ಬಿಜೆಡಿ ನಾಯಕ ಪಿನಾಕಿ ಜತೆ ಮಹುವಾ 2ನೇ ಮದುವೆ

KannadaprabhaNewsNetwork |  
Published : Jun 06, 2025, 12:10 AM ISTUpdated : Jun 06, 2025, 04:46 AM IST
ಮಹುವಾ | Kannada Prabha

ಸಾರಾಂಶ

ವಿವಾದಗಳಿಂದಲೇ ಆಗಾಗ ಸುದ್ದಿಯಾಗುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಿಜು ಜನತಾ ದಳದ (ಬಿಜೆಡಿ) ಹಿರಿಯ ನಾಯಕ, ಒಡಿಶಾದ ಪುರಿಯ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಜರ್ಮನಿಯಲ್ಲಿ 2ನೇ ಮದುವೆಯಾಗಿದ್ದಾರೆ.  

 ಕೋಲ್ಕತಾ: ವಿವಾದಗಳಿಂದಲೇ ಆಗಾಗ ಸುದ್ದಿಯಾಗುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಿಜು ಜನತಾ ದಳದ (ಬಿಜೆಡಿ) ಹಿರಿಯ ನಾಯಕ, ಒಡಿಶಾದ ಪುರಿಯ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಜರ್ಮನಿಯಲ್ಲಿ 2ನೇ ಮದುವೆಯಾಗಿದ್ದಾರೆ. ಮದುವೆ ಅಲಂಕಾರದಲ್ಲಿ ಇಬ್ಬರೂ ಕೈಕೈ ಹಿಡಿದು ನಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

51 ವರ್ಷದ ಮಹುವಾ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ 2ನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮೊದಲು ಲಾರ್ಸ್​ ಬ್ರೋರ್ಸೆನ್ ಎಂಬುವವರನ್ನು ವಿವಾಹವಾಗಿದ್ದರು, ನಂತರ ವಿಚ್ಛೇದನ ಪಡೆದಿದ್ದರು. ಆ ಬಳಿಕ ವಕೀಲ ಜೈ ಅನಂತ್ ದೇಹಾದ್ರಾಯಿ ಅವರೊಂದಿಗೆ ಸುಮಾರು 3 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಇದೀಗ ಪಿನಾಕಿ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. 66 ವರ್ಷದ ಪಿನಾಕಿ ಮಿಶ್ರಾ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿದ್ದು, ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರಿಗೂ ಇದು 2ನೇ ಮದುವೆ. ಮೊದಲ ಮದುವೆಯಲ್ಲಿ ಇಬ್ಬರು ಮಕ್ಕಳಿದ್ದಾರೆ.

ಬ್ರಿಟಿಷ್ ಕಲಾವಿದೆ ರಚಿಸಿದ್ದ ಗಾಂಧಿ ತೈಲಚಿತ್ರ ಹರಾಜಿಗೆ 

ಲಂಡನ್: ಬ್ರಿಟಿಷ್ ಕಲಾವಿದೆ ಕ್ಲೇರ್ ಲೇಯ್ಟನ್ ಅವರು 1931ರಲ್ಲಿ ಮಹಾತ್ಮ ಗಾಂಧಿಯವರನ್ನು ಸಂದರ್ಶಿಸಿ ರಚಿಸಿದ್ದ ಅವರ ತೈಲ ಭಾವಚಿತ್ರವು ಜುಲೈನಲ್ಲಿ ಖಾಸಗಿ ಒಡೆತನದ ಅಂತಾರಾಷ್ಟ್ರೀಯ ಹರಾಜು ಸಂಸ್ಥೆ ಬೋನ್‌ಹ್ಯಾಮ್ಸ್‌ನಲ್ಲಿ ಹರಾಜಾಗಲಿದೆ. ಇದರ ಬೆಲೆ ಅಂದಾಜು 58 ಲಕ್ಷದಿಂದ 81 ಲಕ್ಷ ರು.ಗೆ ತಲುಪಲಿದೆ.

ಮಹಾತ್ಮ ಗಾಂಧಿಯವರನ್ನು ಕುಳ್ಳಿರಿಸಿ ಪ್ರತ್ಯಕ್ಷವಾಗಿ ರಚಿಸಲ್ಪಟ್ಟಿರುವ ಏಕೈಕ ತೈಲ ಭಾವಚಿತ್ರ ಇದಾಗಿದೆ. ವ್ಯಕ್ತಿಯೊಬ್ಬರ ಭಾವಚಿತ್ರವು ಹರಾಜಿನಲ್ಲಿ ಮಾರಾಟವಾಗುತ್ತಿರುವುದು ಸಹ ಇದೇ ಮೊದಲು.ಬ್ರಿಟಿಷ್ ಕಲಾವಿದೆ ಕ್ಲೇರ್ ಲೇಯ್ಟನ್ 1931ರಲ್ಲಿ ತಮ್ಮ ಪ್ರಿಯಕರ, ರಾಜಕೀಯ ಪತ್ರಕರ್ತ ಹೆನ್ರಿ ನೋಯೆಲ್ ಬ್ರೈಲ್ಸ್‌ಫೋರ್ಡ್ ಅವರ ಜತೆ ಮಹಾತ್ಮ ಗಾಂಧಿಯವರನ್ನು ಲಂಡನ್‌ನಲ್ಲಿ ಭೇಟಿಯಾಗಿದ್ದರು. ಆಗ ಗಾಂಧೀಜಿ ಎದುರೇ ಕುಳಿತು ಅವರ ಭಾವಚಿತ್ರವನ್ನು ರಚಿಸಿದ್ದರು. 1989ರಲ್ಲಿ ಲೇಯ್ಟನ್ ನಿಧನರಾಗುವವರೆಗೂ ಈ ಭಾವಚಿತ್ರ ಅವರ ಬಳಿಯಲ್ಲಿಯೇ ಇತ್ತು. ಆಕೆಯ ನಿಧನಾನಂತರ ಕುಟುಂಬಸ್ಥರು ಭಾವಚಿತ್ರವನ್ನು ಹಸ್ತಾಂತರಿಸಿದ್ದಾರೆ.

ಜು.7ರಿಂದ 15ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ.

   ಕುಖ್ಯಾತ ನಕ್ಸಲ್‌ ನಾಯಕ ಸುಧಾಕರ್‌ ಹತ್ಯೆ  

 ಬಿಜಾಪುರ : ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತೊಂದು ಯಶ ಕಂಡಿದ್ದು, ಛತ್ತೀಸ್‌ಗಢ ಭದ್ರತಾ ಪಡೆಗಳು ಗುರುವಾರ ನಿಷೇಧಿತ ನಕ್ಸಲ್‌ ನಾಯಕ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯ ಸುಧಾಕರ್‌ನನ್ನು (66) ಹತ್ಯೆ ಮಾಡಿವೆ. ರಾಜ್ಯದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಘಟನೆ ನಡೆದಿದೆ.

ಟೆಂಟು ಲಕ್ಷ್ಮಿ ನರಸಿಂಹ ಚಲಂ ಅಲಿಯಾಸ್ ಗೌತಮ್ ಅಥವಾ ಸುಧಾಕರ್ ಅಲಿಯಾಸ್ ಸೋಮಣ್ಣನ ತಲೆಗೆ 40 ಲಕ್ಷ ರು. ಬಹುಮಾನವಿತ್ತು. ದೇಶದ ನಂ.1 ನಕ್ಸಲ್‌ ನಾಯಕ ಬಸವರಾಜು ಹತ್ಯೆ ಆದ ಕೆಲವೇ ದಿನಗಳಲ್ಲಿ ಈತ ಹೆಣವಾಗಿದ್ದಾನೆ,

ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಮೂಲದ ಸುಧಾಕರ್ ಇತ್ತೀಚೆಗೆ ಕೇಂದ್ರ ಸಮಿತಿ ಸದಸ್ಯರಾಗಿ ಬಡ್ತಿ ಪಡೆದ್ದ. ಅಲ್ಲದೆ, ಸಾಕಷ್ಟು ನರಮೇಧಗಳ ರೂವಾರಿಯಾಗಿದ್ದ. ಸುಧಾಕರ್, ತೆಲಂಗಾಣ ರಾಜ್ಯ ಸಮಿತಿ ಸದಸ್ಯ ಬಂಡಿ ಪ್ರಕಾಶ್ ಮತ್ತು ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯ ಪಪ್ಪಾ ರಾವ್ ಸೇರಿದಂತೆ ಹಿರಿಯ ಮಾವೋವಾದಿ ಕಾರ್ಯಕರ್ತರು ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಗುರುವಾರ ಎನ್‌ಕೌಂಟರ್ ನಡೆಸಲಾಯಿತು ಎಂದು ಬಸ್ತರ್ ವಲಯ ಐಜಿ ಸುಂದರರಾಜ್ ಪಟ್ಟಿಲಿಂಗಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಸ್ಕ್‌ ನನಗೆ ನಿರಾಶೆ ಮೂಡಿಸಿದ್ದಾರೆ: ಟ್ರಂಪ್ ವಾಗ್ದಾಳಿ

ವಾಷಿಂಗ್ಟನ್‌: ಅಮೆರಿಕ ಸರ್ಕಾರದ ಸಲಹೆಗಾರ ಹುದ್ದೆಯನ್ನು ಇತ್ತೀಚೆಗೆ ತ್ಯಜಿಸಿದ್ದ ತಮ್ಮ ಆಪ್ತ ಎಲಾನ್‌ ಮಸ್ಕ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಇಬ್ಬರ ಸಂಬಂಧ ಹಳಸಿದ್ದು ಸಾಬೀತಾಗಿದೆ.‘ಟ್ರಂಪ್‌ ಜಾರಿಗೆ ಬಯಸಿರುವ ತೆರಿಗೆ ಮಸೂದೆ ಅಪಾಯಕರ. ಅದನ್ನು ಕೊಲ್ಲಿ’ ಎಂದು ಮಸ್ಕ್‌ ಮೊನ್ನೆ ಹೇಳಿದ್ದರು. ಈ ಬಗ್ಗೆ ಗುರುವಾರ ಮಾತನಾಡಿದ ಟ್ರಂಪ್‌, ‘ಎಲಾನ್ ಮತ್ತು ನಾನು ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ನಾವು ಇನ್ನು ಮುಂದೆ ಮುಂದುವರಿಯುತ್ತೇವೆಯೇ ಎಂದು ನನಗೆ ತಿಳಿದಿಲ್ಲ. ಎಲಾನ್‌ ಬಗ್ಗೆ ನನಗೆ ತುಂಬಾ ನಿರಾಶೆಯಾಗಿದೆ’ ಎಂದರು.

ಮತ್ತೆ 275 ಜನರಿಗೆ ಕೋವಿಡ್, 7 ಸಾವು ; ಸೋಂಕಿತರ ಸಂಖ್ಯೆ 4,578ಕ್ಕೇರಿಕೆ

ನವದೆಹಲಿ: ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಹೊಸ 276 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 4,578ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.5 ತಿಂಗಳು ಗಂಡು ಮಗು ಸೇರಿದಂತೆ 7 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಕರ್ನಾಟಕ, ಇಬ್ಬರು ದೆಹಲಿ, ಮೂವರು ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ. ಹೊಸ ಅಲೆಯಲ್ಲಿ ಒಟ್ಟು 3,281 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

PREV
Read more Articles on

Recommended Stories

ವಸುಧೈವ ಕುಟುಂಬಕಂ’ ಆಶಯದ ಮೂರ್ತರೂಪ ಮೋಹನ್ ಭಾಗವತ್ ಜೀ
ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಮಸ್ಕ್‌ ಔಟ್‌: ಲ್ಯಾರಿ ಈಗ ನಂ.1