ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಂಗಳವಾರ 2025-26ನೇ ಆರ್ಥಿಕ ವರ್ಷದ 1 ಲಕ್ಷ ಕೋಟಿ ರು. ಮೌಲ್ಯದ ದಾಖಲೆಯ ಬಜೆಟ್ ಮಂಡಿಸಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇ.31.5 ಹೆಚ್ಚಳವಾಗಿದೆ. ಮಹಿಳಾ ಕಲ್ಯಾಣಕ್ಕಾಗಿ, ಅರ್ಹ ಮಹಿಳೆಯರಿಗೆ ತಿಂಗಳಿಗೆ 2,500 ರು. ಮಾಸಾಶನ ನೀಡಲು 5,100 ಕೋಟಿ ರು.ಗಳನ್ನು ಮೀಸಲಿಟ್ಟಿದ್ದಾರೆ. ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ನಗರದಾದ್ಯಂತ 50,000 ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸುವುದಾಗಿಯೂ ಘೋಷಿಸಿದ್ದಾರೆ. ಇನ್ನು ನಗರದ ಮಾಲಿನ್ಯ ತಗ್ಗಿಸಲು 300 ಕೋಟಿ ರು. ಘೋಷಿಸಿದ್ದಾರೆ.
ಏ.28ರ ಚುನಾವಣೆಯಲ್ಲಿ ಭಾರತ, ಚೀನಾ, ಪಾಕ್ ಹಸ್ತಕ್ಷೇಪ ಸಾಧ್ಯತೆ: ಕೆನಡಾ
ಒಟ್ಟಾವಾ: ಈ ವರ್ಷದ ಏ.28ರಂದು ನಡೆಯಲಿರುವ ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ, ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದೆ. ರಷ್ಯಾ ಮತ್ತು ಪಾಕಿಸ್ತಾನ ಕೂಡ ಆ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಪ್ರಭಾವ ತಗ್ಗಿಸಲು ಪಾಕ್ ಕೂಡ ಹೆಚ್ಚು ಹಸ್ತಕ್ಷೇಪ ಮಾಡಬಹುದು ಎಂದು ಕೆನಡಾದ ಗುಪ್ತಚರ ಸಂಸ್ಥೆ ಹೇಳಿದೆ.ಚೀನಾ ಮತ್ತು ಭಾರತದೊಂದಿಗೆ ಹದೆಗೆಟ್ಟಿದ್ದ ಕೆನಡಾದ ಸಂಬಂಧ ಕೊಂಚ ಸಹಜ ಸ್ಥಿತಿಗೆ ಮರಳುತ್ತಿರುವ ನಡುವೆಯೇ ಕೆನಡಾ ಈ ಆರೋಪ ಮಾಡಿದೆ. ಆದರೆ ಭಾರತ ಮತ್ತು ಚೀನಾ ಇದನ್ನು ನಿರಾಕರಿಸಿವೆ.‘ಇನ್ನು ಕೆನಡಾ ಚುನಾವಣೆಯಲ್ಲಿ ಪಾಕಿಸ್ತಾನ ಕೂಡ ತುಸು ಹೆಚ್ಚೇ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ ಇದೆ. ಏಕೆಂದರೆ ಜಗತ್ತಿನಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವ ತಗ್ಗಿಸಬೇಕು ಎಂಬದು ಅದರ ಇರಾದೆ’ ಎಂದು ಕೆನಡಾ ಗುಪ್ತಚರ ಉಪ ನಿರ್ದೇಶಕಿ ವನೆಸ್ಸಾ ಲಾಯ್ಡ್ ಹೇಳಿಕೆ ನೀಡಿದ್ದಾರೆ.
