ಅಯೋಧ್ಯೆಯಲ್ಲಿ ಸಂಭ್ರಮದ ರಾಮ ದರ್ಬಾರ್‌ ಪ್ರಾಣ ಪ್ರತಿಷ್ಠೆ

KannadaprabhaNewsNetwork |  
Published : Jun 06, 2025, 12:11 AM ISTUpdated : Jun 06, 2025, 04:41 AM IST
ರಾಮಮಂದಿರ | Kannada Prabha

ಸಾರಾಂಶ

ಇಲ್ಲಿನ ಐತಿಹಾಸಿಕ ರಾಮಮಂದಿರದಲ್ಲಿ ವೈದಿಕ ಪರಂಪರೆಯಂತೆ ಅಯೋಧ್ಯಾಧಿಪತಿ ಶ್ರೀರಾಮನ ದರ್ಬಾರ್‌ನ ಪ್ರಾಣಪ್ರತಿಷ್ಠೆ ಗುರುವಾರ ನಡೆಯಿತು. ಈ ವೇಳೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಉಪಸ್ಥಿತರಿದ್ದರು. ಭಕ್ತರೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

ಅಯೋಧ್ಯೆ: ಇಲ್ಲಿನ ಐತಿಹಾಸಿಕ ರಾಮಮಂದಿರದಲ್ಲಿ ವೈದಿಕ ಪರಂಪರೆಯಂತೆ ಅಯೋಧ್ಯಾಧಿಪತಿ ಶ್ರೀರಾಮನ ದರ್ಬಾರ್‌ನ ಪ್ರಾಣಪ್ರತಿಷ್ಠೆ ಗುರುವಾರ ನಡೆಯಿತು. ಈ ವೇಳೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಉಪಸ್ಥಿತರಿದ್ದರು. ಭಕ್ತರೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

2024ರ ಜ.22ರಂದು ಪ್ರಾಣಪ್ರತಿಷ್ಠೆಯಾದ ಮಂದಿರದ ಮೊದಲ ಮಹಡಿಯಲ್ಲಿರುವ ರಾಮದರ್ಬಾರ್‌ನಲ್ಲಿ ಸೀತೆ, ಲಕ್ಷ್ಮಣ, ಹನುಮಂತರೊಡನಿರುವ ರಾಜಾರಾಮ ರಾಜ್ಯಭಾರ ನಡೆಸುತ್ತಿರುವಂತಹ ವಿಗ್ರಹ, ಈಶಾನ್ಯದಲ್ಲಿ ಶೇಷಾವತಾರ ಮತ್ತು ಶಿವ, ಆಗ್ನೇಯದಲ್ಲಿ ಗಣೇಶ, ದಕ್ಷಿಣದಲ್ಲಿ ಹನುಮಂತ, ನೈಋತ್ಯದಲ್ಲಿ ಸೂರ್ಯ, ವಾಯವ್ಯದಲ್ಲಿ ಭಗವತಿ, ಉತ್ತರದಲ್ಲಿ ಅನ್ನಪೂರ್ಣೆ (ಒಟ್ಟು 8) ದೇವಾಲಯಗಳಲ್ಲಿ ವಿಗ್ರಹಗಳ ಪ್ರಾಣಪ್ರತಿಷ್ಠೆಯೂ ಅಭಿಜಿತ್‌ ಮಹೂರ್ತದಲ್ಲಿ ನಡೆಯಿತು. ಬೆಳಗ್ಗೆ 6.30ಕ್ಕೆ ಯಜ್ಞಮಂಟಪದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು, ಬಳಿಕ ಹೋಮ-ಹವನಗಳು ನಡೆದವು. 

