ವಂದೇಮಾತರಂ ಪೂರ್ಣ ಚರಣ ಹಾಡದಿದ್ದರೆ ಶಿಕ್ಷೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
ಅರ್ಜಿ ವಿಚಾರಣೆ ವೇಳೆ 1986ರ ಬಿಜೋಯ್ ಕೇಸ್ ಉಲ್ಲೇಖಿಸಿದ ಕೋರ್ಟ್
ಆತ್ಮಸಾಕ್ಷಿಯಿಂದ ಹಾಡದೇ ಇರುವುದು ಶಿಕ್ಷಾರ್ಹವಲ್ಲ ಎಂಬ ತೀರ್ಪು ಪ್ರಸ್ತಾಪಈ ತೀರ್ಪು ವಂದೇ ವಿಷಯದಲ್ಲೂ ಗಮನದಲ್ಲಿಟ್ಟುಕೊಳ್ಳುವಂತೆ ಸೂಚನೆ
‘ಆತ್ಮಸಾಕ್ಷಿಯ ಆಧಾರದ ಮೇಲೆ ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ಹಾಡಲು ನಿರಾಕರಿಸುವವರನ್ನು ಶಿಕ್ಷೆಗೆ ಗುರಿಪಡಿಸಬಾರದು’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. 1986ರ ಬಿಜೋಯ್ ಇಮ್ಯಾನ್ಯುಯೆಲ್ ಪ್ರಕರಣದ ತೀರ್ಪಿನಲ್ಲಿ ‘ಆತ್ಮಸಾಕ್ಷಿಯ ಆಧಾರದ ಮೇಲೆ ರಾಷ್ಟ್ರಗೀತೆ ಹಾಡಲು ಗೌರವಯುತವಾಗಿ ನಿರಾಕರಿಸಿದ ಶಾಲಾ ಮಕ್ಕಳ ಮೇಲೆ ಕ್ರಮ ಕೈಗೊಳ್ಳುವಂತಿಲ್ಲ’ ಎಂದು ಉಲ್ಲೇಖಿಸಲಾದ ತತ್ವಗಳನ್ನು ವಂದೇಮಾತರಂ ವಿಚಾರದಲ್ಲೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.
ಈ ವೇಳೆ ಪೀಠವು, ‘ನಾವು ಯಾವುದೇ ಔಪಚಾರಿಕ ನೋಟೀಸ್ ಜಾರಿ ಮಾಡಲು ಒಲವು ತೋರುತ್ತಿಲ್ಲ. ಆದರೆ, ಬಿಜೋಯ್ ಇಮ್ಯಾನ್ಯುಯೆಲ್ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ಆದೇಶವು ವಂದೇಮಾತರಂ 6 ಚರಣ ಕಡ್ಡಾಯಗೊಳಿಸಿದ ತಿದ್ದುಪಡಿ ಕಾಯ್ದೆಗೂ ಅನ್ವಯವಾಗುತ್ತದೆ. ರಾಷ್ಟ್ರಗೀತೆ ಯಾವುದು ಎಂಬುದು ವಿವಾದದ ವಿಷಯವಲ್ಲ. ಬಿಜೋಯ್ ಪ್ರಕರಣದಲ್ಲಿ ಕಾನೂನಿನ ವ್ಯಾಖ್ಯಾನವನ್ನು ಇಲ್ಲಿಯವರೆಗೆ ಯಾರೂ ಪ್ರಶ್ನಿಸಿಲ್ಲ’ ಎಂದಿತು.
1986ರ ಬಿಜೋ ಇಮ್ಯಾನುಯೆಲ್ vs ಕೇರಳ ಪ್ರಕರಣದಲ್ಲಿ, ಆತ್ಮಸಾಕ್ಷಿಯ ಕಾರಣದಿಂದ ರಾಷ್ಟ್ರಗೀತೆಯನ್ನು ಹಾಡಲು ಗೌರವಯುತವಾಗಿ ನಿರಾಕರಿಸಿದ ಶಾಲಾ ಮಕ್ಕಳ ಹಕ್ಕುಗಳನ್ನು ಸುಪ್ರೀಂ ಕೋರ್ಟ್ ರಕ್ಷಿಸಿತ್ತು. ಆದರೆ ಇತ್ತೀಚೆಗೆ ಜಾರಿಗೆ ತಂದ ಕಾನೂನು ತಿದ್ದುಪಡಿಯ ಪ್ರಕಾರ, ರಾಷ್ಟ್ರಗೀತೆ ಅಥವಾ ರಾಷ್ಟ್ರಗೀತೆಯನ್ನು ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವ ಅಥವಾ ಅಂತಹ ಗಾಯನದಲ್ಲಿ ತೊಡಗಿರುವ ಸಭೆಗೆ ಅಡ್ಡಿಪಡಿಸುವ ಯಾವುದೇ ವ್ಯಕ್ತಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ, ಅಥವಾ ಇವೆರಡನ್ನೂ ವಿಧಿಸಲು ಅವಕಾಶವಿದೆ.