ಜಮ್ಮು-ಕಾಶ್ಮಿರದಲ್ಲಿ ಮುಸ್ಲಿಮರ ಪವಿತ್ರ ರಂಜಾನ್‌ ವೇಳೆ ಫ್ಯಾಶನ್‌ ಶೋ : ಆಯೋಜಕರ ಕ್ಷಮೆ

KannadaprabhaNewsNetwork |  
Published : Mar 11, 2025, 12:48 AM ISTUpdated : Mar 11, 2025, 04:26 AM IST
ಫ್ಯಾಷನ್‌ ಶೋ | Kannada Prabha

ಸಾರಾಂಶ

ಮುಸ್ಲಿಮರ ಪವಿತ್ರ ರಂಜಾನ್‌ ತಿಂಗಳ ವೇಳೆ ಜಮ್ಮು-ಕಾಶ್ಮಿರದ ಗುಲ್ಮಾರ್ಗ್‌ನಲ್ಲಿ ಆಯೋಜಿಸಲಾಗಿದ್ದ ಫ್ಯಾಷನ್‌ ಶೋಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಅದನ್ನು ಆಯೋಜಿಸಿದ್ದ ವಸ್ತ್ರ ವಿನ್ಯಾಸಕರಾದ ಶಿವನ್‌ ಭಾಟಿಯಾ ಹಾಗೂ ನರೇಶ್‌ ಕುಕ್ರೆಜಾ ಕ್ಷಮೆ ಯಾಚಿಸಿದ್ದಾರೆ.

ಜಮ್ಮು: ಮುಸ್ಲಿಮರ ಪವಿತ್ರ ರಂಜಾನ್‌ ತಿಂಗಳ ವೇಳೆ ಜಮ್ಮು-ಕಾಶ್ಮಿರದ ಗುಲ್ಮಾರ್ಗ್‌ನಲ್ಲಿ ಆಯೋಜಿಸಲಾಗಿದ್ದ ಫ್ಯಾಷನ್‌ ಶೋಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಅದನ್ನು ಆಯೋಜಿಸಿದ್ದ ವಸ್ತ್ರ ವಿನ್ಯಾಸಕರಾದ ಶಿವನ್‌ ಭಾಟಿಯಾ ಹಾಗೂ ನರೇಶ್‌ ಕುಕ್ರೆಜಾ ಕ್ಷಮೆ ಯಾಚಿಸಿದ್ದಾರೆ.

‘ರಂಜಾನ್‌ ತಿಂಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ. ನಮ್ಮ ಉದ್ದೇಶ ಸ್ಕೀಯಿಂಗ್‌ (ಮಂಜಿನ ಮೇಲೆ ಸ್ಕೀ ಮಾಡುವುದು) ವೇಳೆ ಧರಿಸುವ ಉಡುಪುಗಳನ್ನು ಪ್ರದರ್ಶಿಸುವುದು ಆಗಿತ್ತೇ ಹೊರತು ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವುದಲ್ಲ’ ಎಂದಿದ್ದಾರೆ.

ಮಾ.7ರಂದು ಆಯೋಜಿಸಿದ್ದ ಫ್ಯಾಷನ್‌ ಶೋನಲ್ಲಿ ಅಶ್ಲೀಲತೆ ಪ್ರದರ್ಶಿಸಲಾಗಿತ್ತು ಎಂದು ಆರೋಪಿಸಿ ಧಾರ್ಮಿಕ ಮುಖಂಡರು ಹಾಗೂ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ, ‘ಇಂತಹ ಕಾರ್ಯಕ್ರಮಕ್ಕೆ ನಾವು ಎಂದೂ ಅನುಮತಿಸುತ್ತಿರಲಿಲ್ಲ’ ಎಂದು ಸಿಎಂ ಒಮರ್‌ ಅಬ್ದುಲ್ಲಾ ಹೇಳಿದ್ದರು.

