ನವದೆಹಲಿ: ರಕ್ಷಣಾ ಇಲಾಖೆಯು ಗುರುವಾರ 97 ಅತ್ಯಾಧುನಿಕ ತೇಜಸ್ ಮಾರ್ಕ್1ಎ ಯುದ್ಧ ವಿಮಾನಗಳ ಖರೀದಿಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್‌ಎಎಲ್) ಜತೆಗೆ 62,370 ಕೋಟಿ ರು. ಮೊತ್ತದ ಒಪ್ಪಂದಕ್ಕೆ ಸಹಿಹಾಕಿದೆ. ಈ ಯುದ್ಧವಿಮಾನಗಳ ಪೂರೈಕೆ ಕಾರ್ಯ 2027-28ರಲ್ಲಿ ಆರಂಭವಾಗಲಿದೆ. ಆರು ವರ್ಷಗಳಲ್ಲಿ ವಿಮಾನಗಳ ಪೂರೈಕೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.
ಕಳೆದ ತಿಂಗಳಷ್ಟೇ ಪ್ರಧಾನಿ ಮೋದಿ ನೇತೃತ್ವದ ವಿಶೇಷ ಸಂಪುಟ ಸಭೆಯು ಈ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ರಕ್ಷಣಾ ಸಚಿವಾಲಯವು ಎಚ್‌ಎಎಲ್ ಜತೆಗೆ ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಒಟ್ಟು 68 ಸಿಂಗಲ್ ಸೀಟ್ ಯುದ್ಧವಿಮಾನಗಳು, 29 ಡಬಲ್ ಸೀಟರ್ ವಿಮಾನಗಳ ಪೂರೈಕೆಯನ್ನು ಒಳಗೊಂಡಿದೆ. ಎಂಕೆ-1ಎ ಯುದ್ಧವಿಮಾನವು ಶೇ.64ರಷ್ಟು ಸ್ವದೇಶಿ ನಿರ್ಮಿತ ಬಿಡಿಭಾಗಗಳನ್ನು ಹೊಂದಿದ್ದು, ಈ ಹಿಂದಿನ ಎಲ್‌ಸಿಎ ಎಂಕೆ1ಎಗೆ ಹೋಲಿಸಿದರೆ ಹೊಸ 67 ಬಿಡಿಭಾಗಗಳನ್ನು ಹೊಂದಿದೆ. ಉತ್ತಮ್ ಆ್ಯಕ್ಟಿವ್ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಆ್ಯರೇ(ಎಇಎಸ್‌ಎ) ರೇಡಾರ್, ಸ್ವಯಂ ರಕ್ಷಾ ಕವಚ್ ಮತ್ತು ಕಂಟ್ರೋಲ್ ಸರ್ಫೇಸ್ ಆಕ್ಚುಯೇಟರ್ಸ್‌ಗಳನ್ನು ಹೊಂದಿದೆ. ಈ ಮೂಲಕ ಆತ್ಮನಿರ್ಭರ ಭಾರತದ ಉಪಕ್ರಮಕ್ಕೆ ದೊಡ್ಡ ಬೆಂಬಲ ಸಿಕ್ಕಂತಾಗಲಿದೆ.
ಈ ವಿಮಾನ ಖರೀದಿ ಡೀಲ್‌ನಿಂದ 105 ಭಾರತೀಯ ಕಂಪನಿಗಳಿಗೂ ಪರೋಕ್ಷವಾಗಿ ಅನುಕೂಲ ಆಗಲಿದೆ. ಪ್ರತಿವರ್ಷ 11,750 ಹೊಸ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ.
2021ರಲ್ಲಿ ರಕ್ಷಣಾ ಇಲಾಖೆಯು 83 ಎಲ್‌ಸಿಎ ಮಾರ್ಕ್ 1ಎ ಯುದ್ಧ ವಿಮಾನಗಳಿಗಾಗಿ ಎಚ್‌ಎಎಲ್ ಜತೆಗೆ 48 ಸಾವಿರ ಕೋಟಿಯ ಒಪ್ಪಂದ ಮಾಡಿಕೊಂಡಿತ್ತು. ಆ ಬಳಿಕ ಯುದ್ಧವಿಮಾನಗಳ ಪೂರೈಕೆಗಾಗಿ ಎಚ್‌ಎಎಲ್ ಜತೆ ನಡೆಯುತ್ತಿರುವ ಎರಡನೇ ದೊಡ್ಡಮೊತ್ತದ ಡೀಲ್ ಇದಾಗಿದೆ.
ಈ ಸಿಂಗಲ್ ಎಂಜಿನ್‌ನ ಯಎಂಕೆ1ಎ ಯುದ್ಧ ವಿಮಾನವು ಇತ್ತೀಚೆಗಷ್ಟೇ ಸೇನೆಯಿಂದ ಸಂಪೂರ್ಣವಾಗಿ ನಿವೃತ್ತಿಯಾಗಿರುವ ಮಿಗ್-21 ವಿಮಾನದ ಜಾಗವನ್ನು ತುಂಬಲಿದೆ.
ಮಿಗ್ 21 ವಿಮಾನವನ್ನು ಸೇನೆಯಿಂದ ನಿವೃತ್ತಿಗೊಳಿಸಿದ ಹಿನ್ನೆಲೆಯಲ್ಲಿ ಭಾರತೀಯ ವಾಯು ಸೇನೆಯ ಭುಜಬಲ ಕಡಿಮೆಯಾಗಿದೆ. ಯುದ್ಧವಿಮಾನಗಳ ಸ್ವಾಡ್ರಮ್ 42ರಿಂದ 31ಕ್ಕಿಳಿದಿದೆ.
ಎಚ್‌ಎಎಲ್ ಜೊತೆಗೆ ಭಾರತೀಯ ವಾಯುಪಡೆ ಒಪ್ಪಂದ
2027-28ರಿಂದ 6 ವರ್ಷದಲ್ಲಿ ವಿಮಾನ ಪೂರೈಕೆ ಪೂರ್ಣ
ಮಿಗ್ 21 ಜಾಗಕ್ಕೆ ಸ್ವದೇಶಿ ಯುದ್ಧ ವಿಮಾನಗಳ ಸೇರ್ಪಡೆ