ಜಿಎಸ್ಟಿ ಅಧಿಕಾರಿಗಳ ಬಂಧನ ಅಧಿಕಾರ ರದ್ದು

Published : Oct 09, 2026, 09:28 AM IST
nirmala seetharaman

ಸಾರಾಂಶ

ಜಿಎಸ್‌ಟಿ ಅಧಿಕಾರಿಗಳಿಗಿದ್ದ ಬಂಧನ ಅಧಿಕಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಹಾಗೂ ಕ್ರಿಮಿನಲ್ ಪ್ರಾಸಿಕ್ಯೂಷನ್ (ಅಭಿಯೋಜನೆ) ಪ್ರಕ್ರಿಯೆ ಆರಂಭಿಸಲು ಇದ್ದ ಕನಿಷ್ಠ ಮಿತಿಯನ್ನು 1 ಕೋಟಿ ರು.ನಿಂದ 5 ಕೋಟಿ ರು.ಗೆ ಏರಿಸಲು ಜಿಎಸ್‌ಟಿ ಮಂಡಳಿಯು ಗುರುವಾರ ನಡೆದ ತನ್ನ 57ನೇ ಸಭೆಯಲ್ಲಿ ಅನುಮೋದನೆ ನೀಡಿದೆ.

ನವದೆಹಲಿ : ಜಿಎಸ್‌ಟಿ ಅಧಿಕಾರಿಗಳಿಗಿದ್ದ ಬಂಧನ ಅಧಿಕಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಹಾಗೂ ಕ್ರಿಮಿನಲ್ ಪ್ರಾಸಿಕ್ಯೂಷನ್ (ಅಭಿಯೋಜನೆ) ಪ್ರಕ್ರಿಯೆ ಆರಂಭಿಸಲು ಇದ್ದ ಕನಿಷ್ಠ ಮಿತಿಯನ್ನು 1 ಕೋಟಿ ರು.ನಿಂದ 5 ಕೋಟಿ ರು.ಗೆ ಏರಿಸಲು ಜಿಎಸ್‌ಟಿ ಮಂಡಳಿಯು ಗುರುವಾರ ನಡೆದ ತನ್ನ 57ನೇ ಸಭೆಯಲ್ಲಿ ಅನುಮೋದನೆ ನೀಡಿದೆ.

ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ದೈನಂದಿನ ತೆರಿಗೆ ಆಡಳಿತ ವ್ಯವಸ್ಥೆಯು ಸರಳವಾಗಿ ಹಾಗೂ ತೆರಿಗೆದಾರರ ಮೇಲೆ ನಂಬಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಉದ್ಯಮ ನಡೆಸುವವರನ್ನು ಮತ್ತು ತೆರಿಗೆದಾರರನ್ನು ಸರ್ಕಾರ ನಂಬಬೇಕು. ಅವರ ನಡುವಿನ ವಹಿವಾಟುಗಳಲ್ಲಿ ಅನಗತ್ಯ ಸರ್ಕಾರಿ ಹಸ್ತಕ್ಷೇಪ ಹಾಗೂ ತನಿಖೆಗಳ ಕಿರುಕುಳ ಇರಬಾರದು’ ಎಂದು ಸ್ಪಷ್ಟಪಡಿಸಿದರು.

ದಂಡ ಮತ್ತು ಶಿಕ್ಷೆ ನಿಯಮ ಸಡಿಲಿಕೆ:

ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರವನ್ನು ಹಿಂಪಡೆಯುವುದರ ಜತೆಗೆ, ಕನಿಷ್ಠ ಶಿಕ್ಷೆಯ ನಿಯಮವನ್ನು ರದ್ದುಗೊಳಿಸಲಾಗಿದೆ. ಪ್ರತಿಯೊಂದು ಪ್ರಕರಣದಲ್ಲೂ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸುವ ಸಂಪೂರ್ಣ ಅಧಿಕಾರವನ್ನು ನ್ಯಾಯಾಂಗದ ವಿವೇಚನೆಗೆ ಬಿಡಲಾಗಿದೆ.

