ಸಿಇಸಿ ಜ್ಞಾನೇಶ್‌ ತಲೆದಂಡಕ್ಕಾಗಿ ಇಂದು ಸಿಜೆಪಿ ಹೋರಾಟ-ಜಿರಳೆ ತಡೆಗೆ ದಿಲ್ಲಿ ಭದ್ರಕೋಟೆ

Published : Oct 10, 2026, 06:24 AM IST
cjp, congress

ಸಾರಾಂಶ

ಎಸ್‌ಐಆರ್‌ ಅಕ್ರಮ ಮುಂದಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅ‍ವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ ಮತ್ತು ಇತರೆ ವಿದ್ಯಾರ್ಥಿ ಸಂಘಟನೆಗಳು ದೆಹಲಿಯ ಜಂತರ್‌ ಮಂತರ್‌ನಲ್ಲಿ ಕರೆ ನೀಡಿರುವ ಶನಿವಾರದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ನವದೆಹಲಿ : ಎಸ್‌ಐಆರ್‌ ಅಕ್ರಮಗಳ ವಿಚಾರ ಮುಂದಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅ‍ವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಮತ್ತು ಇತರೆ ವಿದ್ಯಾರ್ಥಿ ಸಂಘಟನೆಗಳು ದೆಹಲಿಯ ಜಂತರ್‌ ಮಂತರ್‌ನಲ್ಲಿ ಕರೆ ನೀಡಿರುವ ಶನಿವಾರದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಆದಾಗ್ಯೂ ಜಿರಳೆ ಪಕ್ಷದವರು ದಿಲ್ಲಿಗೆ ಆಗಮಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಅವರನ್ನು ತಡೆಯಲು ದಿಲ್ಲಿ ಹೃದಯ ಭಾಗದಲ್ಲಿ ಕಂಡು ಕೇಳರಿಯದ ಭದ್ರತೆ ಏರ್ಪಡಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಸಿಎಪಿಎಫ್‌)ಯ 23,000 ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ, ಪ್ರತಿಭಟನೆಗೆ ಜನ ಸೇರದಿರಲೆಂದು 57 ಮೆಟ್ರೋ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದ್ದು, ದೇಶದ ವಿವಿಧ ಭಾಗಗಳಿಂದ ದಿಲ್ಲಿ ಸಂಪರ್ಕಿಸುವ 38 ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ದಿಲ್ಲಿಯ ಹೃದಯಭಾಗವಾದ ಪ್ರತಿಭಟನಾ ಸ್ಥಳ ಜಂತರ್‌ ಮಂತರ್‌, ಜನಪಥ ಹಾಗೂ ಸುತ್ತಲಿನ 4 ಕಿ.ಮೀ. ವ್ಯಾಪ್ತಿಯಲ್ಲಿ ಮೊಬೈಲ್‌ ಇಂಟರ್ನೆಟ್‌ ಬಂದ್ ಮಾಡಲಾಗಿದೆ.

ಅನುಮತಿ ನಕಾರ:

ಪತ್ರಿಕಾಗೋಷ್ಠಿ ನಡೆಸಿದ ನವದೆಹಲಿ ವ್ಯಾಪ್ತಿಯ ಜಂಟಿ ಪೊಲೀಸ್‌ ಆಯುಕ್ತ ನುಪುರ್‌ ಪ್ರಸಾದ್‌ ಅ‍ವರು, ‘ನಿಯಮಾವಳಿಗಳ ಪ್ರಕಾರ ಜಂತರ್‌ ಮಂತರ್‌ನಲ್ಲಿ ಯಾವುದೇ ಪ್ರತಿಭಟನೆಗೆ 10 ದಿನಗಳ ಮೊದಲೇ ಮಾಹಿತಿ ನೀಡಬೇಕಾಗುತ್ತದೆ. ಆದರೆ ಅರ್ಜಿಯನ್ನು ವಿಳಂಬವಾಗಿ ಸಲ್ಲಿಸಲಾಗಿದೆ ಹಾಗೂ ಈ ಹಿಂದಿನ ಪ್ರತಿಭಟನೆ ವೇಳೆ ಜಿರಳೆ ಪಾರ್ಟಿ ನಿಯಮ ಉಲ್ಲಂಘಿಸಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿಭಟನೆಗೆ ಅನುಮತಿ ನಿರಾಕರಿಸಿಸುತ್ತಿದ್ದೇವೆ’ ಎಂದು ತಿಳಿಸಿದರು.

