ಕಾಂಗ್ರೆಸ್ಸಲ್ಲಿ ಚರ್ಚೆ ನಡೀತವೆ, ಜಾರಿ ಆಗಲ್ಲ : ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ

KannadaprabhaNewsNetwork |  
Published : Apr 08, 2025, 12:30 AM ISTUpdated : Apr 08, 2025, 05:19 AM IST
Congress Overseas Chief Sam Pitroda (File Photo/ANI)

ಸಾರಾಂಶ

ಈ ಹಿಂದೆ ಕಾಂಗ್ರೆಸ್‌ಗೆ ಮುಜುಗರ ಆಗುವ ಅನೇಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ, ಮತ್ತೆ ವಿವಾದಿತ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಈ ಹಿಂದೆ ಕಾಂಗ್ರೆಸ್‌ಗೆ ಮುಜುಗರ ಆಗುವ ಅನೇಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ, ಮತ್ತೆ ವಿವಾದಿತ ಹೇಳಿಕೆ ನೀಡಿದ್ದಾರೆ.

‘ಗುಜರಾತ್‌ ಎಐಸಿಸಿ ಅಧಿವೇಶನದಲ್ಲಿ ಸಿದ್ಧಾಂತದ ಬಗ್ಗೆ ಉತ್ತಮ ಚರ್ಚೆ ನಡೆಯುತ್ತದೆ ಎಂದು ನಾನು ನಂಬುತ್ತೇನೆ, ಆದರೆ ಅನುಷ್ಠಾನ ಆಗುವುದಿಲ್ಲ. ಕಾಂಗ್ರೆಸ್ ನಾಯಕರು ಗಾಂಧೀಜಿಯವರ ವಿಚಾರಗಳನ್ನು ತಮ್ಮೊಳಗೆ ಅಳವಡಿಸಿಕೊಳ್ಳಲು ಸಾಧ್ಯವಾದರೆ, ಅದು ದೊಡ್ಡ ಸಾಧನೆಯಾಗುತ್ತದೆ’ ಎಂದು ದೈನಿಕ್‌ ಭಾಸ್ಕರ್‌ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಈ ಹಿಂದೆ ರಾಯ್‌ಪುರ ಮತ್ತು ಜೈಪುರದಲ್ಲಿ ಸಮ್ಮೇಳನ ನಡೆದವು. ಆದರೆ ಸಮ್ಮೇಳನದ ಸಲಹೆಗಳಲ್ಲಿ ಎಷ್ಟನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಪಕ್ಷವು ಉಸ್ತುವಾರಿಗಳನ್ನು ಕೇಳಬೇಕು’ ಎಂದಿದ್ದಾರೆ.

ಇಂದಿನಿಂದ ಗುಜರಾತಲ್ಲಿ 2 ದಿನ ಎಐಸಿಸಿ ಅಧಿವೇಶನ

ಅಹಮದಾಬಾದ್‌: ಮುಂಬರುವ ಚುನಾವಣೆಗಳಿಗೆ ಪಕ್ಷದ ಬಲವರ್ಧನೆ ಮತ್ತು ಸಾಂಸ್ಥಿಕ ಬದಲಾವಣೆಯನ್ನು ತರುವ ಬಗ್ಗೆ ಚರ್ಚಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಂಗಳವಾರ ಹಾಗೂ ಬುಧವಾರ 2 ದಿನಗಳ ಅಧಿವೇಶನ ಹಮ್ಮಿಕೊಂಡಿದೆ.

‘ನ್ಯಾಯಪಥ, ಸಂಕಲ್ಪ, ಸಂಪರ್ಣ ಮತ್ತು ಸಂಘರ್ಷ’ ಹೆಸರಿನಲ್ಲಿ ಅಧಿವೇಶನ ನಡೆಯಲಿದೆ. ಏ.8ರಂದು ಇಲ್ಲಿನ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್ ಸ್ಮಾರಕದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಸಭೆ ನಡೆಯಲಿದೆ. ಏ.9 ರಂದು ಎಐಸಿಸಿಯ ಚುನಾಯಿತ ಸದಸ್ಯರು, ಸಂಸದರು, ಸಚಿವರು, ಹಿರಿಯ ನಾಯಕರು ಸೇರಿದಂತೆ 1725 ಎಐಸಿಸಿ ಸದಸ್ಯರು ಸಾಬರಮತಿ ನದಿ ದಡದಲ್ಲಿ ಸಭೆ ಸೇರಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಹಲವು ಪ್ರಮುಖರು ನೇತೃತ್ವ ವಹಿಸಲಿದ್ದಾರೆ.

ಈ ವೇಳೆ 2025ರಲ್ಲಿ ಮತ್ತು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಪಕ್ಷವನ್ನು ಬಲ ಪಡಿಸುವುದು ಜೊತೆಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ, ಹೊಣೆಗಾರಿಕೆ ನೀಡುವುದು, ಪಕ್ಷದ ಸಾಂಸ್ಥಿಕ ಪುನರುಜ್ಜೀವನ ಸೇರಿದಂತೆ ಹಲವಾರು ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ.

ಮಹಾತ್ಮ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿ ಈ ವರ್ಷ100 ವರ್ಷ ಪೂರೈಸುತ್ತಿರುವ ಕಾರಣ ಹಾಗೂ ವಲ್ಲಭ್‌ಭಾಯಿ ಪಟೇಲ್ 150ನೇ ವರ್ಷ ಜನ್ಮದಿನ ಹಿನ್ನೆಲೆ ಹಾಗೂ ಇಬ್ಬರೂ ಕೂಡ ಗುಜರಾತಿನವರಾಗಿರುವ ಕಾರಣ ಕಾಂಗ್ರೆಸ್‌ ಅಹಮದಾಬಾದ್‌ನಲ್ಲಿ ಅಧಿವೇಶನ ಹಮ್ಮಿಕೊಂಡಿದೆ.

PREV

Recommended Stories

ತಾಯ್ತನದ ಹಿರಿಮೆ ದೊಡ್ಡದು : ಜೋಗಿ
ಕೊಲ್ಹಾಪುರ ಜೈನಮಠದ ಆನೆ ಅಂಬಾನಿ ವನ್ಯಧಾಮಕ್ಕೆ ಹಸ್ತಾಂತರ: ವಿವಾದ