ಮುಂಬೈ: ಆನ್‌ಲೈನ್ ವಿಡಿಯೋ ಗೇಮ್ ಆಡುವಾಗ ನಟ ಅಕ್ಷಯ್ ಕುಮಾರ್ ಅವರ 13 ವರ್ಷದ ಮಗಳ ನಗ್ನ ಚಿತ್ರಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಮಹಾರಾಷ್ಟ್ರ ಸೈಪರ್ ಅಪರಾಧ ಇಲಾಖೆ ಬಂಧಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸೈಬರ್ ಜಾಗೃತಿ ಮಾಸದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ನಟ, ಆನ್‌ಲೈನ್ ಆಟ ಆಡುವ ವೇಳೆ ವ್ಯಕ್ತಿಯೊಬ್ಬ ತಮ್ಮ ಪುತ್ರಿಯ ಬಳಿ ನಗ್ನ ಚಿತ್ರ ಕಳಿಸುವಂತೆ ಕೇಳಿದ್ದ ಘಟನೆಯನ್ನು ವಿವರಿಸಿದ್ದರು. ಅದರ ಬೆನ್ನಲ್ಲೇ ಸೈಬರ್ ವಿಭಾಗ ತನಿಖೆಯನ್ನು ಆರಂಭಿಸಿತ್ತು. ಇದೀಗ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಪಿಟಿಐ ನಾಗ್ಪುರಭಾರತೀಯ ನಾಗರಿಕರು 4 ಮಕ್ಕಳನ್ನು ಪಡೆದು ಅವರಲ್ಲಿ ಒಬ್ಬರನ್ನು ಆರ್‌ಎಸ್‌ಎಸ್‌ಗೆ ಅರ್ಪಿಸಬೇಕು ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮದ ಆಧ್ಯಾತ್ಮಿಕ ಗುರು ಬಾಬಾ ಧೀರೇಂದ್ರ ಕೃಷ್ಣ ಶಾಸ್ತ್ರಿ ಮನವಿ ಮಾಡಿದ್ದಾರೆ.
ನಾಗ್ಪುರದಲ್ಲಿ ನಡೆದ ದೇಗುಲವೊಂದರ ಗುದ್ದಲಿ ಪೂಜೆ ಸಮಾರಂಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರ ಸಮ್ಮುಖದಲ್ಲಿ ಮಾತನಾಡಿದ ಶಾಸ್ತ್ರಿ, ‘ಆರ್‌ಎಸ್‌ಎಸ್ ಸ್ವಯಂಸೇವಕರು ಸಾಮಾಜಿಕ ಕಾರ್ಯಗಳಲ್ಲಿ ಕೊಡುಗೆ ನೀಡಿದ್ದಾರೆ. ಇದು ಪ್ರಶಂಸಾರ್ಹ. ಭಾರತೀಯ ನಾಗರಿಕರು 4 ಮಕ್ಕಳನ್ನು ಪಡೆದು ಅವರಲ್ಲಿ ಒಬ್ಬರನ್ನು ಆರ್‌ಎಸ್‌ಎಸ್‌ಗೆ ಅರ್ಪಿಸಬೇಕು’ ಎಂದು ಕರೆ ನೀಡಿದರು.
ಮುಂಬೈ: ಮಧ್ಯಪ್ರದೇಶದ ಬಾಗೇಶ್ವರ ಧಾಮದ ಧರ್ಮಗುರು ಬಾಬಾ ಧೀರೇಂದ್ರ ಕೃಷ್ಣ ಶಾಸ್ತ್ರಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಅವರು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ನಾಗ್ಪುರದಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ದೇಗುಲ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶಿವಾಜಿ ಮಹಾರಾಜರು ತಮ್ಮ ಜೀವನದ ಕೊನೆಯಲ್ಲಿ ಅನೇಕ ಯುದ್ಧಗಳಿಂದ ದಣಿದಿದ್ದರು. ನಂತರ, ಮರಾಠಾ ರಾಜ್ಯದ ಆಡಳಿತವನ್ನು ಸಂತ ರಾಮದಾಸ ಸ್ವಾಮಿಗಳಿಗೆ ವಹಿಸಲು ಮುಂದಾಗಿದ್ದರು. ಆದರೆ ಅದಕ್ಕೆ ರಾಮದಾಸರು ಬೇಡ ಎಂದು ಹೇಳಿ ಕಿರೀಟವನ್ನು ಪುನಃ ಶಿವಾಜಿ ತಲೆ ಮೇಲೆ ಇಟ್ಟರು’ ಎಂದರು.
