ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗುವ ಮುಂಚೂಣಿ ನಾಯಕಿ ಕಮಲಾ ಹ್ಯಾರಿಸ್‌ಗೆ ದಾಖಲೆ ಪ್ರಮಾಣದ ದೇಣಿಗೆ ಹರಿದುಬಂದಿದೆ.
ರೇಸ್‌ನಿಂದ ಹಿಂದೆ ಸರಿದಿದ್ದ ಹಾಲಿ ಅಧ್ಯಕ್ಷ ಜೋ ಬೈಡೆನ್ ಕಳೆದ ಭಾನುವಾರವಷ್ಟೇ ಕಮಲಾ ಹೆಸರನ್ನು ಅನುಮೋದಿಸಿದ್ದರು. ಅದಾದ ಒಂದು ವಾರದಲ್ಲಿ ದಾಖಲೆ ಎನ್ನಬಹುದಾದ 1650 ಕೋಟಿ ರು.ಗಿಂತಲೂ ಹೆಚ್ಚಿನ ಹಣ ಚುನಾವಣಾ ದೇಣಿಗೆಯಾಗಿ ಸಂಗ್ರಹವಾಗಿದೆ.
ಈ ಪೈಕಿ ಮೊದಲ ಬಾರಿಗೆ ದೇಣಿಗೆ ನೀಡಿದವರ ಪ್ರಮಾಣವೇ ಹೆಚ್ಚಿದೆ. ಇದು ತಳ್ಳಮಟ್ಟದಿಂದಲೂ ಕಮಲಾಗೆ ಉತ್ತಮ ಬೆಂಬಲ ಇದೆ ಎನ್ನುವುದುನ್ನು ತೋರಿಸುತ್ತದೆ ಎಂದು ಕಮಲಾರ ಚುನಾವಣಾ ತಂಡ ಹೇಳಿದೆ.
ಕಮಲಾ ಗೆದ್ದರೆ ಅಮೆರಿಕದ ಸಾವು: ಟ್ರಂಪ್
ವಾಷಿಂಗ್ಟನ್: ’ತೀವ್ರ ಉದಾರವಾದಿಯಾಗಿರುವ ಡೆಮಾಕ್ರೆಟ್ ಪಕ್ಷದ ಸಂಭವನೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರೇನಾದರೂ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ 3 ನೇ ವಿಶ್ವಸಮರ ಸಂಭವಿಸಲಿದೆ. ದೇಶದಲ್ಲಿ ಅಪರಾಧ, ಅವ್ಯವಸ್ಥೆ, ಅಪಾಯಕಾರಿ ಸಂಗತಿಗಳು ತಾರಕಕ್ಕೇರಿ ಅಮೆರಿಕದ ಸಾವು ಖಚಿತ’ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದಾರೆ.
ಶನಿವಾರ ಮಿನ್ನೆಸೋಟಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಟ್ರಂಪ್, ‘ನಾನು ಅಧಿಕಾರಕ್ಕೆ ಏರಿದ ಮೊದಲ ದಿನವೇ ಅಕ್ರಮ ವಲಸಿಗರ ಪ್ರವೇಶಕ್ಕೆ ನೆರವಾಗುತ್ತಿರುವ ಎಲ್ಲಾ ಮುಕ್ತ ಗಡಿ ಪ್ರದೇಶಗಳನ್ನೂ ಮುಚ್ಚುತ್ತೇನೆ. ದೇಶದಲ್ಲಿ ಕಾನೂನು, ಸುವ್ಯವಸ್ಥೆ ಮತ್ತು ನ್ಯಾಯವನ್ನು ಪುನರ್‌ಸ್ಥಾಪಿಸುತ್ತೇನೆ’ ಎಂದು ಭರವಸೆ ನೀಡಿದರು.
ಇದೇ ವೇಳೆ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿಯಾಗಿ ಕಮಲಾ ಸ್ಯಾನ್‌ಫ್ರಾನ್ಸಿಸ್ಕೋವನ್ನು ನಾಶಮಾಡಿದರು. ಅಧ್ಯಕ್ಷರಾಗಿ ಆಯ್ಕೆಯಾದರೆ ಅವರು ಅಮೆರಿಕವನ್ನೂ ನಾಶ ಮಾಡುತ್ತಾರೆ’ ಎಂದು ಟ್ರಂಪ್ ಎಚ್ಚರಿಸಿದರು.‘ಮಾಧ್ಯಮಗಳು ಕಮಲಾರನ್ನು ಬ್ರಿಟನ್‌ನ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ರೀತಿ ಬಿಂಬಿಸಲು ಯತ್ನಿಸುತ್ತಿವೆ. ಆದರೆ ಅಂಥದ್ದೆಲ್ಲಾ ಆಗುವುದಿಲ್ಲ. ಒಂದು ವೇಳೆ ಕಮಲಾ ಆಯ್ಕೆಯಾದರೆ ದೇಶದಲ್ಲಿ ಇನ್ನೂ ನಾಲ್ಕು ವರ್ಷ ತೀವ್ರಗಾಮಿತನ, ದುರ್ಬಲ ಆಡಳಿತ, ವೈಪಲ್ಯ ಮತ್ತು ಸಂಭವನೀಯ ಮೂರನೇ ವಿಶ್ವಯುದ್ಧ ಸಂಭವಿಸಲಿದೆ’ ಎಂದು ಟ್ರಂಪ್ ಎಚ್ಚರಿಸಿದರು.
