ಖಿಲಾಫತ್ ಎಂದರೇನು?ಇಸ್ಲಾಮಿಕ್ ಇತಿಹಾಸದಲ್ಲಿ ಮುಸ್ಲಿಂ ಸಮುದಾಯದ ಆಡಳಿತಗಾರ ಖಲೀಫಾ. ಆತನ ಸಾಮ್ರಾಜ್ಯವನ್ನು ಖಿಲಾಫತ್ ಎಂದು ಕರೆಯುವ ವಾಡಿಕೆ ಇದೆ. ಆದರೆ ಉಗ್ರಗಾಮಿಗಳ ವಿಚಾರಕ್ಕೆ ಬಂದರೆ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪನೆ ಮಾಡುವುದು, ಷರಿಯಾ ಸೇರಿ ಎಲ್ಲ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೊಳಿಸುವುದು ಎಂದು ವಿಶ್ಲೇಷಿಸಲಾಗುತ್ತದೆ.
---- ಪಿಟಿಐ ನವದೆಹಲಿ
ಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ಹಾಗೂ ಭಾರತವನ್ನು ‘ಖಲೀಫಾ ದೇಶ’ (ಇಸ್ಲಾಮಿಕ್ ದೇಶ) ಮಾಡುವ ಉದ್ದೇಶ ಹೊಂದಿದ್ದ ‘ಖಿಲಾಫತ್’ ಹಾಗೂ ‘ಘಜ್ವಾ ಎ ಹಿಂದ್’ ಭಯೋತ್ಪಾದಕ ಮಾಡ್ಯೂಲ್ ಅನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಭೇದಿಸಿದೆ. ಈ ಸಂಬಂಧ ಅದು ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, 5 ಶಂಕಿತ ಉಗ್ರರನ್ನು ಬಂಧನ ಮಾಡಿದೆ.ಈ ಯಶಸ್ವಿ ಕಾರ್ಯಾಚರಣೆ ಬಗ್ಗೆ ವಿಶೇಷ ಪೊಲೀಸ್ ಘಟಕದ ಹೆಚ್ಚುವರಿ ಆಯುಕ್ತ ಪ್ರಮೋದ್ ಕುಶ್ವಾಹ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ‘ಬಂಧಿತರು ಭಾರತದಲ್ಲಿ ಜಿಹಾದಿ ಮನಃಸ್ಥಿತಿಯನ್ನು ಹರಡಿ, ಇಲ್ಲಿಯ ಭೂಮಿಯನ್ನು ಆಕ್ರಮಿಸಿ ಅದನ್ನು ಖಿಲಾಫತ್ ವಲಯ ಎಂದು ಘೋಷಿಸಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು. ‘ಘಜ್ವಾ-ಎ-ಹಿಂದ್’ (ಭಾರತದ ಮೇಲೆ ದಾಳಿ) ಕಲ್ಪನೆಯನ್ನು ಹರಡಲು ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪಾಕಿಸ್ತಾನದಿಂದ ಇವರಿಗೆ ಮಾರ್ಗದರ್ಶನ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.
ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಂದ ಶಸ್ತ್ರಾಸ್ತ್ರ ಪಡೆದು ಊರು ಬಿಡುತ್ತಿದ್ದ ವೇಳೆ ಅಫ್ತಾಬ್ ಮತ್ತು ಸುಫಿಯಾನ್‌ನನ್ನು ಬಂಧಿಸಲಾಯಿತು. ಇವರ ಮೇಲೆ ಪೊಲೀಸರು ಕಳೆದ 6 ತಿಂಗಳಿಂದ ಕಣ್ಣಿಟ್ಟಿದ್ದರು. ಬಂಧಿತರಿಬ್ಬರು ನೀಡಿದ ಮಾಹಿತಿಯನ್ನಾಧರಿಸಿ ರಾಂಚಿ, ಜಾರ್ಖಂಡ್, ರಾಜಗಢ, ತೆಲಂಗಾಣದಲ್ಲಿ ದಾಳಿ ನಡೆಸಿದ ಪೊಲೀಸರು ಇನ್ನೂ ಮೂವರನ್ನು ಬಂಧಿಸಿದ್ದಾರೆ. ಇನ್ನೂ 11 ಜನ ವಶದಲ್ಲಿದ್ದು, ಶೀಘ್ರ ಬಂಧಿಸುವ ಸಾಧ್ಯತೆ ಇದೆ.
ಆರೋಪಿಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಪಾಕಿಸ್ತಾನದಿಂದ ತರಬೇತಿ ನೀಡಲಾಗಿತ್ತು. ಇವರು ‘ಖಿಲಾಫತ್ ವಲಯ’ವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು ಹಾಗೂ ಇದಕ್ಕಾಗಿ ಹಣವನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದರು.