಮುಖ್ಯಸ್ಥ ಅಮಿತ್ ಮಾಳವೀಯ ‘ಹೊಸ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗಿನ ಪೋಸ್ಟರ್‌ಗಳು ಮಾಜಿ ಪ್ರಧಾನಿಗೆ ಗೌರವಾರ್ಥವಾಗಿ ಸರ್ದಾರ್ ಮನಮೋಹನ್ ಸಿಂಗ್ ಭವನ ಎಂದು ಹೆಸರಿಡಬೇಕೆಂದು ಕರೆ ನೀಡುತ್ತವೆ. ಕಟ್ಟಡಕ್ಕೆ ಅವರ ಹೆಸರನ್ನು ಇಡುವುದು ಸಿಂಗ್ ಪರಂಪರೆಯನ್ನು ಗೌರವಿಸುವ ಅರ್ಥಪೂರ್ಣ ಸೂಚಕವಾಗಿದೆ, ಅವರು ಬದುಕಿದ್ದಾಗ ವಿಶೇಷವಾಗಿ ಗಾಂಧಿ ಕುಟುಂಬದಿಂದ ಅವರು ಅನುಭವಿಸಿದ ಅವಮಾನವನ್ನು ಇದು ಪರಿಹರಿಸುತ್ತದೆ’ ಎಂದಿದ್ದಾರೆ.