ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಸ್ಥಾನ ದೇವೇಂದ್ರ ಫಡ್ನವೀಸ್ ಅಲಂಕರಿಸುವುದು ಪಕ್ಕಾ

KannadaprabhaNewsNetwork |  
Published : Nov 28, 2024, 12:35 AM ISTUpdated : Nov 28, 2024, 05:29 AM IST
ದೇವೇಂದ್ರ ಫಡ್ನವೀಸ್‌ | Kannada Prabha

ಸಾರಾಂಶ

ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಶಿವಸೇನೆ ನಾಯಕ ಏಕನಾಥ ಶಿಂಧೆ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ನಡುವೆ ನಡೆದಿದ್ದ ಹಗ್ಗಜಗ್ಗಾಟ ಮುಕ್ತಾಯದ ಹಂತಕ್ಕೆ ಬಂದಿದ್ದು, ಫಡ್ನವೀಸ್ ನೂತನ ಸಿಎಂ ಆಗುವುದು ಪಕ್ಕಾ ಆಗಿದೆ.

  ಥಾಣೆ/ಮುಂಬೈ : ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಶಿವಸೇನೆ ನಾಯಕ ಏಕನಾಥ ಶಿಂಧೆ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ನಡುವೆ ನಡೆದಿದ್ದ ಹಗ್ಗಜಗ್ಗಾಟ ಮುಕ್ತಾಯದ ಹಂತಕ್ಕೆ ಬಂದಿದ್ದು, ಫಡ್ನವೀಸ್ ನೂತನ ಸಿಎಂ ಆಗುವುದು ಪಕ್ಕಾ ಆಗಿದೆ. ಈ ಕುರಿತು ಸ್ವತಃ ಶಿಂಧೆ ಅವರೇ ಬುಧವಾರ ಸ್ಪಷ್ಟ ಸುಳಿವು ನೀಡಿದ್ದಾರೆ.

ಈ ಬೆಳವಣಿಗೆಗೆ ಪೂರಕವಾಗಿ ಮಹಾರಾಷ್ಟ್ರದ ಮಹಾಯುತಿ ಒಕ್ಕೂಟದ ನಾಯಕರು ಗುರುವಾರ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿದೆ. ಈ ಭೇಟಿ ಬಳಿಕ ನೂತನ ಸಿಎಂ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳ ಹೆಸರು ಘೋಷಣೆ ಮಾಡಲಾಗುವುದು. ಅದರಂತೆ ಫಡ್ನವೀಸ್‌ ಸಿಎಂ ಆಗಿ, ಎನ್‌ಸಿಪಿಯ ಅಜಿತ್‌ ಪವಾರ್‌ ಮತ್ತು ಶಿವಸೇನೆಯ ಏಕನಾಥ್‌ ಶಿಂಧೆ ಉಪಮುಖ್ಯಮಂತ್ರಿಯಾಗಿ ಘೋಷಿಸಲ್ಪಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಂಧೆ ‘ನಿರ್ಗಮನ’ ನುಡಿ:

ಸ್ವಕ್ಷೇತ್ರ ಥಾಣೆಯ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಂಧೆ, ‘ನಾನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಕರೆ ಮಾಡಿ ಯಾರು ಮುಂದಿನ ಸಿಎಂ ಎಂಬುದನ್ನು ನಿರ್ಧರಿಸಲು ಹೇಳಿದ್ದೇನೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದು ಭರವಸೆ ನೀಡಿದ್ದೇನೆ’ ಎಂದರು.

‘ಮುಂದಿನ ಮಹಾರಾಷ್ಟ್ರ ಸಿಎಂ ಹೆಸರಿಸುವ ಬಿಜೆಪಿಯ ನಿರ್ಧಾರವನ್ನು ನಮ್ಮ ಶಿವಸೇನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಕಡೆಯಿಂದ ಸ್ಪೀಡ್ ಬ್ರೇಕರ್ ಇಲ್ಲ’ ಎಂದು ಶಿಂಧೆ ಸ್ಪಷ್ಟಪಡಿಸಿದರು.

‘ನಾನು ಎಂದೆಂದಿಗೂ ಕೆಲಸಗಾರ. ನನ್ನ ಪ್ರಕಾರ ‘ಸಿಎಂ’ ಎಂದರೆ ‘ಮುಖ್ಯಮಂತ್ರಿ’ ಅಲ್ಲ ‘ಕಾಮನ್ ಮ್ಯಾನ್’. ನಾನು ಮುಖ್ಯಮಂತ್ರಿ ಆಗಿದ್ದು ಜನಪ್ರಿಯತೆ ಗಳಿಸಲು ಅಲ್ಲ. ಮಹಾರಾಷ್ಟ್ರದ ಕಲ್ಯಾಣಕ್ಕಾಗಿ’ ಎಂದು ಹೇಳಿದರು.

