;Resize=(412,232))
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಹಮ್ಮಿಕೊಂಡಿದ್ದ ಜಂತರ್ ಮಂತರ್ ಪ್ರತಿಭಟನೆಗೂ ಮುನ್ನವೇ ಅಭಿಜೀತ್ ದೀಪ್ಕೆ ಸೇರಿ ಮೂವರ ವಶದ ಕಾರಣ, ಜಿರಳೆ ಪಕ್ಷವು ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಉಸ್ತುವಾರಿ ಅಜಿಂಕ್ಯ ಶಿಂಧೆ ಅವರಿಗೆ ವಹಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ದೀಪ್ಕೆ ಪೋಸ್ಟ್ ಮಾಡಿದ್ದು, ‘ಸಂಭವನೀಯ ವಶವನ್ನು ನಿರೀಕ್ಷಿಸಿ ಶುಕ್ರವಾರವೇ ಈ ವಿಡಿಯೋವನ್ನು ರೆಕಾರ್ಡ್ ಮಾಡಿಟ್ಟಿದ್ದೆ. ನನ್ನನ್ನು, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಈ ವಿಡಿಯೋ ವೀಕ್ಷಿಸುತ್ತಿರುವವರು ಪ್ರತಿಭಟನೆಗೆ ಶಿಂಧೆ ಅವರನ್ನು ಅನುಸರಿಸಿ’ ಎಂದಿದ್ದಾರೆ.
ಇನ್ನು ಅಜಿಂಕ್ಯ ವಿಡಿಯೋ ಹೇಳಿಕೆಯನ್ನು ಸಿಜೆಪಿ ಬಿಡುಗಡೆ ಮಾಡಿದ್ದು, ‘ಜಂತರ್ ಮಂತರ್ ಕಡೆಗೆ ಮೆರವಣಿಗೆ ಮಾಡುವಂತೆ ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ದೆಹಲಿ ಪೊಲೀಸರು ನಿಮ್ಮನ್ನು ತಡೆಯಲು ಪ್ರಯತ್ನಿಸಿದರೆ, ಅವರು ಎಲ್ಲಿ ನಿಲ್ಲಿಸಿದರೂ ಅದೇ ಸ್ಥಳ ಜಂತರ್ ಮಂತರ್ ಆಗಲಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆವರೆಗೂ ನಮ್ಮ ಹೋರಾಟ ನಿಲ್ಲಲ್ಲ’ ಎಂದಿದ್ದಾರೆ.
35 ವರ್ಷದ ಅಜಿಂಕ್ಯ ಶಿಂಧೆ ಮಹಾರಾಷ್ಟ್ರದ ಕಂಪ್ಯೂಟರ್ ಸೈನ್ಸ್ ಪದವೀಧರ. ಅವರು 2016 ರಲ್ಲಿ ಗೋವಾದಲ್ಲಿ ಮೊದಲು ದೀಪ್ಕೆ ಅವರನ್ನು ಭೇಟಿಯಾದರು ಮತ್ತು ಅಂದಿನಿಂದ ಆಪ್ತರಾಗಿದ್ದಾರೆ.
ಅವರು ಆಮ್ ಆದ್ಮಿ ಪಕ್ಷದಲ್ಲಿ (ಎಎಪಿ) ಕಾರ್ಯಕರ್ತನಾಗಿ ಸೇರುವ ಮೊದಲು ಪುಣೆಯ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕೆಲಸ ಬಿಟ್ಟು ಆಪ್ ಸೇರಿ ಗೋವಾ ಚುನಾವಣೆಯಲ್ಲಿ ಕೆಲಸ ಮಾಡಿದರು. ಕಳೆದ ವರ್ಷ ಇವರನ್ನು ಪುನಃದೀಪ್ಕೆ ತಮ್ಮ ಬಳಗಕ್ಕೆ ಕರೆತಂದರು. ಸಿಜೆಪಿ ಸ್ಥಾಪನೆ ಆದಾಗ ರಾಷ್ಟ್ರೀಯ ಸಂಘಟನೆಯ ಉಸ್ತುವಾರಿಯ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಬಳಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲು ಕಾಂಗ್ರೆಸ್ ಹಾಗೂ ಇಂಡಿಯಾ ಕೂಟದ ಪಕ್ಷಗಳು ನಿರ್ಧರಿಸಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಮೋದಿ-ಶಾ ಆಡಳಿತ ನಡೆಸುತ್ತಿರುವ ರಾಷ್ಟ್ರವ್ಯಾಪಿ ಮತಚೋರಿ ವಿರುದ್ಧ ಹಾಗೂ ಜ್ಞಾನೇಶ್ ವಿರುದ್ಧ ಇಂಡಿಯಾ ಕೂಟ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಬಳಿಕ ನಮ್ಮ ಹಿರಿಯ ನಾಯಕರ ನಿಯೋಗವು ಈ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಸಿಜೆಐಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಿದೆ. ಜ್ಞಾನೇಶ್ ಹೋಗಬೇಕು’ ಎಂದಿದ್ದಾರೆ.
ಬಂಧಿತರ ಬಿಡದಿದ್ರೆ ಮತ್ತೆ ಉಪವಾಸ: ಸೋನಂ ವಾಂಗ್ಚುಕ್ ಎಚ್ಚರಿಕೆ
ನವದೆಹಲಿ: ದಿಲ್ಲಿಯಲ್ಲಿ ಶನಿವಾರ ವಶಕ್ಕೆ ಪಡೆದಿರುವ ರಾಜಕೀಯ ನಾಯಕರು ಮತ್ತು ಜಿರಳೆ ಪಕ್ಷದ ಪ್ರತಿಭಟನಾಕಾರರನ್ನು ಭಾನುವಾರದ ಒಳಗೆ ಬಿಡುಗಡೆ ಮಾಡಬೇಕು ಹಾಗೂ ದಿಲ್ಲಿಯಲ್ಲಿ ಹೇರಲಾಗಿರುವ ನಿಯಂತ್ರಣ ಕ್ರಮಗಳನ್ನು ರದ್ದು ಮಾಡಬೇಕು. ಇಲ್ಲದೇ ಹೋದರೆ ಲೇಹ್‌ನಲ್ಲಿ ಪಾದಯಾತ್ರೆ ಅಥವಾ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಹೋರಾಟಗಾರ ಸೋನಂ ವಾಂಗ್ಚುಕ್ ಎಚ್ಚರಿಸಿದ್ದಾರೆ.
‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಚಳುವಳಿಯನ್ನು ಮುನ್ನಡೆಸಲು ಇಷ್ಟೊಂದು ನಾಯಕರು ಇದ್ದರು ಎಂದು ನನಗೆ ಸಂತೋಷವಾಯಿತು, ಅವರನ್ನು ಈಗ ಬಂಧಿಸಲಾಗಿದೆ. ನಾಳೆಯೊಳಗೆ ಅವರನ್ನು ಬಿಡುಗಡೆ ಮಾಡದಿದ್ದರೆ ನಾನು ನಿರಶನ ಅಥವಾ ಪಾದಯಾತ್ರೆ’ ಮಾಡಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.