ಈ ಹೇಳಿಕೆಯು ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ, ‘ಶಾಸ್ತ್ರಿ ಐತಿಹಾಸಿಕ ಸತ್ಯಗಳನ್ನು ತಿರುಚಿದ್ದಾರೆ. ಶಿವಾಜಿ ತಮ್ಮ ರಾಜ್ಯವನ್ನು ರಾಮದಾಸ ಸ್ವಾಮಿಗಳಿಗೆ ಹಸ್ತಾಂತರಿಸಿದರು ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಐತಿಹಾಸಿಕ ಪುರಾವೆಗಳಿಲ್ಲ’ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅಲ್ಲದೆ, ಸಮಾರಂಬದಲ್ಲಿ ಹಾಜರಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್, ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರ.
ಕುಡಿದು ರಸ್ತೇಲಿ ಮೂತ್ರ ಮಾಡಿ ಸಿಕ್ಕಿಬಿದ್ದಿದ್ದೆ: ಕಾಶ್ ಪಟೇಲ್
ವಾಷಿಂಗ್ಟನ್: ‘ಅಪ್ರಾಪ್ತನಾಗಿದ್ದಾಗ ಮದ್ಯಪಾನ ಮಾಡಿದ್ದಕ್ಕಾಗಿ ಹಾಗೂ ರಸ್ತೆ ಬದಿ ಮೂತ್ರವಿಸರ್ಜನೆ ಮಾಡಲು ಮುಂದಾಗಿದ್ದಕ್ಕಾಗಿ 2 ಬಾರಿ ಪೊಲೀಸರು ನನ್ನನ್ನು ಬಂಧಿಸಿದ್ದರು’ ಎಂದು ಅಮೆರಿಕದ ಗುಪ್ತಚರ ಇಲಾಖೆ ಎಫ್‌ಬಿಐನ ನಿರ್ದೇಶಕ ಕಾಶ್ ಪಟೇಲ್ ಒಪ್ಪಿಕೊಂಡಿದ್ದಾರೆ. 2005ರಲ್ಲಿ ಪಟೇಲ್ ಬರೆದಿದ್ದ ಪತ್ರವೊಂದರಲ್ಲಿ, ‘2001ರಲ್ಲಿ ವರ್ಜೀನಿಯಾ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಪ್ರಾಪ್ತನಾಗಿದ್ದರೂ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದೆ. ಕೆಲ ವರ್ಷಗಳ ಬಳಿಕ ಗೆಳೆಯರೊಂದಿಗೆ ಮದ್ಯ ಸೇವಿಸಿ ಮರಳುತ್ತಿದ್ದ ವೇಳೆ ರಸ್ತೆ ಬದಿ ಮೂತ್ರ ವಿಸರ್ಜಿಸಲು ಮುಂದಾಗಿದ್ದೆ. ಆಗ ಪೊಲೀಸರು ಬಂಧಿಸಿದ್ದರು’ ಎಂದು ಉಲ್ಲೇಖಿಸಲಾಗಿದೆ.ಇತ್ತೀಚೆಗಷ್ಟೇ, ಕಾಶ್ ಅತಿಯಾದ ಕುಡಿತದಿಂದಾಗಿ ತಮ್ಮ ಹುದ್ದೆಯಿಂದ ವಜಾ ಆಗಬಹುದು ಎಂದು ವರದಿಯಾಗಿತ್ತು.