ಈ ಮೂಲಕ ತಾವು ಮತ್ತೆ ಸಿಎಂ ಆಗಲ್ಲ. ಕಾಮನ್‌ ಮ್ಯಾನ್‌ ಮಾತ್ರ ಆಗುವ ಸುಳಿವು ನೀಡಿದರು. ಅಲ್ಲದೆ, ತಮ್ಮ ನಾಯಕತ್ವಕ್ಕೆ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತುಂಬಾ ಸಹಕಾರ ನೀಡಿದರು ಎಂದು ಕೃತಜ್ಞತೆ ಸಲ್ಲಿಸಿದರು.

ನನಗೆ ನಿರಾಸೆ ಆಗಿಲ್ಲ:

‘ತಮ್ಮ ನಾಯಕತ್ವದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯಗಳಿಸಿದರೂ 2ನೇ ಅವಧಿಗೆ ಸಿಎಂ ಸ್ಥಾನ ಸಿಗದೇ ಶಿಂಧೆ ನಿರಾಶೆಗೊಂಡಿದ್ದಾರೆ ಎಂಬ ವರದಿಗಳನ್ನು ಅವರು ತಳ್ಳಿಹಾಕಿದರು.

‘ಅಂತಹದ್ದೇನೂ ಇಲ್ಲ. ನಾನು ಸಿಎಂ ಆಗಿದ್ದಾಗ ಬಿಜೆಪಿ ನನ್ನನ್ನು ಬೆಂಬಲಿಸಿದೆ ಎಂಬುದನ್ನು ಸ್ಮರಿಸಬೇಕು. ನಮಗೆ ಯಾರಿಗೂ ಬೇಜಾರಿಲ್ಲ. ಅಳುವುದೂ ಇಲ್ಲ. ನಾವೆಲ್ಲ ಮಹಾಯುತಿ ಕೂಟದ ಗೆಲುವಿಗೆ ಶ್ರಮಿಸಿದ್ದೇವೆ’ ಎಂದರು.

ಇಂದು ದಿಲ್ಲಿಯಲ್ಲಿ ಸಭೆ:

ಡಿಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾಳೆ (ಗುರುವಾರ) ದೆಹಲಿಯಲ್ಲಿ ಅಮಿತ್ ಶಾ ಅವರೊಂದಿಗೆ ಸಭೆ ಇದೆ ಮತ್ತು ಸರ್ಕಾರ ರಚನೆಯ ಎಲ್ಲಾ ಸಂಬಂಧಿತ ನಿರ್ಧಾರಗಳನ್ನು ಅಲ್ಲಿ ತೆಗೆದುಕೊಳ್ಳಲಾಗುವುದು’ ಎಂದರು.

- ಸಿಎಂ ರೇಸ್‌ನಿಂದ ಏಕನಾಥ್‌ ಶಿಂಧೆ ಹಿಂದಕ್ಕೆ । ಶಿಂಧೆ, ಪವಾರ್‌ ಡಿಸಿಎಂ?

- ದಿಲ್ಲಿಯಲ್ಲಿಂದು ಎನ್‌ಡಿಎ ನಾಯಕರ ಸಭೆ । ಬಳಿಕ ಸಿಎಂ ಹೆಸರು ಘೋಷಣೆ----

ಮೋದಿ ನಿರ್ಧಾರ ಫೈನಲ್‌

ನಾನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಕರೆ ಮಾಡಿ ಯಾರು ಮುಂದಿನ ಸಿಎಂ ಎಂದು ನಿರ್ಧರಿಸಲು ಹೇಳಿದ್ದೇನೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಹೊಸ ಸಿಎಂ ಹೆಸರಿಸುವ ಬಿಜೆಪಿಯ ನಿರ್ಧಾರವನ್ನು ನಮ್ಮ ಶಿವಸೇನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಕಡೆಯಿಂದ ಸ್ಪೀಡ್ ಬ್ರೇಕರ್ ಇಲ್ಲ.

- ಏಕನಾಥ್‌ ಶಿಂಧೆ ಮಹಾರಾಷ್ಟ್ರದ ನಿರ್ಗಮಿತ ಮುಖ್ಯಮಂತ್ರಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