ಕಾಶಿ ವಿಶ್ವನಾಥ ದೇಗುಲ ಬದಿಯ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ‘ವ್ಯಾಸ್ ಕಾ ಠಿಖಾನಾ’ದಲ್ಲಿನ ಶೃಂಗಾರ ಗೌರಿ ಹಾಗೂ ಇತರ ಹಿಂದೂ ವಿಗ್ರಹಗಳನ್ನು ಪೂಜಿಸಲು ಹಿಂದೂಗಳಿಗೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ.
ವಾರಾಣಸಿ: ಕಾಶಿ ವಿಶ್ವನಾಥ ದೇಗುಲ ಬದಿಯ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ‘ವ್ಯಾಸ್ ಕಾ ಠಿಖಾನಾ’ದಲ್ಲಿನ ಶೃಂಗಾರ ಗೌರಿ ಹಾಗೂ ಇತರ ಹಿಂದೂ ವಿಗ್ರಹಗಳನ್ನು ಪೂಜಿಸಲು ಹಿಂದೂಗಳಿಗೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ.
ಇದರಿಂದಾಗಿ ಜ್ಞಾನವಾಪಿ ಮಸೀದಿ ಕುರಿತ ಹೋರಾಟದಲ್ಲಿ ಹಿಂದೂ ಪಕ್ಷಗಾರರಿಗೆ ಮಹತ್ವದ ಜಯ ಲಭಿಸಿದಂತಾಗಿದೆ.
1993ರವರೆಗೂ ಜ್ಞಾನವಾಪಿ ತಳಮಹಡಿಯಲ್ಲಿರುವ ಶೃಂಗಾರ ಗೌರಿಗೆ ಕಾಶಿ ವಿಶ್ವನಾಥ ದೇಗುಲದ ಅರ್ಚಕ ಸೋಮನಾಥ ವ್ಯಾಸ್ ಅವರು ಪ್ರತಿನಿತ್ಯ ಪೂಜೆ ಮಾಡುತ್ತಿದ್ದರು.
ಆದರೆ ಬಾಬ್ರಿ ಮಸೀದಿ ಧ್ವಂಸ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಅಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರ ವಿರುದ್ಧ ಅರ್ಜಿ ಸಲ್ಲಿಸಿದ್ದ ವ್ಯಾಸ್ ಅವರ ಮೊಮ್ಮಗ ಶೈಲೇಂದ್ರ ಕುಮಾರ್ ಪಾಠಕ್, ‘ಅಲ್ಲಿ ಪೂಜೆ ಮಾಡಲು ಅನುವು ಮಾಡಿಕೊಡಬೇಕು’ ಎಂದು ಸೆ.25, 2023ರಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಇದರ ತೀರ್ಪನ್ನು ಬುಧವಾರ ತಮ್ಮ ನಿವೃತ್ತಿ ದಿನವೇ ಪ್ರಕಟಿಸಿರುವ ವಾರಾಣಸಿ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಎ.ಕೆ. ವಿಶ್ವೇಶ್, ‘ಪೂಜಿಸುವುದು ಪ್ರತಿಯೊಬ್ಬರ ಹಕ್ಕು.
ಮಸೀದಿಯ ತಳಭಾಗದಲ್ಲಿ ಸೀಲ್ ಮಾಡಲಾಗಿರುವ ವ್ಯಾಸ್ ಕಾ ಠಿಖಾನಾವನ್ನು ತೆರೆದು ಅಲ್ಲಿ ಪೂಜೆ ಮಾಡಬಹುದು. ಈ ಮುಂಚೆ ಪೂಜೆ ಮಾಡುತ್ತಿದ್ದ ಸೋಮನಾಥ ವ್ಯಾಸ್ ಅವರ ಮೊಮ್ಮಗ ಶೈಲೇಂದ್ರ ಕುಮಾರ್ ಪಾಠಕ್ ಪ್ರತಿನಿತ್ಯ ಪೂಜೆ ನಿರ್ವಹಿಸಬೇಕು.