ಟ್ರಂಪ್ ಜಯ ಖಚಿತ: ಮಹಿಳಾ ಜ್ಯೋತಿಷಿ ಭವಿಷ್ಯ
ವಾಷಿಂಗ್ಟನ್: ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡೆನ್, ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿಯುತ್ತಾರೆ ಎಂದು ಖಚಿತವಾಗಿ ಭವಿಷ್ಯ ನುಡಿದಿದ್ದ ಆ್ಯಮಿ ಟ್ರಿಪ್, ದೇಶದ ಮುಂದಿನ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆಯ್ಕೆ ಖಚಿತ ಎಂದು ಹೇಳಿದ್ದಾರೆ.
ಟ್ರಂಪ್ ವೃತ್ತಿಯಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಮುಂದಿನ ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಇನ್ನಷ್ಟು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಬಹುದು ಎನ್ನುವ ಮೂಲಕ, ಇತ್ತೀಚೆಗೆ ನಡೆದು ಗುಂಡಿನ ದಾಳಿಯ ರೀತಿಯ ಘಟನೆಗಳು ನಡೆಯುವ ಸಾಧ್ಯತೆ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.ಜು.21ರಂದು ಬೈಡನ್ ಅಧ್ಯಕ್ಷೀಯ ಹುದ್ದೆ ರೇಸ್‌ನಿಂದ ಹಿಂದೆ ಸರಿಯಲಿದ್ದಾರೆ ಎಂದು ಆ್ಯಮಿ ಖಚಿತವಾಗಿ ಹೇಳಿದ್ದರು. ಅಲ್ಲದೆ ಕಮಲಾ ಹ್ಯಾರಿಸ್ ಅವರೇ ಡೆಮಾಕ್ರೆಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವುದೂ ಖಚಿತ ಎಂದಿದ್ದರು.
ಸುಳ್ಳು ರೇಪ್ ಕೇಸ್: ಮಹಿಳೆ ವಿರುದ್ಧ ಕ್ರಮಕ್ಕೆ ದಿಲ್ಲಿ ಹೈಕೋರ್ಟ್ ಆದೇಶ
ನವದೆಹಲಿ: ವೈಯಕ್ತಿಕ ಕಾರಣಗಳಿಗಾಗಿ ಸುಳ್ಳು ಅತ್ಯಾಚಾರ ಪ್ರಕರಣ ಹೂಡಿದ್ದ ಮಹಿಳೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.ಅತ್ಯಾಚಾರ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಪೀಠ,‘ಪೊಲೀಸರು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಮುನ್ನ ಸರಿಯಾದ ದಾಖಲೆಗಳನ್ನು ಹೊಂದಿರಬೇಕು. ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಮಹಿಳೆಯು ತನಗಿರುವ ಕಾನೂನು ಬಲವನ್ನು ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಖಡ್ಗವಾಗಿ ಬಳಸಬಾರದು’ ಎಂದು ಹೇಳಿತು. ಜೊತೆಗೆ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಿ, ಆರೋಪಿಗೆ ಜಾಮೀನು ನೀಡಿತು.
ರೈಲು ನಿಲ್ದಾಣದಲ್ಲಿ ಉಗಿದವರಿಗೆ 2 ವರ್ಷದಲ್ಲಿ ₹5 ಕೋಟಿ ದಂಡ
ನವದೆಹಲಿ: ರೈಲು ನಿಲ್ದಾಣಗಳಲ್ಲಿ ಉಗುಳುವವರಿಂದ ಕಳೆದ 2 ವರ್ಷದಲ್ಲಿ 5 ಕೋಟಿ ರು. ದಂಡ ಸಂಗ್ರಹಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಮಾಹಿತಿ ನೀಡಿದ ಸಚಿವರು,‘ಕಳೆದ ಎರಡು ಹಣಕಾಸು ವರ್ಷದಲ್ಲಿ 3,30,132 ಜನರಿಂದ 5.13 ಕೋಟಿ ರು. ದಂಡ ಸಂಗ್ರಹಿಸಲಾಗಿದೆ.ಶುಚಿತ್ವದ ಅರಿವು ಮೂಡಿಸುವ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ದಂಡದ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡದೇ ಸ್ವಚ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ’ ಹೇಳಿದ್ದಾರೆ.