ಥಾಯ್ಲೆಂಡ್‌ನಲ್ಲಿ ರೈಲಿನ ಮೇಲೆ ಕ್ರೇನ್‌ ಬಿದ್ದು 30 ಸಾವು

KannadaprabhaNewsNetwork |  
Published : Jan 15, 2026, 02:00 AM IST
thailand train accident

ಸಾರಾಂಶ

ಈಶಾನ್ಯ ಥಾಯ್ಲೆಂಡ್‌ನಲ್ಲಿ ಪ್ರಯಾಣಿಕ ರೈಲೊಂದರ ಮೇಲೆ ಕಟ್ಟಡ ನಿರ್ಮಾಣದ ಕ್ರೇನ್‌ವೊಂದು ಬಿದ್ದು ಕನಿಷ್ಠ 30 ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಸಂಭವಿಸಿದೆ. ದುರಂತದಲ್ಲಿ 64 ಮಂದಿ ಗಾಯಗೊಂಡಿದ್ದಾರೆ.

ಬ್ಯಾಂಕಾಕ್‌: ಈಶಾನ್ಯ ಥಾಯ್ಲೆಂಡ್‌ನಲ್ಲಿ ಪ್ರಯಾಣಿಕ ರೈಲೊಂದರ ಮೇಲೆ ಕಟ್ಟಡ ನಿರ್ಮಾಣದ ಕ್ರೇನ್‌ವೊಂದು ಬಿದ್ದು ಕನಿಷ್ಠ 30 ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಸಂಭವಿಸಿದೆ. ದುರಂತದಲ್ಲಿ 64 ಮಂದಿ ಗಾಯಗೊಂಡಿದ್ದಾರೆ.

ಬ್ಯಾಂಕಾಕ್‌ನಿಂದ ರಚಥನಿ ಪ್ರಾಂತ್ಯಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಎತ್ತರದ ಅತಿ ವೇಗದ ರೈಲುಮಾರ್ಗ ನಿರ್ಮಾಣಕ್ಕೆ ಬಳಸುತ್ತಿದ್ದ ಕ್ರೇನ್‌ ಕಳಚಿ ಬಿದ್ದಿದೆ. ಇದರಿಂದ ರೈಲು ಹಳಿ ತಪ್ಪಿ ಬೆಂಕಿ ಹೊತ್ತಿಕೊಂಡಿದೆ.

ನಖೋನ್ ರಚಸಿಮಾ ಪ್ರದೇಶದಲ್ಲಿ ಘಟನೆ ನಡೆದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಖೋನ್ ರಚಸಿಮಾ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಗಾಯಕ ಗರ್ಗ್‌ ಸಾವು ಕೊಲೆಯಲ್ಲ: ಸಿಂಗಾಪುರ ಪೊಲೀಸ್‌

ಸಿಂಗಾಪುರ: ‘ಅಸ್ಸಾಂನ ಗಾಯಕ ಜುಬೀನ್ ಗರ್ಗ್ ಅವರ ಸಾವು ಕೊಲೆಯಲ್ಲ. ಸಿಂಗಾಪುರ ಪ್ರವಾಸದ ವೇಳೆ ಗರ್ಗ್‌ ಅವರು ಅತಿಯಾಗಿ ಮದ್ಯ ಸೇವಿಸಿದ್ದರು. ಸ್ಕೂಬಾ ಡೈವ್ ವೇಳೆ ಎರಡನೇ ಬಾರಿ ನೀರಿಗೆ ಇಳಿಯುವಾಗ ಲೈಫ್‌ ಜಾಕೆಟ್‌ ಸಹ ನಿರಾಕರಿಸಿದ್ದರು’ ಎಂದು ಸಿಂಗಾಪುರ ತನಿಖಾ ತಂಡವು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.ಈ ಮೂಲಕ ಗರ್ಗ್‌ ಅವರನ್ನು ಆಪ್ತರೇ ಕೊಲೆ ಮಾಡಿದ್ದಾರೆ ಎಂಬ ಅಸ್ಸಾಂ ಸರ್ಕಾರದ ವಾದಕ್ಕೆ ಹಿನ್ನಡೆಯಾಗಿದೆ.