ಯಾವುದೇ ನಿರ್ದಿಷ್ಟ ದಂಡವನ್ನು ಉಲ್ಲೇಖಿಸದ ಪ್ರಕರಣಗಳಲ್ಲಿ ವಿಧಿಸಲಾಗುತ್ತಿದ್ದ ಸಾಮಾನ್ಯ ದಂಡದ ಮೊತ್ತವನ್ನು 25,000 ರು.ನಿಂದ 10,000 ರು.ಗೆ ಇಳಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ, 10,000 ರು.ಗಿಂತ ಕಡಿಮೆ ಮೊತ್ತದ ತೆರಿಗೆ ವ್ಯತ್ಯಾಸ ಅಥವಾ ಬಾಕಿ ಇರುವ ಪ್ರಕರಣಗಳಲ್ಲಿ ತೆರಿಗೆದಾರರಿಗೆ ಯಾವುದೇ ನೋಟಿಸ್ ನೀಡದಿರಲು ಮಂಡಳಿ ನಿರ್ಧರಿಸಿದೆ. ಈ ಎಲ್ಲಾ ನೂತನ ಶಿಫಾರಸುಗಳು 2027ರ ಏ.1ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ.

ಬಾಕಿ ಪಾವತಿಗೆ ಸ್ಪಷ್ಟ ನಿಯಮ:

ತೆರಿಗೆ ರಿಟರ್ನ್ಸ್ ತಡವಾಗಿ ಸಲ್ಲಿಸುವ, ಸಣ್ಣಪುಟ್ಟ ತಪ್ಪುಗಳನ್ನು ಮಾಡುವ ಅಥವಾ ತೆರಿಗೆ ಪಾವತಿಯಲ್ಲಿ ಹಿಂದುಳಿಯುವ ತೆರಿಗೆದಾರರಿಗೆ ಈ ಸಭೆಯಲ್ಲಿ ದೊಡ್ಡ ಸಮಾಧಾನ ಸಿಕ್ಕಿದೆ. ಇಂತಹ ಪ್ರಕರಣಗಳಲ್ಲಿ ನಿಯಮಾನುಸಾರ ಬರಬೇಕಾದ ತೆರಿಗೆ ಮೊತ್ತ, ನಿಗದಿತ ಬಡ್ಡಿ ಮತ್ತು ಅದಕ್ಕೆ ಅನುರೂಪವಾದ ದಂಡವನ್ನು ಮಾತ್ರ ವಸೂಲಿ ಮಾಡಲಾಗುವುದು. ಅದನ್ನು ಹೊರತುಪಡಿಸಿ ಉದ್ಯಮಿಗಳ ಮೇಲೆ ಯಾವುದೇ ಹೆಚ್ಚುವರಿ ಅಥವಾ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಇನ್‌ಪುಟ್ ಸೇವೆ ಮರುಪಾವತಿ ವಿಸ್ತರಣೆ:

‘ಇನ್ವರ್ಟೆಡ್ ರೇಟ್ ಸ್ಟ್ರಕ್ಚರ್’ (ಅಂದರೆ ಸಿದ್ಧ ಉಡುಪು ಅಥವಾ ಉತ್ಪನ್ನಕ್ಕಿಂತ ಅದರ ಕಚ್ಚಾವಸ್ತುವಿನ ಮೇಲಿನ ತೆರಿಗೆ ಹೆಚ್ಚಿದ್ದಾಗ ಉಂಟಾಗುವ ಸಮಸ್ಯೆ) ಅಡಿಯಲ್ಲಿ ಸಿಗುವ ರಿಫಂಡ್ ಸೌಲಭ್ಯವನ್ನು ಇನ್‌ಪುಟ್ ಸೇವೆಗಳಿಗೂ ವಿಸ್ತರಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದೇ ನ.1ರಿಂದ ಅಥವಾ ತದನಂತರ ಪಡೆದುಕೊಂಡ ತೆರಿಗೆ ಕ್ರೆಡಿಟ್‌ಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ.

ಐಟಿಸಿ ಸಮಿತಿ ರಚನೆ:

ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ನೋಂದಾಯಿತರಾಗಿರುವ ಸಿಜಿಎಸ್‌ಟಿ ತೆರಿಗೆದಾರರಿಗೆ ಅನುಕೂಲವಾಗುವಂತೆ ‘ಫೇಸ್‌ಲೆಸ್ ಟ್ಯಾಕ್ಸ್ ಅಸೆಸ್‌ಮೆಂಟ್’ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ. ಇನ್ನೊಂದೆಡೆ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್‌ಗಳಿಗೆ ಸಂಬಂಧಿಸಿದಂತೆ, ಸರಿಯಾದ ಇನ್‌ವಾಯ್ಸ್ ಹೊಂದಿದ್ದು, ಸರಕುಗಳನ್ನು ಸ್ವೀಕರಿಸಿ, ಪೂರೈಕೆದಾರರಿಗೆ ಸಂಪೂರ್ಣ ಹಣ ಪಾವತಿಸಿರುವ ಪ್ರಾಮಾಣಿಕ ಖರೀದಿಗಾರರ ಹಿತರಕ್ಷಣೆಗೆ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯು 3 ತಿಂಗಳೊಳಗೆ ಅಧ್ಯಯನ ಪೂರ್ಣಗೊಳಿಸಿ ಮುಂದಿನ ಸಭೆಯಲ್ಲಿ ವರದಿ ಮಂಡಿಸಲಿದೆ.

ನಮ್ಮ ಗುರಿ ಸ್ಪಷ್ಟ

ಜಿಎಸ್‌ಟಿ ಸುಧಾರಣಾ ನಿರ್ಧಾರ ಸ್ವಾಗತಾರ್ಹ. ಬಂಧನ ನಿಬಂಧನೆಗಳನ್ನು ತೆಗೆದುಹಾಕುವುದು, ಹೆಚ್ಚಿನ ಅಪರಾಧ ಮುಕ್ತಗೊಳಿಸುವಿಕೆ ಮತ್ತು ಸರಳ ಕಾರ್ಯವಿಧಾನಗಳ ಕುರಿತು ಮಂಡಳಿಯ ಶಿಫಾರಸುಗಳು ಬಹಳ ಸಕಾರಾತ್ಮಕ ಪರಿಣಾಮ ಬೀರುತ್ತವೆ. ನಮ್ಮ ಗಮನ ಸ್ಪಷ್ಟವಾಗಿದೆ. ವೇಗದ ನಿರ್ಧಾರಗಳು, ಕಡಿಮೆ ಅನುಸರಣೆ ವೆಚ್ಚಗಳು, ಸ್ವಯಂಚಾಲಿತ ಮರುಪಾವತಿ- ಇವು ಜಿಎಸ್‌ಟಿಯನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ನಾಗರಿಕ ಸ್ನೇಹಿಯಾಗಿ ಮಾಡುವ ನಮ್ಮ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿವೆ.

- ನರೇಂದ್ರ ಮೋದಿ, ಪ್ರಧಾನಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಡೀ ವಿಶ್ವಕ್ಕೇ ಎಲ್‌ನಿನೋ ಆವೃತ : 2027ರ ಫೆಬ್ರವರಿ ತನಕ ಭೂಮಿಯ ಬಹುತೇಕ ಭಾಗ ಸುಡಲಿದೆ
ರಾಷ್ಟ್ರಪತಿ ಭವನಕ್ಕಿಂದು ವಿಪಕ್ಷ ಚಲೋ ಸಂಭವ - ಮುರ್ಮು ಭೇಟಿಗಾಗಿ ಅನುಮತಿ ಕೋರಿಕೆ