ನೊಣ ಹೊಡೆಯಲು ಸುತ್ತಿಗೆ ಏಕೆ? : ಸಿಜೆ - ದೆಹಲಿ ಮೆಟ್ರೋ, ರೈಲು ಸ್ಥಗಿತಕ್ಕೆ ಆಕ್ಷೇಪ

Published : Oct 10, 2026, 06:19 AM IST
cji

ಸಾರಾಂಶ

ದೆಹಲಿಯಲ್ಲಿ ಶನಿವಾರ ಸಿಜೆಪಿ ಆಯೋಜಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ಹಾಗೂ ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನವದೆಹಲಿ : ದೆಹಲಿಯಲ್ಲಿ ಶನಿವಾರ ಸಿಜೆಪಿ ಆಯೋಜಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ಹಾಗೂ ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಯೊಂದಕ್ಕೂ ತಡೆ ಒಡ್ಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಆಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನೊಣವನ್ನು ಕೊಲ್ಲಲು ಸುತ್ತಿಗೆಯನ್ನು ಬಳಸಲು ಸಾಧ್ಯವಿಲ್ಲ

ಇದೇ ವೇಳೆ, ‘ನೊಣವನ್ನು ಕೊಲ್ಲಲು ಸುತ್ತಿಗೆಯನ್ನು ಬಳಸಲು ಸಾಧ್ಯವಿಲ್ಲ. ಈ ತತ್ವವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು’ ಎಂಬ ಮಾರ್ಮಿಕವಾಗಿ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್‌ ಕೇಂದ್ರ ಸರ್ಕಾರಕ್ಕೆ ತಿವಿದಿದ್ದಾರೆ.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಸೂರ್ಯಕಾಂತ್, ನ್ಯಾ. ಜಯಮಾಲ್ಯ ಬಾಗ್ಚಿ ಮತ್ತು ನ್ಯಾ. ವಿ. ಮೋಹನ ಅವರನ್ನೊಳಗೊಂಡ ಪೀಠ, ‘ಪ್ರತಿಭಟನೆ ಅಥವಾ ಸಾರ್ವಜನಿಕ ಚಲನವಲನಗಳನ್ನು ನಿಯಂತ್ರಿಸುವುದು ಬೇರೆ, ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಬೇರೆ. ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ನೆಪದಲ್ಲಿ ಸಾರ್ವಜನಿಕ ಜೀವನವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿತು.

‘ಸಾಮಾನ್ಯ ಪ್ರಯಾಣಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಅನುಭವಿಸುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು, ಸಂಪೂರ್ಣ ನಿಷೇಧದ ಬದಲು ನಿಯಂತ್ರಿತ ರೀತಿಯಲ್ಲಿ ಮೆಟ್ರೋ ಹಾಗೂ ರೈಲು ಸಂಚಾರಕ್ಕೆ ಅವಕಾಶ ನೀಡಬೇಕು’ ಎಂದು ತಿಳಿಸಿತು.

ಇದಕ್ಕೆ ಸ್ಪಂದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮೆಟ್ರೋ ಮತ್ತು ರೈಲು ಸೇವೆಗಳ ಸಂಪೂರ್ಣ ನಿಷೇಧವನ್ನು ಮರುಪರಿಶೀಲಿಸುವಂತೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಪೀಠಕ್ಕೆ ತಿಳಿಸಿದರು.

ಮಹಿಳಾ ಪೊಲೀಸರಿಗೆ ದೌರ್ಜನ್ಯ:

ಇದೇ ವೇಳೆ, ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಹಲವಾರು ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ನಿಂದನೆ ನಡೆದಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂಗೆ ಮಾಹಿತಿ ನೀಡಿತು. ಈ ಮೂಲಕ ನಿರ್ಬಂಧಗಳನ್ನು ಸಮರ್ಥಿಸಿಕೊಂಡಿತು.

- ಜಿರಳೆ ಪಾರ್ಟಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣ ಬಂದ್‌ ಮಾಡಿ, ರೈಲುಗಳನ್ನು ರದ್ದು ಮಾಡಿರುವ ಸರ್ಕಾರ

- ಈ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ. ನೊಣವನ್ನು ಕೊಲ್ಲಲು ಸುತ್ತಿಗೆ ಬಳಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ

- ಭದ್ರತೆ, ಕಾನೂನು-ಸುವ್ಯವಸ್ಥೆಯ ನೆಪದಲ್ಲಿ ಸಾರ್ವಜನಿಕ ಜೀವನವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಲು ಸಾಧ್ಯವಿಲ್ಲ

- ಜನರ ತೊಂದರೆ ಗಮನದಲ್ಲಿಟ್ಟುಕೊಳ್ಳಿ. ನಿಷೇಧ ಬದಲು ನಿಯಂತ್ರಿತ ರೀತಿ ರೈಲು ಸಂಚಾರಕ್ಕೆ ಅವಕಾಶ ನೀಡಿ: ಕೋರ್ಟ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುಪಿಐ ಮೇಲೆ ಎಂಡಿಆರ್‌ ಶುಲ್ಕ ಜಾರಿ ಮುಂದೂಡಿಕೆ?
ಜಿಎಸ್ಟಿ ಅಧಿಕಾರಿಗಳ ಬಂಧನ ಅಧಿಕಾರ ರದ್ದು