ನವದೆಹಲಿ: ಕೆಂಪುಕೋಟೆ ಸಮೀಪ ಕಾರು ಸ್ಫೋಟಿಸಿ 13 ಜನರ ಸಾವಿಗೆ ಕಾರಣವಾದ ಕಿಲ್ಲರ್ ಡಾಕ್ಟರ್ ಉಮರ್ ನಬಿಯ ಕಾಶ್ಮೀರದ ಪುಲ್ವಾಮದಲ್ಲಿರುವ ಮನೆಯನ್ನು ಭದ್ರತಾ ಪಡೆ ಸಿಬ್ಬಂದಿ ರಾತ್ರೋರಾತ್ರಿ ನೆಲಸಮಗೊಳಿಸಿದ್ದಾರೆ.
ಗುರುವಾರ ರಾತ್ರಿ ವೇಳೆ ಅಧಿಕಾರಿಗಳ ತಂಡ ಎರಡು ಅಂತಸ್ತಿನ ಮನೆಯನ್ನು ಧ್ವಂಸಗೊಳಿಸಿದೆ.
ಡಿಎನ್‌ಎ ಪರೀಕ್ಷೆಯಲ್ಲಿ, ಸ್ಫೋಟದ ಹಿಂದೆ ಡಾ.ನಬಿ ಕೈವಾಡ ದೃಢವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ಪಹಲ್ಗಾಂ ದಾಳಿಯಲ್ಲಿ ಕೈವಾಡವಿದ್ದವರ ಮನೆಯನ್ನೂ ಇದೇ ರೀತಿ ಧ್ವಂಸಗೊಳಿಸಲಾಗಿತ್ತು. ಇದೀಗ ಉಮರ್ ಮನೆಯನ್ನು ಕೆಡುವುದರ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರಿಗೆ ಕಠಿಣ ಸಂದೇಶವನ್ನು ಸರ್ಕಾರ ರವಾನಿಸಿದೆ.