ನವದೆಹಲಿ : ದಿಲ್ಲಿಯ ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್ ನೆಲಮಾಳಿಗೆಯಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳು ಪ್ರವಾಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಕ್ಕೆ ಸೆಂಟರ್ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯವೇ ಕಾರಣ. ಕೋಚಿಂಗ್ ಸಂಸ್ಥೆಯ ನೆಲಮಾಳಿಗೆಯನ್ನು ಸ್ಟೋರ್ ರೂಮ್ ಆಗಿ ಬಳಸಲು ಅನುಮತಿ ಪಡೆದು ಲೈಬ್ರರಿಯಾಗಿ ಬಳಸಲಾಗುತ್ತಿತ್ತು. ಇದೇ ಈ ಘಟನೆಗೆ ನಾಂದಿ ಹಾಡಿತು ಎಂದು ಗೊತ್ತಾಗಿದೆ.
ಹೀಗಾಗಿ ಕೋಚಿಂಗ್ ಸೆಂಟರ್ ಮಾಲೀಕರು ಮತ್ತು ಸಂಯೋಜಕರನ್ನು ಭಾನುವಾರ ಬಂಧಿಸಲಾಗಿದೆ.ಶನಿವಾರ ಸಂಜೆ ದಿಲ್ಲಿಯಲ್ಲಿ ಸುರಿದ ಮಳೆಯಿಂದಾಗಿ ಕೋಚಿಂಗ್ ಸೆಂಟರ್ ನೆಲಮಹಡಿಗೆ ನೀರು ನುಗ್ಗಿತ್ತು. ಆಗ ಕೋಚಿಂಗ್ ಸೆಂಟರ್‌ನಲ್ಲಿದ್ದ ಐಎಎಸ್ ಆಕಾಂಕ್ಷಿಗಳಾದ ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ಎರ್ನಾಕುಲಂನ ನವೀನ್ ಡಾಲ್ವಿನ್ ಅವರು ಅಲ್ಲಿಂದ ಹೊರಬರಲು ಆಗದೇ ಮೃತಪಟ್ಟಿದ್ದರು.
ಸುಮಾರು 7 ತಾಸು ಶೋಧ ನಡೆಸಿ ಇವರ ಶವ ಪತ್ತೆ ಮಾಡಲಾಗಿತ್ತು.‘ಇದು ಕ್ರಿಮಿನಲ್ ನಿರ್ಲಕ್ಷ್ಯ’ ಎಂದು ದಿಲ್ಲಿ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಹೇಳಿದ್ದು, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಸೂಚಿಸಿದ್ದಾರೆ. ನಿಯಮಾವಳಿಗಳನ್ನು ಉಲ್ಲಂಘಿಸಿ ವಾಣಿಜ್ಯ ಉದ್ದೇಶಗಳಿಗಾಗಿ ನೆಲಮಾಳಿಗೆಯನ್ನು ಬಳಸುತ್ತಿರುವ ಸಂಸ್ಥೆಗಳ ವಿರುದ್ಧ ಮತ್ತು ಘಟನೆಗೆ ಕಾರಣವಾದ ಯಾವುದೇ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರು ದಿಲ್ಲಿ ಮಹಾನಗರ ಪಾಲಿಕೆ ಕಮಿಷನರ್‌ಗೆ ಸೂಚಿಸಿದ್ದಾರೆ.
ಅಸುರಕ್ಷಿತ ನಿರ್ಮಾಣ, ಕಳಪೆ ನಗರ ಯೋಜನೆ ಮತ್ತು ಸಂಸ್ಥೆಗಳ ಬೇಜವಾಬ್ದಾರಿಗೆ ಸಾಮಾನ್ಯ ಜನರು ಬೆಲೆ ತೆರುತ್ತಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕ ಪವನ್ ಖೇರಾ ಈ ಘಟನೆಯನ್ನು ‘ಮಾನವ ನಿರ್ಮಿತ ವಿಪತ್ತು’ ಎಂದು ಬಣ್ಣಿಸಿದ್ದಾರೆ. .
