ಅಧಿಕೃತ ಸರ್ಕಾರಿ ನಿವಾಸವನ್ನು ಅಂದಾಜು 33 ಕೋಟಿ ರು. ವೆಚ್ಚದಲ್ಲಿ ನವೀಕರಿಸಿದ್ದ ಅರವಿಂದ್ ಕೇಜ್ರಿವಾಲ್ ವಿರುದ್ಧ ತನಿಖೆಗೆ ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ಆದೇಶಿಸಿದೆ. ಇದರೊಂದಿಗೆ ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಕೇಜ್ರಿವಾಲ್‌ಗೆ ಮೊದಲ ಕಾನೂನು ಸಂಕಷ್ಟ ಎದುರಾದಂತಾಗಿದೆ.
ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಅಧಿಕೃತ ಸರ್ಕಾರಿ ನಿವಾಸವನ್ನು ಅಂದಾಜು 33 ಕೋಟಿ ರು. ವೆಚ್ಚದಲ್ಲಿ ನವೀಕರಿಸಿದ್ದ ಅರವಿಂದ್ ಕೇಜ್ರಿವಾಲ್ ವಿರುದ್ಧ ತನಿಖೆಗೆ ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ಆದೇಶಿಸಿದೆ. ಇದರೊಂದಿಗೆ ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಕೇಜ್ರಿವಾಲ್‌ಗೆ ಮೊದಲ ಕಾನೂನು ಸಂಕಷ್ಟ ಎದುರಾದಂತಾಗಿದೆ.
ದುಬಾರಿ ವೆಚ್ಚ ಮತ್ತು ಐಷಾರಾಮಿ ಉತ್ಪನ್ನ ಬಳಸಿದ ಕಾರಣಕ್ಕೆ ಗಾಜಿನರಮನೆ (ಶೀಶ್‌ಮಹಲ್) ಎಂದು ವಿಪಕ್ಷಗಳಿಂದ ಟೀಕೆಗೆ ಗುರಿಯಾಗುತ್ತಿದ್ದ ಮನೆಯ ಕುರಿತು ತನಿಖೆ ನಡೆಸುವಂತೆ ಲೋಕೋಪಯೋಗಿ ಇಲಾಖೆಗೆ ಸಿವಿಸಿ ಆದೇಶಿಸಿದೆ.
ದೆಹಲಿಯ ರೋಹಿಣಿ ಕ್ಷೇತ್ರದಿಂದ ಹೊಸದಾಗಿ ವಿಧಾನಸಭೆಗೆ ಆಯ್ಕೆಯಾಗಿರುವ ಬಿಜೆಪಿ ನಾಯಕ ವಿಜೇಂದ್ರ ಗುಪ್ತಾ ಈ ಹಿಂದೆ ಸಲ್ಲಿಸಿದ್ದ ಸಲ್ಲಿಸಿದ ದೂರಿನ ಆಧಾರದಲ್ಲಿ ತನಿಖೆಗೆ ಆದೇಶಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಗುಪ್ತಾ, ‘8 ಎಕರೆ ವಿಸ್ತೀರ್ಣದಲ್ಲಿರುವ ಕೇಜ್ರಿವಾಲ್‌ರ ಮನೆಯ ನವೀಕರಣಕ್ಕಾಗಿ ಕಟ್ಟಡ ನಿರ್ಮಾಣ ನಿಯಮ ಉಲ್ಲಂಘಿಸಲಾಗಿದೆ ಸಿವಿಸಿಗೆ ದೂರು ನೀಡಿದ್ದೆ. ಅದನ್ನು ಸಿವಿಸಿ ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಿತು. ಬಳಿಕ ಅದು ಸಲ್ಲಿಕೆಯಾದ ತನಿಖಾ ವರದಿಯ ಆಧಾರದಲ್ಲಿ 2025ರ ಫೆ.13ರಂದು ಪೂರ್ಣ ಪ್ರಮಾಣದ ತನಿಖೆಗೆ ಆದೇಶಿಸಲಾಗಿದೆ’ ಎಂದರು.
ಗುಪ್ತಾ ನೀಡಿದ ದೂರಿನಲ್ಲಿ, ರಾಜ್‌ಪುರ್ ರಸ್ತೆಯಲ್ಲಿರುವ ಆಸ್ತಿಗಳು ಹಾಗೂ 2 ಬಂಗಲೆಗಳನ್ನು ಕೆಡವಿ, ಜಾಗವನ್ನು ವಿಲೀನಗೊಳಿಸಿ ಕೇಜ್ರಿವಾಲ್ ಅವರ ನಿವಾಸ ನಿರ್ಮಿಸಲಾಗಿದೆ. ಇದಕ್ಕಾಗಿ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೆ, ಸರಿಯಾದ ಯೋಜನೆಯನ್ನೂ ರೂಪಿಸಿ ಒಪ್ಪಿಗೆ ಪಡೆದಿರಲಿಲ್ಲ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಅದರ ನವೀಕರಣ ಹಾಗೂ ಒಳಮನೆಯ ಅಲಂಕಾರಕ್ಕಾಗಿ ಜನಸಾಮಾನ್ಯರ ಹಣವನ್ನು ಮನಸೋಇಚ್ಛೆ ಖರ್ಚು ಮಾಡಲಾಗಿದೆ ಹಾಗೂ ಇದಕ್ಕಾಗಿ ಅವರು ಭ್ರಷ್ಟಾಚಾರದಲ್ಲಿಯೂ ತೊಡಗಿದ್ದರು ಎಂದೂ ಆರೋಪಿಸಲಾಗಿದೆ.
ಕೇಜ್ರಿ ಮನೆಯಲ್ಲಿರುವ ಐಶಾರಾಮಿ ವಸ್ತುಗಳು
ಕೇಜ್ರಿವಾಲ್ ಅವರ ನಿವಾಸದಲ್ಲಿ 77 ಲಕ್ಷ ರು. ಬೆಲೆಬಾಳುವ ಟೀವಿ, 50 ಲಕ್ಷ ರು.ನ ರೇಶ್ಮೆಯ ರತ್ನಗಂಬಳಿ, 42 ಲಕ್ಷ ರು.ನ ಹಿತ್ತಾಳೆಯ ರೇಲಿಂಗ್, 96 ಲಕ್ಷ ರು.ನ ಪರದೆ, 6 ಲಕ್ಷ ರು.ನ ಸೋಫಾ ಅಳವಡಿಸಲಾಗಿದೆ. ಜೊತೆಗೆ 18 ಲಕ್ಷ ರು.ನ ಜಿಮ್ ಹಾಗೂ 20 ಲಕ್ಷ ರು.ನ ಸ್ಪಾ ಕೂಡ ಇದೆ. ಅವರ ಸ್ನಾನಗೃಹದಲ್ಲಿ 18 ಲಕ್ಷ ರು.ನ ಬಿಸಿನೀರು ಯಂತ್ರ, 12 ಲಕ್ಷ ರು.ನ ಕಮೋಡ್ ಇವೆ.