ಲಖನೌ: ಹೆಚ್ಚಿನ ವರದಕ್ಷಿಣೆ ತರದಿದ್ದಕ್ಕೆ ಕೋಪಗೊಂಡು, ಗಂಡನ ಮನೆಯವರೆಲ್ಲಾ ಸೇರಿ 30 ವರ್ಷದ ಸೊಸೆಗೆ ಎಚ್‌ಐವಿ ಸೋಂಕಿತ ಸಿರಿಂಜ್‌ನಿಂದ ಇಂಜೆಕ್ಷನ್ ನೀಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಗೆ ಕೋರ್ಟ್ ಆದೇಶಿಸಿದೆ.
ಸಹರಾನ್‌ಪುರ ಮೂಲದ ಸಂತ್ರಸ್ತೆಯ ಪೋಷಕರು 2023ರಲ್ಲಿ ತಮ್ಮ ಮಗಳನ್ನು ಆರೋಪಿ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದರು. ಈ ವೇಳೆ 15 ಲಕ್ಷ ರು. ನಗದು ಮತ್ತು ಒಂದು ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಜೊತೆಗೆ ಮದುವೆಗೆ ಕುಟುಂಬ 45 ಲಕ್ಷ ರು. ವೆಚ್ಚ ಮಾಡಿತ್ತು.
ಆದರೆ ಮದುವೆ ಮಾರನೇ ದಿನದಿಂದಲೇ ವರನ ಕುಟುಂಬ ಇನ್ನೂ 10 ಲಕ್ಷ ರು. ನಗದು ಮತ್ತು ದೊಡ್ಡ ಕಾರಿಗೆ ಬೇಡಿಕೆ ಇಟ್ಟಿತ್ತು. ಆದರೆ ಅದಾಗಲೇ ಮದುವೆಗೆ ಭಾರೀ ವೆಚ್ಚ ಮಾಡಿದ್ದ ಕಾರಣ ಹೆಚ್ಚಿನ ವರದಕ್ಷಿಣೆಗೆ ವಧುವಿನ ಕುಟುಂಬ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಗಂಡನ ಮನೆಯಲ್ಲಿ ಆಕೆಗೆ ದೈಹಿಕ ಕಿರುಕುಳ ನೀಡಲಾಗಿತ್ತು.
ಅದನ್ನು ಸಹಿಸಲಾಗದೇ ಆಕೆ ಪೋಷಕರ ಮನೆಗೆ ಮರಳಿದ್ದಳು. ಈ ವೇಳೆ ಸ್ಥಳೀಯ ಪಂಚಾಯತ್ ಸದಸ್ಯರು, ವಧು-ವರರನ್ನು ಕೂರಿಸಿ ಸಂಧಾನ ಮಾಡಿ ಕಳುಹಿಸಿದ್ದರು.
ಆದರೆ ಇದಾದ ಹೊರತಾಗಿಯೂ ವರದಕ್ಷಿಣೆ ಕಿರುಕುಳ ತಪ್ಪಿರಲಿಲ್ಲ. ಅದರ ನಡುವೆ ಕೆಲ ಸಮಯದ ಹಿಂದೆ ಗಂಡನ ಮನೆಯ ಸದಸ್ಯರು ಆಕೆಗೆ ಸುಳ್ಳು ಹೇಳಿ ಇಂಜೆಕ್ಷನ್ ನೀಡಿದ್ದರು. ಅದಾದ ಕೆಲ ದಿನಗಳಲ್ಲೇ ಸಂತ್ರಸ್ತೆಯ ಆರೋಗ್ಯ ಕ್ಷೀಣಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡಿದಾಗ ಆಕೆಗೆ ಎಚ್‌ಐವಿ ಸೋಂಕು ತಗುಲಿರುವುದು ಕಂಡುಬಂದಿದೆ. ಆದರೆ ಪತಿಯಲ್ಲಿ ಎಚ್‌ಐವಿ ನೆಗೆಟಿವ್ ಬಂದಿದೆ. ಹೀಗಾಗಿ ಇದು ಉದ್ದೇಶಪೂರ್ವಕ ವಾಗಿಯೇ ನಡೆಸಿದ ಕೃತ್ಯ ಎಂದು ಆರೋಪಿಸಿ ಸಂತ್ರಸ್ತೆ ಪೋಷಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಗಂಡನ ಮನೆಯವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯು ಪತಿ, ಅತ್ತೆ, ನಾದಿನಿ ಮತ್ತು ಮೈದುನನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.