7 ದಿನದಲ್ಲಿ ಅವರಿಗೆ ಪೂಜೆಗೆ ಅನುವು ಮಾಡಿಕೊಡಬೇಕು’ ಎಂದು ಜಿಲ್ಲಾಡಳಿತಕ್ಕೆ ಹಾಗೂ ಕಾಶಿ ವಿಶ್ವನಾಥ ಟ್ರಸ್ಟ್‌ಗೆ ಸೂಚಿಸಿದ್ದಾರೆ.
ಈ ಪೂಜಾ ಸ್ಥಳಕ್ಕೆ ಹೋಗಬೇಕು ಎಂದರೆ ಜ್ಞಾನವಾಪಿಯಲ್ಲಿ ಶಿವಲಿಂಗಾಕೃತಿ ಶಿಲೆ ಪತ್ತೆಯಾದ ವಜುಖಾನಾ ಬಳಿಯ ನಂದಿ ವಿಗ್ರಹದ ಮುಂದೆಯೇ ಹೋಗಬೇಕು. ಅಲ್ಲಿ ಈಗ ಬ್ಯಾರಿಕೇಡ್ ಹಾಕಲಾಗಿದೆ. ಕೋರ್ಟ್ ಆದೇಶದ ಕಾರಣ ಬ್ಯಾರಿಕೇಡ್ ತೆರವಿಗೆ ಜಿಲ್ಲಾಡಳಿತ ಸಿದ್ಧತೆ ನಡೆಸಲಿದೆ.
‘ಇದರಿಂದಾಗಿ ಜ್ಞಾನವಾಪಿ ವಿಚಾರದಲ್ಲಿ ಹಿಂದೂಗಳಿಗೆ ಮತ್ತೊಂದು ಜಯ ಸಿಕ್ಕಿದೆ, ಪೂಜೆಗೆ ಕಾಶಿ ವಿಶ್ವನಾಥ ಟ್ರಸ್ಟ್ ಸಕಲ ಅನುಕೂಲ ಮಾಡಿಕೊಡಲಿದೆ’ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹಾಗೂ ವಿಎಚ್‌ಪಿ ನಾಯಕರು ಹರ್ಷಿಸಿದ್ದಾರೆ.
ಇತ್ತೀಚೆಗೆ ಜ್ಞಾನವಾಪಿ ಮಸೀದಿ ಸಮೀಕ್ಷೆಯಲ್ಲಿ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಕೆಲವು ಹಿಂದೂ ವಿಗ್ರಹಗಳು ಕಂಡುಬಂದಿದ್ದವು.
ಇದೇ ಸ್ಥಳದಲ್ಲಿ 17ನೇ ಶತಮಾನದ ವರೆಗೂ ವಿಶ್ವನಾಥ ಮಂದಿರವಿತ್ತು. ಅಲ್ಲದೆ, ಅನೇಕ ಹಿಂದೂ ದೇವರ ವಿಗ್ರಹಗಳಿದ್ದವು. ಅದನ್ನು ಕೆಡವಿ ಮೊಘಲ್ ದೊರೆ ಔರಂಗಜೇಬ್ ಜ್ಞಾನವಾಪಿ ಮಸೀದಿ ನಿರ್ಮಿಸಿದ ಎಂಬ ವಾದಗಳಿವೆ. ಇದು ವಿವಾದದ ಮೂಲವಾಗಿದೆ.
ತೀರ್ಪಿಗೆ ಮಸೀದಿ ಸಮಿತಿ ವಿರೋಧ: ಆದರೆ ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ಅಂಜುಮ್ ಇನ್ತೆಜಾಮಿಯಾ ಮಸೀದಿ ಸಮಿತಿಯ ಅಖ್ಲಾಖ್ ಅಹ್ಮದ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.