ತಿರುನವಂತಪುರ: ಜ.22ರಂದು ನಡೆದ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ದೇಶದ ಜಾತ್ಯತೀತ ನಂಬಿಕೆಗೆ ಹೊಡೆದ ಕೊನೆಯ ಮೊಳೆ ಎಂದು ಸಿಪಿಎಂ ಕಿಡಿಕಾರಿದೆ.
ಇಲ್ಲಿ 3 ದಿನಗಳ ಕಾಲ ನಡೆದ ಪಕ್ಷದ ಕೇಂದ್ರೀಯ ಸಮಿತಿಯ ಸಭೆಯ ಬಳಿಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ನಾವು ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತಿವೆಯಾದರೂ, ಜ.22ರಂದು ನಡೆದಿದ್ದು ಸಂಪೂರ್ಣ ರಾಜಕೀಯ ಲಾಭದ ಕಾರ್ಯಕ್ರಮವಾಗಿತ್ತು’ ಎಂದು ಟೀಕಿಸಿದೆ.
‘ಸರ್ಕಾರ, ಆಡಳಿತ ಮತ್ತು ರಾಜಕೀಯದಿಂದ ಧರ್ಮವನ್ನು ಬೇರೆ ಇಡಬೇಕು ಎಂಬ ಜಾತ್ಯತೀತ ನಿಲುವಿಗೆ ಮಂದಿರ ಉದ್ಘಾಟನೆ ಕಾರ್ಯಕ್ರಮವು ಹೊಡೆದ ಕೊನೆಯ ಮೊಳೆಯಾಗಿತ್ತು.
ಏಕೆಂದರೆ ಅಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ, ಉತ್ತರಪ್ರದೇಶದ ರಾಜ್ಯಪಾಲ, ಮುಖ್ಯಮಂತ್ರಿಯಾದಿಯಾಗಿ ಇಡೀ ಆಡಳಿತ ಯಂತ್ರವೇ ಭಾಗಿಯಾಗಿತ್ತು.
ಸ್ವತಃ ರಾಷ್ಟ್ರಪತಿ, ಉಪರಾಷ್ಟ್ರಪತಿ ಕೂಡಾ ಶುಭಾಶಯ ಕೋರಿ ಪತ್ರ ಬರೆದ್ದಿದ್ದರು. ಸರ್ಕಾರಿ ಕಚೇರಿಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.
ಎಲ್ಲೆಡೆ ಕಾರ್ಯಕ್ರಮ ನೇರ ಪ್ರಸಾರ ಮಾಡಲಾಯ್ತು. ಇಡೀ ಕಾರ್ಯಕ್ರಮವನ್ನು ರಾಜಕೀಯ ಲಾಭಕ್ಕಾಗಿ ನಡೆಸಲಾಗಿತ್ತು’ ಎಂದು ಪಕ್ಷ ಕಿಡಿಕಾರಿದೆ.