ಇದನ್ನು ದೊಡ್ಡ ಪರದೆ (ಸ್ಕ್ರೀನ್‌) ಯಲ್ಲಿ ರ್ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಶ್ರೀರಾಮನ ಆಶೀರ್ವಾದ ಪಡೆದ ಯೋಗಿಯವರು ಬಳಿಕ ರಾಮದರ್ಬಾರ್‌ಗೆ ಭೇಟಿ ನೀಡಿ, ಸಮೀಪದ ಹನುಮಾನ್‌ಗಢಿಗೆ ತೆರಳಿದರು. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಯೋಗಿ, ‘ಈ ಕಾರ್ಯಕ್ರಮವು ಏಕ ಭಾರತ, ಶ್ರೇಷ್ಠ ಭಾರತದ ಹೊಸ ಅಭಿವ್ಯಕ್ತಿಯಾಗಿದೆ. 

ಸಿಯಾವರ ಶ್ರೀರಾಮಚಂದ್ರರ ವಿಜಯವಾಗಿದೆ. ಇದು ರಾಮರಾಜ್ಯದ ಕಡೆಗಿನ ಹೆಜ್ಜೆಯಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. ರಸಿಕ ನಿವಾಸ ದೇವಾಲಯದ ಅರ್ಚಕರಾದ ಮಹಾಂತ ರಘುವರ್‌ ಶರಣ್‌ ಮಾತನಾಡಿ, ‘ಈ ವರ್ಷದ ಗಂಗಾ ದಸರಾ ಪವಿತ್ರವೂ, ಐತಿಹಾಸಿಕವೂ ಆಗಿರಲಿದೆ. 500 ವರ್ಷಗಳ ಸುದೀರ್ಘ ಸಂಘರ್ಷದ ಬಳಿಕ ರಾಜಾರಾಮನ ಪ್ರತಿಷ್ಠಾಪನೆಯಾಗಿದೆ’ ಎಂದರು.

ಮೋದಿ ಹರ್ಷ:  ಪ್ರಧಾನಿ ನರೇಮದ್ರ ಮೋದಿ ಟ್ವೀಟ್‌ ಮಾಡಿ, ‘ಅಯೋಧ್ಯೆಯು ಮತ್ತೊಮ್ಮೆ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಭವ್ಯ ಮತ್ತು ದೈವಿಕ ರಾಮ ದರ್ಬಾರ್‌ನ ಪ್ರಾಣ ಪ್ರತಿಷ್ಠೆಯ ಪವಿತ್ರ ಸಂದರ್ಭವು ಎಲ್ಲಾ ರಾಮ ಭಕ್ತರ ಹೃದಯಗಳನ್ನು ಆಳವಾದ ಭಕ್ತಿ ಮತ್ತು ಸಂತೋಷದಿಂದ ತುಂಬುತ್ತದೆ’ ಎಂದಿದ್ದಾರೆ.

ಭಕ್ತರಿಗೆ ಇನ್ನೂ ಮುಕ್ತವಿಲ್ಲ:ಪ್ರಸ್ತುತ ಸಾರ್ವಜನಿಕರಿಗೆ ರಾಮದರ್ಬಾರ್‌ ಪ್ರವೇಶಕ್ಕೆ ಅವಕಾಶವಿಲ್ಲ. ಇದು ಎಂದಿನಿಂದ ಜನರಿಗೆ ಮುಕ್ತವಾಗಲಿದೆ ಎಂಬ ಬಗ್ಗೆ ಶನಿವಾರ ನಡೆವ ಸಭೆಯ ಬಳಿಕ ತಿಳಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

PREV
Read more Articles on

Recommended Stories

ಫೇಸ್‌ಬುಕ್ಕಲ್ಲಿ ರಾಜಕೀಯ ಜಾಹೀರಾತು ಸ್ಥಗಿತ: ಯುರೋಪ್‌ನಲ್ಲಿ ಜಾರಿ
ರಾಹುಲ್‌ ಗಾಂಧಿ 2ನೇ ಅಂಬೇಡ್ಕರ್‌: ಕಾಂಗ್ರೆಸ್‌ ನಾಯಕ ಉದಿತ್‌ ರಾಜ್