ಯೂಟ್ಯೂಬರ್ ಸವುಕ್ಕು ಶಂಕರ್ ಮನೆಗೆ ನುಗ್ಗಿ ಮಲ ಸುರಿದ ಗುಂಪುಚೆನ್ನೈ: ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್ ಮತ್ತು ಡಿಎಂಕೆ ಸರ್ಕಾರದ ಕಟು ಟೀಕಾಕಾರ ಸವುಕ್ಕು ಶಂಕರ್ ಅವರ ಮನೆಗೆ ನುಗ್ಗಿದ ಉದ್ರಿಕ್ತರ ಗುಂಪೊಂದು ಬಕೆಟ್‍ಗಟ್ಟಲೆ ಕೊಳಚೆ ನೀರು ಮತ್ತು ಮಲ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸ್ವಚ್ಛತಾ ಕಾರ್ಮಿಕರ ಉಡುಪಿನಲ್ಲಿ ಬಂದ ಗುಂಪು ಈ ಕೃತ್ಯ ಎಸಗಿದೆ. ಸ್ವಚ್ಛತಾ ಕಾರ್ಮಿಕರ ವಿರುದ್ಧ ಶಂಕರ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅದನ್ನು ವಿರೋಧಿಸಿ ಈ ದಾಳಿ ನಡೆದಿರಬೇಕು ಎಂದು ಶಂಕಿಸಲಾಗಿದೆ.ಆದರೆ ಆರೋಪವನ್ನು ಶಂಕರ್ ಅಲ್ಲಗಳೆದಿದ್ದು, ‘ಸರ್ಕಾರದಿಂದ ಸ್ವಚ್ಛತಾ ಕಾರ್ಯಕ್ಕಾಗಿ ಒದಗಿಸಲಾದ 230 ವಾಹನಗಳ ಬಳಕೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅದರಲ್ಲಿ ಕಾಂಗ್ರೆಸ್ ಮುಖಂಡನ ಪಾತ್ರವಿದೆ ಎಂದು ನಾನು ಹೇಳಿದ್ದೆನೇ ಹೊರತು, ಸ್ವಚ್ಛತಾ ಕಾರ್ಮಿಕರನ್ನು ನಿಂದಿಸಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಯನ್ನು ಖಂಡಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ‘ಡಿಎಂಕೆ ತನ್ನ ಟೀಕಾಕಾರರನ್ನು ದಮನಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಬೋಫೋರ್ಸ್ ಹಗರಣದಲ್ಲಿ ಸೋನಿಯಾ ಗಾಂಧಿ ಪಾತ್ರ: ಪುಸ್ತಕ
ನವದೆಹಲಿ: ರಾಜೀವ ಗಾಂಧಿ ಕಾಲದ ಬೋಫೋರ್ಸ್ ಫಿರಂಗಿ ಹಗರಣ ಮತ್ತೆ ಸದ್ದು ಮಾಡಿದೆ. ಹಗರಣದಲ್ಲಿ ಮಧ್ಯವರ್ತಿ ಆಗಿದ್ದ ಇಟಲಿ ಶಸ್ತ್ರಾಸ್ತ್ರ ಡೀಲರ್ ಒಟ್ಟಾವಿಯೋ ಕ್ವಾಟ್ರೋಕಿ, ಬೋಫೋರ್ಸ್ ಫಿರಂಗಿ ಪರ ಲಾಬಿ ಮಾಡಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಅವರ ಪತ್ನಿ ಸೋನಿಯಾ ಗಾಂಧಿಯ ಸಾಮೀಪ್ಯ ಬಳಸಿಕೊಂಡಿದ್ದ ಎಂದು ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ‘ಬೋಫೋರ್ಸ್ ಗೇಟ್’ ಎಂಬ ತಮ್ಮ ಹೊಸ ಪುಸ್ತಕದಲ್ಲಿ ಆರೋಪಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಈ ಕೃಯ್ಯದ ಹೊಣೆ ಹೊತ್ತು ತಮ್ಮ ಸಂಸದ ಹುದ್ದೆಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ರಾಜೀನಾಮೆ ನೀಡಬೇಕು ಹಾಗೂ ಕ್ವಾಟ್ರೋಕಿ ಜತೆಗಿನ ನಂಟಿನ ವಿವರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸೊರೊಸ್ ಹಣ ಬಳಕೆ: ಯೋಗಿ
ನವದೆಹಲಿ: ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಮಹಾ ಮೈತ್ರಿಕೂಟವು 2024ರ ಲೋಕಸಭಾ ಚುನಾವಣೆಗೆ ಬಿಲಿಯನೇರ್ ಉದ್ಯಮಿ ಜಾರ್ಜ್ ಸೊರೊಸ್ ಅವರ ಹಣವನ್ನು ಬಳಸಿದೆ’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.ಯೋಗಿ ಆದಿತ್ಯನಾಥ್ ಎಎನ್‌ಐಗೆ ವಿಶೇಷ ಸಂದರ್ಶನವೊಂದನ್ನು ನೀಡಿದ್ದು, ಅದರ ಕೆಲ ತುಣುಕುಗಳು ಬಿಡುಗಡೆಯಾಗಿದ್ದು, ಅದರಲ್ಲಿ ಯೋಗಿ ‘ ದೇಶಾದ್ಯಂತ ಲೋಕಸಭೆ ಚುನಾವಣೆಯಲ್ಲಿ ವಿದೇಶಿ ಹಣ ಬಳಕೆಯಾಗಿತ್ತು ಎಂದು ನಾನು ಹೇಳುತ್ತೇನೆ. ಕಾಂಗ್ರೆಸ್ ಮತ್ತು ಇಂಡಿಯಾ ಕೂಟದ ಇತರ ಪಕ್ಷಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇದರಲ್ಲಿ ಭಾಗಿಯಾಗಿವೆ. ಈ ಮೂಲಕ ಅವರು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು. ಇದು ದೇಶ ದ್ರೋಹದ ವರ್ಗಕ್ಕೆ ಸೇರುತ್ತದೆ’ ಎಂದಿದ್ದಾರೆ.