ಜಾಹೀರಾತಿಗೆ ಸರ್ಕಾರಿ ಹಣ ದುರ್ಬಳಕೆ: ಕೇಜ್ರಿ ವಿರುದ್ಧ ಎಫ್‌ಐಆರ್‌

KannadaprabhaNewsNetwork |  
Published : Mar 12, 2025, 12:47 AM IST
ಕೇಜ್ರಿವಾಲ್ | Kannada Prabha

ಸಾರಾಂಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಹೋರ್ಡಿಂಗ್ಸ್‌ ಅಳವಡಿಕೆಯಲ್ಲಿ ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ನಾಯಕ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಹೋರ್ಡಿಂಗ್ಸ್‌ ಅಳವಡಿಕೆಯಲ್ಲಿ ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ನಾಯಕ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಅರವಿಂದ್ ಕೇಜ್ರಿವಾಲ್, ಆಗಿನ ಶಾಸಕ ಗುಲಾಬ್ ಸಿಂಗ್ ಹಾಗೂ ಆಗಿನ ದ್ವಾರಕಾ ಎ ವಾರ್ಡ್‌ ಕೌನ್ಸಿಲರ್‌ ನಿತಿಕಾ ಶರ್ಮಾ ಅವರು ವಿವಿಧ ಸ್ಥಳಗಳಲ್ಲಿ ದೊಡ್ಡ ಗಾತ್ರದ ಹೋರ್ಡಿಂಗ್ಸ್‌ಗಳನ್ನು ಹಾಕುವ ಮೂಲಕ ಸಾರ್ವಜನಿಕ ಹಣವನ್ನು ಉದ್ದೇಶಪೂರ್ವಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತಕ್ಷಣವೇ ಎಫ್ಐಆರ್‌ ದಾಖಲಿಸುವಂತೆ ಸೂಚಿಸಿದೆ.

==

ಪೋಪ್ ಫ್ರಾನ್ಸಿಸ್ ಪ್ರಾಣಾಪಾಯದಿಂದ ಪಾರು: ವೈದ್ಯರ ಘೋಷಣೆ

ವ್ಯಾಟಿಕನ್: ಕ್ರೈಸ್ತರ ಪರಮೋಚ್ಚ ಧಾರ್ಮಿಕ ಗುರು ಪೋಪ್ ಫ್ರಾನ್ಸಿಸ್ ನ್ಯುಮೋನಿಯಾದಿಂದ ಗುಣಮುಖರಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇನ್ನೂ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.‘ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಆರೋಗ್ಯದಲ್ಲಿ ಉಂಟಾಗಿದ್ದ ವೈಪರೀತ್ಯವನ್ನು ಗಮನದಲ್ಲಿಟ್ಟುಕೊಂಡು ಇನ್ನಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರೆಸುವುದು ಅಗತ್ಯವಾಗಿದೆ’ ಎಂದು ವ್ಯಾಟಿಕನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪೋಪ್ ಫ್ರಾನ್ಸಿಸ್ ನ್ಯುಮೋನಿಯಾ, ಕಿಡ್ನಿ ವೈಫಲ್ಯ, ಶ್ವಾಸಕೋಶದ ಸೋಂಕು ಹಾಗೂ ಸೆಪ್ಸಿಸ್‌ನಿಂದ ಕಳೆದ 3 ವಾರಗಳಿಂದ ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

==

ಏ.1ರಿಂದ ಖಾದಿ ಗ್ರಾಮೋದ್ಯೋಗ ನೌಕರರ ವೇತನ ಶೇ.20 ಹೆಚ್ಚಳ

ನವದೆಹಲಿ: ಖಾದಿ ಗ್ರಾಮೋದ್ಯೋಗಿಗಳ ವೇತನವನ್ನು ಏ.1ರಿಂದ ಶೇ.20ರಷ್ಟು ಹೆಚ್ಚಿಸಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್ ತಿಳಿಸಿದ್ದಾರೆ.‘2023-24ರ ಆರ್ಥಿಕ ವರ್ಷದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟವು 5 ಪಟ್ಟು ಹೆಚ್ಚಾಗಿದ್ದು, 31,000 ಕೋಟಿಯಿಂದ 1,55,000 ಕೋಟಿ ರು.ಗೆ ತಲುಪಿದೆ. ಖಾದಿ ಬಟ್ಟೆಗಳ ಮಾರಾಟವು 6 ಪಟ್ಟು ಹೆಚ್ಚಾಗಿದ್ದು, 1,081 ಕೋಟಿಯಿಂದ 6,496 ಕೋಟಿ ರು.ಗೆ ತಲುಪಿದೆ. ಖಾದಿಯಿಂದ ದೇಶದ ಆರ್ಥಿಕತೆಗೆ ಬಹುದೊಡ್ಡ ಲಾಭವಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ, ಚರಕದಲ್ಲಿ 1 ಲಡಿ ನೂಲಲು 12.50 ರು. ನೀಡಲಾಗುತ್ತಿದ್ದು, ಪರಿಷ್ಕೃತ ವೇತನದ ಪ್ರಕಾರ 15 ರು. ನೀಡಲಾಗುತ್ತದೆ.

