5 ವರ್ಷ ಬಳಿಕ ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork | Updated : Mar 08 2024, 08:45 AM IST

ಸಾರಾಂಶ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿದರು.

ಶ್ರೀನಗರ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿದರು. 

ಈ ವೇಳೆ 370ನೇ ವಿಧಿ ರದ್ದತಿ ಸಮರ್ಥಿಸಿಕೊಂಡ ಅವರು, ಇದರಿಂದ ಕಾಶ್ಮೀರದಲ್ಲಿ ಹೊಸ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ ಎಂದು ಬಣ್ಣಿಸಿದರು. 

ಇದೇ ವೇಳೆ 370ನೇ ವಿಧಿಯನ್ನು ವಿಪಕ್ಷಗಳು ತಮ್ಮ ಸ್ವಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದವು ಎಂದು ಟೀಕಿಸಿದರು.

ಗುರುವಾರ ಕಾಶ್ಮೀರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಕ್ಷಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ವಿಕಸಿತ ಜಮ್ಮು ಕಾಶ್ಮೀರ ಸಮಾವೇಶದಲ್ಲಿ ಮಾತನಾಡಿದ ಅವರು ‘370ನೇ ವಿಧಿ ರದ್ದತಿಯಿಂದ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಪರ್ವವೇ ಆರಂಭವಾಗಿದೆ. 

ಪ್ರಸ್ತುತ ಕಾಶ್ಮೀರದಲ್ಲಿ ಸ್ವಚ್ಛ ಗಾಳಿ ಬೀಸುತ್ತಿದ್ದು, ಪ್ರವಾಸೋದ್ಯಮಕ್ಕೆ ಜಾಗತಿಕವಾಗಿ ಜನರನ್ನು ಕೈಬೀಸಿ ಕರೆಯುತ್ತಿದೆ. ಇಂದು ಪ್ರವಾಸೋದ್ಯಮ ಮತ್ತು ರೈತರಿಗೆ ನೆರವಾಗುವಂತಹ 5 ಸಾವಿರ ಕೋಟಿ ರು. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡಲಾಗಿದೆ.

 ಈ ಮೂಲಕ ಜಮ್ಮು ಕಾಶ್ಮೀರದ ಜನತೆಯನ್ನು ಸಬಲೀಕರಣಗೊಳಿಸಿ ಕಾಶ್ಮೀರವನ್ನು ಭಾರತದ ಮುಕುಟದಂತೆ ಕಂಗೊಳಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡುವ ಸಂಕಲ್ಪ ತೊಡಲಾಗಿದೆ’ ಎಂದು ತಿಳಿಸಿದರು. 

ಪ್ರತಿಪಕ್ಷಗಳ ವಿರುದ್ದ ವಾಗ್ದಾಳಿ: ಇದೇ ವೇಳೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘370ನೇ ವಿಧಿಯ ಕುರಿತು ಸುಳ್ಳುಸುದ್ದಿ ಹಬ್ಬಿಸುವ ಮೂಲಕ ವಿಪಕ್ಷಗಳು ಇಡೀ ದೇಶಕ್ಕೇ ದೀರ್ಘಕಾಲದಿಂದ ದಿಕ್ಕು ತಪ್ಪಿಸಲಾಗಿತ್ತು. 

ಅದನ್ನು ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರ ಅಭಿವೃದ್ಧಿಯಲ್ಲಿ ಹೊಸ ಮನ್ವಂತರಕ್ಕೆ ತಲುಪಲಿದೆ’ ಎಂಬುದಾಗಿ ಬಣ್ಣಿಸಿದರು. 

ನೇಮಕಾತಿ ಪತ್ರ ವಿತರಣೆ: ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದಲ್ಲಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಿರುವ 1000 ಮಂದಿಗೆ ನೇಮಕಾತಿ ಪತ್ರವನ್ನು ಪ್ರಧಾನಿ ಮೋದಿ ವಿತರಿಸಿದರು. ಅಲ್ಲದೆ ಹಲವು ಸರ್ಕಾರಿ ಯೋಜನೆಗಳ ಫಲಾನುಭವಿಗಳ ಜೊತೆಗೆ ಸಂವಾದವನ್ನೂ ನಡೆಸಿದರು.

ಕಾಶ್ಮೀರದಲ್ಲೀಗ ಸ್ವಚ್ಛ ಗಾಳಿ: 370ನೇ ವಿಧಿ ರದ್ದತಿಯಿಂದ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಪರ್ವವೇ ಆರಂಭವಾಗಿದೆ. ಇಲ್ಲೀಗ ಸ್ವಚ್ಛ ಗಾಳಿ ಬೀಸುತ್ತಿದೆ. 

ಕಾಶ್ಮೀರವು ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜಮ್ಮು ಕಾಶ್ಮೀರದ ಜನತೆಯನ್ನು ಸಬಲೀಕರಣಗೊಳಿಸಿ ಕಾಶ್ಮೀರವನ್ನು ಭಾರತದ ಮುಕುಟದಂತೆ ಕಂಗೊಳಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡುವ ಸಂಕಲ್ಪ ತೊಟ್ಟಿದ್ದೇವೆ. - ನರೇಂದ್ರ ಮೋದಿ ಪ್ರಧಾನ ಮಂತ್ರಿ

Share this article