ಆರೆಸ್ಸೆಸ್‌ ವಿರುದ್ಧ ಮಾತಾಡದಂತೆ ನನಗೆ ಸೂಚನೆಯಿತ್ತು: ದಿಗ್ವಿಜಯ

ಭೋಪಾಲ್: ‘ನಾನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ಗೆ ಪ್ರಚಾರಕ್ಕೆ ತೆರಳಿದ್ದ ವೇಳೆ ಆರ್‌ಎಸ್‌ಎಸ್ ವಿರುದ್ಧ ಮಾತನಾಡದಂತೆ (ಹೈಕಮಾಂಡ್‌ನಿಂದ) ಸೂಚನೆಯಿತ್ತು. ಅದರಿಂದ ಹಿಂದೂಗಳು ಕೋಪಗೊಳ್ಳುತ್ತಾರೆ ಎಂಬ ಭಯದಿಂದ ಆ ರೀತಿ ಹೇಳಿದ್ದರು’ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾನು ಮಧ್ಯಪ್ರದೇಶ ಸಿಎಂ ಆಗಿದ್ದ ವೇಳೆ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಡಿ, ಹಿಂದೂಗಳು ಮುನಿಸಿಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದರು. 

ಆದರೆ ಆರ್‌ಎಸ್‌ಎಸ್ ಧರ್ಮದ ಹೆಸರಿನಲ್ಲಿ ಹಿಂದೂಗಳನ್ನು ದಾರಿತಪ್ಪಿಸಿ, ಶೋಷಿಸುವ ಕೆಲಸ ಮಾಡುತ್ತಿದೆ. ಆದಿಗುರು ಶಂಕರಾಚಾರ್ಯರು ಸಾವಿರಾರು ವರ್ಷಗಳ ಹಿಂದೆಯೇ ಹಿಂದೂ ಸಂಸ್ಕೃತಿಯನ್ನು ಸ್ಥಾಪಿಸಿದ್ದಾರೆ. ಶಂಕರಪೀಠದ ಯಾವ ಶಂಕರಾಚಾರ್ಯರು ಇಂದು ಬಿಜೆಪಿ, ಆರ್‌ಎಸ್ಎಸ್‌ನ ಬೆಂಬಲಿಗರಾಗಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.

ತನಿಖೆಗಷ್ಟೇ ಸಾಮಾಜಿಕ ಮಾಧ್ಯಮ ಪರಿಶೀಲನೆ: ತೆರಿಗೆ ಇಲಾಖೆ ಸ್ಪಷ್ಟನೆ

ನವದೆಹಲಿ: ಹೊಸ ಆದಾಯ ತೆರಿಕೆ ಕಾಯ್ದೆಯ ಸೆಕ್ಷನ್‌ 247ರ ಅಡಿಯಲ್ಲಿ ಅಡಿ, ತೆರಿಗೆ ಅಧಿಕಾರಿಗಳಿಗೆ ತೆರಿಗೆದಾರರ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್‌ ಸಾಧನಗಳನ್ನು ಪರಿಶೀಲಿಸುವ ಬಗ್ಗೆ ಅಧಿಕಾರ ನೀಡಲಾಗಿದೆ ಎಂಬ ಆರೋಪಗಳಿಗೆ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.‘ತನಿಖೆಗೆ ಒಳಪಟ್ಟ ವ್ಯಕ್ತಿ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ನಿರಾಕರಿಸಿದರೆ ಮಾತ್ರ ಅಧಿಕಾರಿಗಳು ಶೋಧ ಹಾಗೂ ಸಮೀಕ್ಷೆ ನಡೆಸುವ ವೇಳೆ ಅಧಿಕಾರಿಗಳು ಡಿಜಿಟಲ್‌ ಮಾಧ್ಯಮ ಹಾಗೂ ಸಾಧನಗಳನ್ನು ಪರಿಶೀಲಿಸುತ್ತಾರೆ. ಇದನ್ನು ಜನಸಾಮಾನ್ಯರ ಆನ್‌ಲೈನ್‌ ಗೌಪ್ಯತೆಗೆ ಧಕ್ಕೆ ತರಲು ಬಳಸುವುದಿಲ್ಲ’ ಎಂದು ಹೇಳಿದ್ದಾರೆ. ಜೊತೆಗೆ, ‘1961ರ ಕಾಯ್ದೆಯಲ್ಲೇ ಈ ಅಧಿಕಾರ ಇತ್ತು. ಈಗಲೂ ಮುಂದುವರಿದಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಇ-ಮೇಲ್‌, ಸಾಮಾಜಿಕ ಮಾಧ್ಯಮ ಖಾತೆಗಳು, ಕ್ಲೌಡ್‌ ಸ್ಟೋರೇಜ್‌ ಸೇರಿದಂತೆ ಎಲೆಕ್ಟ್ರಾನಿಕ್ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೊಸ ಐಟಿ ಕಾಯ್ದೆಯಲ್ಲಿ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.