ಜುಬೀನ್‌ ಗರ್ಗ್‌ ಅವರು ಸಿಂಗಾಪುರದಲ್ಲಿ ಮದ್ಯ ಸೇವಿನೆ, ಲೈಫ್‌ ಜಾಕೆಟ್‌ ಇಲ್ಲದೇ ನೀರಿಗೆ ಜಿಗಿದಿದ್ದನ್ನು ಅಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ವೀಕ್ಷಿಸಿದ್ದಾರೆ. ಹೀಗಾಗಿ ಈ ಘಟನೆ ಕೊಲೆಯಲ್ಲ ಎಂದು ತನಿಖಾಧಿಕಾರಿ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ನೀರಿನಲ್ಲಿರುವಾಗ ಜುಬೀನ್‌ ಅವರು ಪರದಾಡುತ್ತಿದ್ದನ್ನು ಕಂಡು ಯಾಚ್‌ ದೋಣಿಯವರು ಪ್ರಮಾಣಿಕವಾಗಿ ಸಹಾಯ ಮಾಡಿ, ಮೇಲೆತ್ತಿದ್ದರು. ಬಳಿಕ ತುರ್ತು ಸ್ಪಂದನೆ ರೀತಿ ಸಿಪಿಆರ್‌ ಸಹ ಮಾಡಿದ್ದರು. ಆದರೆ ಆಸ್ಪತ್ರೆಯಲ್ಲಿ ಜುಬೀನ್‌ ಕೊನೆಯುಸಿರೆಳೆದಿದ್ದರು’ ಎಂದು ಸಿಂಗಾಪುರ ಪೊಲೀಸರು ಹೇಳಿದ್ದಾರೆ.

ಇರಾನ್‌, ರಷ್ಯಾ ಸೇರಿ 75 ದೇಶಗಳಿಗೆ ಅಮೆರಿಕ ವೀಸಾ ಸ್ಥಗಿತ

ವಾಷಿಂಗ್ಟನ್: ತನಗೆ ಆಗಿಬರದ ದೇಶಗಳ ಮೇಲೆ ಪ್ರಹಾರ ಮುಂದುವರಿಸಿರುವ ಅಮೆರಿಕ, ಇರಾನ್‌ ಹಾಗೂ ರಷ್ಯಾ ಸೇರಿ 75 ದೇಶಗಳ ನಾಗರಿಕರ ವೀಸಾ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ದೇಶಗಳಲ್ಲಿ ಸೊಮಾಲಿಯಾ, ಅಫ್ಘಾನಿಸ್ತಾನ, ಬ್ರೆಜಿಲ್, ಇರಾಕ್, ಈಜಿಪ್ಟ್, ನೈಜೀರಿಯಾ, ಥಾಯ್ಲೆಂಡ್, ಯೆಮೆನ್ ಕೂಡ ಇದರಲ್ಲಿ ಸೇರಿವೆ.

ಇಂದು ದೇಶ ಅತಿ ಶ್ರೀಮಂತ ಮುಂಬೈ ಪಾಲಿಕೆ ಚುನಾವಣೆ

ಮುಂಬೈ: ದೇಶದ ಅತಿ ಶ್ರೀಮಂತ ಮಹಾನಗರ ಪಾಲಿಕೆ ಎನ್ನಿಸಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಮಹಾರಾಷ್ಟ್ರದ 29 ನಗರಗಳ ಬಹುನಿರೀಕ್ಷಿತ ಪಾಲಿಕೆ ಚುನಾವಣೆ ಗುರುವಾರ ನಡೆಯಲಿದೆ. ಶುಕ್ರವಾರವೇ ಮತ ಎಣಿಕೆ ಸಹ ನಡೆಯಲಿದೆ.

ಮುಂಬೈ ಮಹಾನಗರ ಪಾಲಿಕೆಯ ಬಜೆಟ್‌ 2025-26ರಲ್ಲಿ 74 ಸಾವಿರ ಕೋಟಿ ರು. ಆಗಿತ್ತು. ಇದು ಅತಿ ಶ್ರೀಮಂತ ಪಾಲಿಕೆ ಎನ್ನಿಸಿಕೊಂಡಿದ್ದು, ಯಾರು ಚುಕ್ಕಾಣಿ ಹಿಡಿಯಬಹುದು ಎಂದು ಸಹಜವಾಗಿಯೇ ದೇಶದ ಕುತೂಹಲ ಕೆರಳಿಸಿದೆ.ರಾಜ್ಯಾದ್ಯಂತ ಒಟ್ಟು 893 ವಾರ್ಡ್‌ಗಳ 2869 ಸೀಟುಗಳಿಗೆ ಬೆಳಗ್ಗೆ 7.30ರಿಂದ ಸಂಜೆ 5.30ರವರೆಗೆ ಮತದಾನ ನಡೆಯಲಿದೆ. ಒಟ್ಟು 3.48 ಕೋಟಿ ಮತದಾರರು 15931 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ.