==

ಪಾಕಿಸ್ತಾನ ರಾಜತಾಂತ್ರಿಕ ಅಮೆರಿಕದಿಂದ ಗಡೀಪಾರು

ವಾಷಿಂಗ್ಟನ್‌: ಪಾಕಿಸ್ತಾನದ ಹಿರಿಯ ರಾಯಭಾರಿಯೊಬ್ಬರನ್ನು ಅಮೆರಿಕವು ಏರ್ಪೋರ್ಟಿಂದಲೇ ವಾಪಸ್‌ ಕಳುಹಿಸಿದ ಘಟನೆ ನಡೆದಿದೆ. ಈ ಘಟನೆ ಪಾಕಿಸ್ತಾನಕ್ಕೆ ಭಾರೀ ಮುಖಭಂಗ ಉಂಟುಮಾಡಿದೆ.ಲಾಸ್‌ ಏಂಜಲೀಸ್‌ಗೆ ಖಾಸಗಿ ಪ್ರವಾಸಕ್ಕೆ ತೆರಳಿದ್ದ ಪಾಕಿಸ್ತಾನದ ತುರ್ಕ್‌ಮೆನಿಸ್ತಾನ ರಾಯಭಾರಿ ಕೆ.ಕೆ.ವಾಗನ್‌ ಅವರನ್ನು ಏರ್ಪೋರ್ಟಿಂದಲೇ ವಾಪಸ್‌ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

ವಾಗನ್‌ ಅವರ ಬಳಿ ಅಧಿಕೃತ ವೀಸಾ, ಪ್ರಯಾಣ ದಾಖಲೆಗಳಿದ್ದರೂ ಏರ್ಪೋರ್ಟಿಂದ ವಾಪಸ್‌ ಕಳುಹಿಸಲಾಗಿದೆ. ಅವರ ಭೇಟಿ ಕುರಿತು ವಲಸೆ ಅಧಿಕಾರಿಗಳಿಂದ ಕೆಲ ಆಕ್ಷೇಪಗಳು ವ್ಯಕ್ತವಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಮೂಲಗಳ ಪ್ರಕಾರ, ವಾಗಾನ್‌ ಅವರಿಗೆ ಸದ್ಯದಲ್ಲೇ ಪಾಕಿಸ್ತಾನ ಸರ್ಕಾರವು ಸಮನ್ಸ್‌ ಜಾರಿ ಮಾಡಿ ಘಟನೆ ಕುರಿತು ವಿವರಣೆ ಕೇಳುವ ಸಾಧ್ಯತೆ ಇದೆ.

==

ಕೆನಡಾದ ಸ್ಟೀಲ್‌, ಅಲ್ಯುಮಿನಿಯಂ ಮೇಲೆ ಶೇ.50 ತರಿಗೆ: ಟ್ರಂಪ್‌

ವಾಷಿಂಗ್ಟನ್‌: ಅಮೆರಿಕ ಹಾಗೂ ಕೆನಡಾಗಳ ನಡುವೆ ತೆರಿಗೆ- ಪ್ರತಿತೆರಿಗೆ ಸಮರ ಮುಂದುವರೆದಿದೆ. ಇದೀಗ ಕೆನಡಾದಿಂದ ಆಮದಾಗುವ ಸ್ಟೀಲ್‌ ಹಾಗೂ ಅಲ್ಯುಮಿನಿಯಂ ಮೇಲೆ ಈ ಮೊದಲು ವಿಧಿಸಲಾಗಿದ್ದ ಶೇ.25ರಷ್ಟು ತೆರಿಗೆಯನ್ನು ಶೇ.50ಕ್ಕೆ ದ್ವಿಗುಣಗೊಳಿಸುವುದಾಗಿ ಅಧ್ಯಕ್ಷ ಟ್ರಂಪ್‌ ಘೋಷಿಸಿದ್ದಾರೆ.ಒಂಟಾರಿಯೊದ ಪ್ರಾಂತೀಯ ಸರ್ಕಾರವು ಅಮೆರಿಕಕ್ಕೆ ಮಾರಾಟ ಮಾಡುವ ವಿದ್ಯುಚ್ಛಕ್ತಿಯ ಬೆಲೆಯನ್ನು ಹೆಚ್ಚಿಸಿದ್ದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿರುವ ಟ್ರಂಪ್‌, ಕೆನಡಾ ಮೇಲಿನ ಶೇ.50ರಷ್ಟು ತೆರಿಗೆ ಬುಧವಾರದಿಂದಲೇ ಜಾರಿಯಾಗಲಿದೆ ಎಂದು ತಮ್ಮ ಟ್ರುಥ್‌ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಅಮೆರಿಕದ ಷೇರುಮಾರುಕಟ್ಟೆ ಕುಸಿತ ಕಂಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