ನಿಯಮ ಉಲ್ಲಂಘಿಸಿ ಲೈಬ್ರರಿ:
ಕೋಚಿಂಗ್ ಸಂಸ್ಥೆಯು ನೆಲಮಾಳಿಗೆಯನ್ನು ಸ್ಟೋರ್ ರೂಂ ಆಗಿ ಬಳಸಲು ಅನುಮತಿಯನ್ನು ಹೊಂದಿತ್ತು. ಅಗ್ನಿಶಾಮಕ ದಳದಿಂದ ಎನ್‌ಒಸಿ ಪಡೆಯುವಾಗ ಸ್ಟೋರ್ ರೂಂ ಎಂದು ಬರೆಯಲಾಗಿತ್ತು. ಆದರೆ ಅದನ್ನು ಗ್ರಂಥಾಲಯ ಅಥವಾ ತರಗತಿಯಾಗಿ ಬಳಸಲಾಗುತ್ತಿತ್ತು. ಇದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವಾ ಮುಖ್ಯಸ್ಥ ಅತುಲ್ ಗರ್ಗ್ ಹೇಳಿದ್ದಾರೆ.
ಇದಲ್ಲದೆ ಲೈಬ್ರರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿತ್ತು. ಪ್ರವಾಹದ ಕಾರಣ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಬಯೋಮೆಟ್ರಿಕ್ ಆನ್ ಆಗಿ ಫಿಂಗರ್‌ಪ್ರಿಂಟ್ ವೆರಿಫಿಕೇಶನ್ ಆಗಲಿಲ್ಲ. ಆಗ ಬಾಗಿಲು ತೆರೆಯದೇ ಲೈಬ್ರರಿಯಲ್ಲಿದ್ದ ಮೂವರು ಸಾವನ್ನಪ್ಪಿರಬಹುದು ಎಂದೂ ಶಂಕಿಸಲಾಗಿದೆ.
ಹೀಗಾಗಿ ಕೋಚಿಂಗ್ ಸೆಂಟರ್ ಮಾಲೀಕ ಅಭಿಷೇಕ್ ಗುಪ್ತಾ ಮತ್ತು ಕೇಂದ್ರದ ಸಂಯೋಜಕ ದೇಶಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಪ್ರತಿಭಟನೆಗಳು ಭುಗಿಲು:
ಘಟನೆಯ ಕುರಿತು ರಾಜಿಂದರ್ ನಗರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ತಮ್ಮ ಸಹಪಾಠಿಗಳ ಸಾವು ಖಂಡಿಸಿ ಹಾಗೂ ಆರೋಪಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಹಗಲು-ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕರೋಲ್‌ಬಾಗ್‌ನಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಆಪ್ ಸಂಸದೆ ಸ್ವಾತಿ ಮಲಿವಾಲ್, ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ಸ್ಥಳಕ್ಕೆ ಭೇಟಿ ನೀಡಿದರು.
ಐಎಎಸ್ ಆಗುವ ಕನಸು ಕಂಡಿದ್ದಳು ನನ್ನ ಮಗಳು : ತಂದೆ ಬೇಸರ
ನವದೆಹಲಿ: ಭಾರೀ ಮಳೆಯ ಕಾರಣ ದೆಹಲಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಇಲ್ಲಿನ ರಾವ್ಸ್ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಗೆ ನೀರು ನುಗ್ಗಿ ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ಎರ್ನಾಕುಲಂನ ನವೀನ್ ಡಾಲ್ವಿನ್ ಎಂಬ 3 ಐಎಎಸ್ ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವನ್ನಪ್ಪಿದ ತನ್ನ ಮಗಳು ತಾನ್ಯಾಳನ್ನು ನೆನೆದು ಆಕೆಯ ತಂದೆ ವಿಜಯ್ ಕುಮಾರ್ ಕಂಬನಿ ಮಿಡಿದಿದ್ದಾರೆ.‘ದೊಡ್ಡ ಕನಸು ಕಂಡಿದ್ದಾಕೆ ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಳು. ಆಕೆಯ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ’ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಘಟನೆ ಕಾರಣ ದಿಲ್ಲಿಗೆ ದೌಡಾಯಿಸಿದ ಅಂಬೇಡ್ಕರ್ ನಗರದ ಉಪ-ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಶುಕ್ಲಾ ಮಾತಮಾಡಿ, ‘ಶ್ರೇಯಾ ತುಂಬಾ ಭರವಸೆಯ ವಿದ್ಯಾರ್ಥಿಯಾಗಿದ್ದಳು ಮತ್ತು ಅವಳು ಐಎಎಸ್ ಕೋಚಿಂಗ್‌ಗಾಗಿ ದೆಹಲಿಗೆ ಹೋಗಿದ್ದಳು. ಘಟನೆ ಆಘಾತ ತಂದಿದೆ’ ಎಂದರು. ಕೇರಳದ ಆಕಾಂಕ್ಷಿಯ ಮೃತರ ಬಂಧುಗಳು ಕೂಡ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.