ಶಬರಿಮಲೆ ದರ್ಶನ ಮಾರ್ಗ ಬದಲು: ಹೆಚ್ಚು ಹೊತ್ತು ದರ್ಶನ ಸಾಧ್ಯ

ತಿರುವನಂತಪುರಂ: ಶಬರಿಮಲೆ ಭಕ್ತರ ಬಹುದಿನದ ಅಸೆ ಈಡೇರಿಕೆಗೆ ದೇಗುಲದ ಆಡಳಿತ ಮಂಡಳಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮುಂದಾಗಿದ್ದು, ಭಕ್ತರ ಅನುಕೂಲಕ್ಕಾಗಿ ದರ್ಶನ ಮಾರ್ಗ ಬದಲಿಸಲು ನಿರ್ಧರಿಸಿದೆ. ಇದರಿಂದ ಭಕ್ತರು ಈ ಮುಂಚಿನ 5 ಸೆಕೆಂಡ್‌ ಬದಲಾಗಿ 25 ಸೆಕೆಂಡಿನಷ್ಟು ಅಯ್ಯಪ್ಪ ದರ್ಶನ ಪಡೆಯಬಹುದು.

ಈ ಹಿಂದೆ 18 ಮೆಟ್ಟಿಲುಗಳನ್ನು ಹತ್ತುವ ಭಕ್ತರು ದರ್ಶನಕ್ಕೆ ಸೇತುವೆ ಬಳಿ ತೆರಳಿ ಅಲ್ಲಿ ಇನ್ನೊಂದು ಮಾರ್ಗದಲ್ಲಿ ಸರದಿಯಲ್ಲಿ ಕಾಯಬೇಕಿತ್ತು. ಈ ವ್ಯವಸ್ಥೆಯು ದರ್ಶನಕ್ಕೆ ಕೇವಲ 5 ಸೆಕೆಂಡ್‌ ನೀಡುತ್ತಿತ್ತು. ಇದರಿಂದ ಶೇ.80ರಷ್ಟು ಭಕ್ತರಿಗೆ ತೃಪ್ತಿಯಿರಲಿಲ್ಲ. ಹೀಗಾಗಿ ಮಾರ್ಗ ಬದಲಿಗೆ ಮನವಿ ಹಿನ್ನೆಲೆ ಟಿಡಿಬಿ ಈ ನಿರ್ಧಾರ ಕೈಗೊಂಡಿದ್ದು, ಹೊಸ ನಿಯಮದ ಪ್ರಕಾರ ದರ್ಶನಕ್ಕೆ 20 ರಿಂದ 25 ಸೆಕೆಂಡುಗಳ ಅವಕಾಶ ಸಿಗಲಿದೆ.ದೇಗುಲದ ಅಡಳಿತ ಮಂಡಳಿ ಮುಖ್ಯಸ್ಥ ಪಿ.ಬಿ. ಪ್ರಶಾಂತ್‌ ಈ ಬಗ್ಗೆ ಮಾಹಿತಿ ನೀಡಿದ್ದು, ‘ಮಾ.15ರಿಂದ ಪ್ರಾಯೋಗಿಕವಾಗಿ ಮಾಸಿಕ ಪೂಜೆಯ ಸಮಯದಲ್ಲಿ ಈ ಬದಲಾವಣೆ ತರಲಾಗುವುದು. ವಿಷು ಪೂಜೆಯ ಸಂದರ್ಭದಲ್ಲಿ 12 ದಿನಗಳವರೆಗೆ ಮುಂದುವರೆಯಲಿದೆ. ಇದು ಯಶಸ್ವಿಯಾದರೆ ಮುಂದಿನ ಮಂಡಲ-ಮಕರವಿಳಕ್ಕು ಸಮಯದಲ್ಲಿ ಈ ನಿಯಮ ಶಾಶ್ವತಗೊಳಿಸಲಾಗುವುದು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