ಇನ್ನು ಮುಂಬೈನಲ್ಲಿ ಆಡಳಿತ ಶಿವಸೇನೆ (ಶಿಂಧೆ)- ಬಿಜೆಪಿ ಮಹಾಯುತಿ ಕೂಟದಿಂದ ಸ್ಪರ್ಧಿಸುತ್ತಿದ್ದರೆ, ಎನ್‌ಸಿಪಿ (ಅಜಿತ್‌) ಒಂಟಿಯಾಗಿ ಕಣಕ್ಕಿಳಿದಿದೆ. ಮತ್ತೊಂದೆಡೆ ಶಿವಸೇನೆ (ಉದ್ಧವ್‌) ಮತ್ತು ರಾಜ್‌ ಠಾಕ್ರೆ ಎಂಎನ್ಎಸ್‌ ಜಂಟಿಯಾಗಿ ಮುಂಬೈ ಮೇಲೆ ಕಣ್ಣಿಟ್ಟಿದೆ. ಅತ್ತ ಕಾಂಗ್ರೆಸ್‌ ಪಕ್ಷವು ಇಂಡಿಯಾ ಕೂಟದಿಂದ ಹೊರಗುಳಿದು ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ್‌ ಆಘಾಡಿ ಜತೆ ಕೈಜೋಡಿಸಿದೆ.

ಹೈವೇಲಿ ಹಸು ಇದ್ರೆ 10 ಕಿ.ಮೀ ಮೊದಲೇ ಮೆಸೇಜ್‌!

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡಾಡಿ ಹಸುಗಳಿಂದ ಉಂಟಾಗಬಹುದಾದ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರವು ಪ್ರಾಯೋಗಿಕ ಯೋಜನೆ ಜಾರಿ ತಂದಿದೆ. ಹಸುಗಳ ಚಲನವಲನ ಗಮನಿಸಿ, 10 ಕಿ.ಮೀ ಮುನ್ನವೇ ಚಾಲಕರಿಗೆ ಎಸ್ಸೆಮ್ಮೆಸ್‌ ಬರುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅದು ಜೈಪುರ - ಆಗ್ರಾ ಮತ್ತು ಜೈಪುರ - ರೇವಾರಿ ಹೆದ್ದಾರಿಗಳಲ್ಲಿ ಆರಂಭಿಸಿದೆ.ಇದಕ್ಕಾಗಿ ಜಿಯೋ ಜತೆ ಎನ್‌ಎಚ್‌ಎಐ ಒಪ್ಪಂದ ಮಾಡಿಕೊಂಡಿದೆ.

ಈ ಹಿಂದೆ ಪ್ರಾಣಿಗಳ ಪ್ರವೇಶದಿಂದಾಗಿರುವ ಅಪಘಾತಗಳ ಅಧ್ಯಯನ ನಡೆಸಿ, ಅಪಘಾತ ವಲಯವೆಂದು ಪರಿಗಣಿಸಲಾಗಿರುವ ಸ್ಥಳದಲ್ಲಿ ಹಸುವಿನ ಸಂಚಾರ ಗಮನಿಸಿ 10 ಕಿ.ಮೀ ಮುನ್ನವೇ ಮೆಸೇಜ್‌ ಬರಲಿದೆ. ಹಿಂದಿ ಭಾಷೆಯಲ್ಲಿ ‘ಮುಂದೆ ಹಸುವಿದೆ, ನಿಧಾನವಾಗಿ ಚಲಿಸಿ’ ಎಂಬ ಧ್ವನಿ ಮೆಸೇಜ್‌ ಜೊತೆಗೆ ಸಂದೇಶವೂ ಬರಲಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶೀಘ್ರ ಇರಾನ್‌ ತೊರೆಯಿರಿ : ಭಾರತೀಯರಿಗೆ ಸೂಚನೆ
ತಿರುಮಲ : ಚಪ್ಪಲಿ ಸಮಸ್ಯೆಗೆ ಕ್ಯು ಆರ್‌ ಕೋಡ್‌ ಪರಿಹಾರ!