ದೆಹಲಿಯಲ್ಲಿ ಬಿಎನ್‌ಎಸ್‌ಎಸ್‌ನ (ಭಾರತೀಯ ನ್ಯಾಯ ಸಂಹಿತೆ) ಸೆಕ್ಷನ್‌ 163 ಅನ್ವಯ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ನಿರ್ಬಂಧ ಜಾರಿಗೊಳಿಸಲಾಗಿದೆ. ಯಾರಾದರೂ 163 ಸೆಕ್ಷನ್‌ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈಲು, ಮೆಟ್ರೋ, ಇಂಟರ್ನೆಟ್‌ ಸ್ತಬ್ಧ:

ಜಿರಳೆ ಪಕ್ಷದ ಪ್ರತಿಭಟನೆಗೆ ಜನ ಬರಬಾರದು ಎಂಬ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ದಿಲ್ಲಿಯಲ್ಲಿ 57 ಮೆಟ್ರೋ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ. ಅಲ್ಲದೆ, ಪ್ರತಿಭಟನಾ ಸ್ಥಳದ ಆಜುಬಾಜಿನಲ್ಲಿ ಓಡಾಡುವ ಮೆಟ್ರೋ ರೈಲುಗಳ ಸಂಖ್ಯೆಯನ್ನೂ ಕಡಿಮೆ ಮಾಡಲು ನಿರ್ಧರಿಸಲಾಗಿದೆ.

ಈ ನಡುವೆ ದೇಶದ ವಿವಿಧ ಭಾಗಗಳಿಂದ ದಿಲ್ಲಿಗೆ ಹೋಗುವ 38 ರೈಲುಗಳ ಸಂಚಾರವನ್ನೂ ರದ್ದು ಮಾಡಲಾಗಿದೆ. ಮುಖ್ಯವಾಗಿ ನವದೆಹಲಿ ಮತ್ತು ಹಜರತ್‌ ನಿಜಾಮುದ್ದೀನ್‌ ರೈಲ್ವೆ ನಿಲ್ದಾಣಗಳಿಗೆ ಶನಿವಾರ ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆ ನಡುವೆ ಆಗಮಿಸುವ ರೈಲುಗಳನ್ನು ರದ್ದು ಮಾಡಲಾಗಿದೆ.

23 ಸಾವಿರ ಪೊಲೀಸರು:

ಇನ್ನು ಈ ಬಾರಿ ಪ್ರತಿಭಟನಾಕಾರರ ನಿಯಂತ್ರಣಕ್ಕೆ 23 ಸಾವಿರ ಸಿಎಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಇವರಲ್ಲಿ ಸಿಎಪಿಎಫ್‌, ಎಸ್ಎಸ್‌ಬಿ, ಐಟಿಪಿಪಿ, ಸಿಆರ್‌ಪಿಎಫ್‌, ದಿಲ್ಲಿ ಪೊಲೀಸರು ಇದ್ದಾರೆ.

ಮೊಬೈಲ್‌ ಇಂಟರ್ನೆಟ್‌ ಸ್ತಬ್ಧ:

ನವದೆಹಲಿಯ ಹೃದಯ ಭಾಗವಾದ ಜಂತರ್‌ ಮಂತರ್‌, ಜನಪಥ, ಕರ್ತವ್ಯಪಥ ಹಾಗೂ ಸುತ್ತಲಿನ 4 ಕಿ.ಮೀ. ವ್ಯಾಪ್ತಿಯಲ್ಲಿ ಮೊಬೈಲ್‌ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಗೃಹ ಸಚಿವಾಲಯ ಸೂಚನೆ ನೀಡಿದೆ. ಅ.9ರ ರಾತ್ರಿ 10 ರಿಂದ ಅ.10 ರಂದು ರಾತ್ರಿ 10 ರವರೆಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಇಡೀ ದೇಶವನ್ನೇ ಬಂದ್ ಮಾಡಿ

ರೈಲು ಬಂದ್ ಮಾಡುವ ಮೂಲಕ ನೀವು ಯುವಕರಿಗೆ ಹೆದರುವುದಾದರೆ, ಇಡೀ ದೇಶವನ್ನೇ ಬಂದ್‌ ಮಾಡಿ. ಜಂತರ್‌ಮಂತರ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗುತ್ತಿದೆ. ಇದು ಎಮರ್ಜೆನ್ಸಿಗೆ ಸಮ.

- ಅಭಿಜೀತ್ ದೀಪ್ಕೆ, ಜಿರಳೆ ಪಕ್ಷ ಸಂಸ್ಥಾಪಕ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನೊಣ ಹೊಡೆಯಲು ಸುತ್ತಿಗೆ ಏಕೆ? : ಸಿಜೆ - ದೆಹಲಿ ಮೆಟ್ರೋ, ರೈಲು ಸ್ಥಗಿತಕ್ಕೆ ಆಕ್ಷೇಪ
ಯುಪಿಐ ಮೇಲೆ ಎಂಡಿಆರ್‌ ಶುಲ್ಕ ಜಾರಿ ಮುಂದೂಡಿಕೆ?