ಪುಟಿನ್ ಆಡಳಿತದ ವಿರುದ್ದ ಹೆಚ್ಚಿದ ಅಸಮಾಧಾನ
ಮಾಸ್ಕೋ: ಅಂತಾರಾಷ್ಟ್ರೀಯ ನಿರ್ಬಂಧ ಹಾಗೂ ಯುದ್ಧದಿಂದ ಕಂಗೆಟ್ಟಿರುವ ಆರ್ಥಿಕತೆಯಿಂದಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಇದೀಗ ದಿನೇ ದಿನೆ ಜನಾಕ್ರೋಶ ಹೆಚ್ಚಾಗುತ್ತಿದೆ. ರಷ್ಯಾದ ಕೆಲ ಪ್ರಭಾವಿಗಳು ಪುಟಿನ್ ಸರ್ಕಾರದ ನೀತಿಗಳನ್ನು ಬಹಿರಂಗವಾಗಿಯೇ ಟೀಕಿಸಲಾರಂಭಿಸಿದ್ದು, ‘ಯುದ್ಧದ ಕಾರಣ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂಟರ್ನೆಟ್ ಮೇಲಿನ ನಿರ್ಬಂಧದಿಂದ ದೈನಂದಿನ ಚಟುವಟಿಕೆಗೆ ಅಡ್ಡಿ ಆಗುತ್ತಿದೆ’ ಎಂದು ದೂರಿದ್ದಾರೆ.
ಈ ನಡುವೆ ಪುಟಿನ್ ಅವರ ಹಲವು ಬೆಂಬಲಿಗರು ಬಂಡಾಯದ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಈ ಕುರಿತಂತೆ ರಷ್ಯಾದ ಜನಪ್ರಿಯ ಬ್ಲಾಗರ್ ವಿಕ್ಟೋರಿಯಾ ಬೊನ್ಯಾ ಅವರು 19 ನಿಮಿಷಗಳ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದು, ಅದಕ್ಕೆ 31 ದಶಲಕ್ಷ ವ್ಯೂಗಳು ಬಂದಿವೆ.
ನೆರೆ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸದಿರುವುದು, ಸೈಬೀರಿಯಾದ ರೈತರ ಪ್ರತಿಭಟನೆ, ಇಂಟರ್ನೆಟ್ ಮೇಲಿನ ನಿರ್ಬಂಧಗಳು ಹಾಗೂ ಸಣ್ಣ ವ್ಯಾಪಾರಿಗಳ ಸಂಕಷ್ಟದ ವಿಚಾರವನ್ನು ವಿಡಿಯೋ ಮೂಲಕ ಪುಟಿನ್ ಗಮನಕ್ಕೆ ತಂದಿದ್ದಾರೆ.‘ನಾನು ಪುಟಿನ್‌ರನ್ನು ಬೆಂಬಲಿಸುತ್ತೇನೆ’ ಎಂದಿರುವ ಬೊನ್ಯಾ, ‘ಜನಸಾಮಾನ್ಯರು ಮತ್ತು ಅಧಿಕಾರಿಗಳು ಸತ್ಯ ಹೇಳಲು ಹೆದರುತ್ತಾರೆ. ಜನ ಉಸಿರುಗಟ್ಟಿ ಕಿರುಚುತ್ತಿದ್ದಾರೆ. ಅವರನ್ನು ಪೂರ್ಣವಾಗಿ ಲೂಟಿ ಮಾಡಲಾಗಿದೆ. ಅವರ ದರೋಡೆ ಇದೇ ರೀತಿ ಮುಂದುವರಿಯುತ್ತದೆ. ಉದ್ಯಮಗಳು ನಾಶವಾಗುತ್ತಿವೆ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
‘ಬೋನ್ಯಾ ಎತ್ತಿದ ಹಲವು ವಿಚಾರಗಳಿಗೆ ಸಂಬಂಧಿಸಿ ಕೆಲಸ ಮಾಡಲಾಗುತ್ತಿದೆದೆ. ಈ ವಿಚಾರಗಳನ್ನು ಕಡೆಗಣಿಸಲ್ಲ’ ಎಂದು ಪುಟಿನ್ ಅವರ ವಕ್ತಾರ ಡಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.