ಮುಂಬೈ: ಮದ್ಯಮ ವರ್ಗದ ಕಾರಿನ ಕನಸು ಈಡೇರಿಸಲು ಕೇವಲ 1 ಲಕ್ಷ ರು.ಗೆ ಟಾಟಾ ನ್ಯಾನೋ ಕಾರು ಬಿಡುಗಡೆ ಮಾಡಿದ್ದ ರತನ್ ಟಾಟಾ ಅವರ ಎಲೆಕ್ಟ್ರಿಕ್ ನ್ಯಾನೋ ಕನಸು ಮುಂದಿನ ವರ್ಷದ ವೇಳೆಗೆ ನನಸಾಗಲಿದೆ.
ಬೇಡಿಕೆ ಕುಸಿತದ ಕಾರಣ ಉತ್ಪಾದನೆ ಸ್ಥಗಿತಗೊಂಡಿದ್ದ ನ್ಯಾನೋ ಕಾರನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆ ಮಾಡಲು ಟಾಟಾ ಸಮೂಹ ಸಜ್ಜಾಗಿದೆ. ಹೊಸ ವಿನ್ಯಾಸ, ವೈಶಿಷ್ಟ್ಯಗಳನ್ನೊಳಗೊಂಡ ನ್ಯಾನೋ 2025ರ ವೇಳೆಗೆ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕಾರು17 ಕಿಲೋವ್ಯಾಟ್ ಬ್ಯಾಟರಿ ಹೊಂದಿರಲಿದ್ದು, ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 400 ಕಿ.ಮೀ. ಸಾಗುವ ಸಾಮರ್ಥ್ಯ ಹೊಂದಿರಲಿದೆ. ಇನ್ನು ಕಾರಿನ ಒಳಭಾಗದಲ್ಲಿ 9 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಟೀವಿ, ಪವರ್ ಕಿಟಕಿ, ಸ್ವಯಂಚಾಲಿತ ಹವಾಮಾನ ನಿಯಂತ್ರಕ ಸೇರಿ ಅತ್ಯಾಧುನಿಕ ಇಂಟಿರಿಯರ್, ಐಷಾರಾಮಿ ಆಸನ ವ್ಯವಸ್ಥೆ ಇದರಲ್ಲಿ ಇರಲಿದೆ. ಹೈಎಂಡ್ ಬೈಕ್‌ಗಳ ಬೆಲೆ ಅಂದರೆ ಅಂದಾಜು 4 ಲಕ್ಷ ರು.ಗೆ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಂಪನಿ ಚಿಂತನೆ ಹೊಂದಿದೆ ಎನ್ನಲಾಗಿದೆ.
ಹೋಂಡಾದಿಂದ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ
ನವದೆಹಲಿ: ಮುಂಚೂಣಿ ವಾಹನ ತಯಾರಿಕಾ ಕಂಪನಿಯಾದ ಹೊಂಡಾ ಮೋಟಾರ್ಸ್, ಭಾರತದ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಹೋಂಡಾ ಆಕ್ಟಿವಾ ಇ ಹಾಗೂ ಕ್ಯುಸಿ 1 ಎಂಬ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಂಪನಿ ಅನಾವಣಗೊಳಿಸಿದೆ. ಆ್ಯಕ್ಟಿವಾ ಇ ಬ್ಯಾಟರಿ ಸ್ವಾಪಿಂಗ್ ಅವಕಾಶ ಹೊಂದಿದ್ದರೆ, ಆ್ಯಕ್ಟಿವಾ ಕ್ಯುಸಿ ಸ್ಥಿರ ಬ್ಯಾಟರಿ ಹೊಂದಿರಲಿದೆ. ಈ ಸ್ಕೂಟರ್‌ಗಳು ಒಮ್ಮೆ ಚಾರ್ಜ್ ಮಾಡಿದರೆ 80-102 ಕಿ.ಮೀವರೆಗೂ ಮೈಲೇಜ್ ನೀಡಲಿದೆ. ಬೆಲೆ 90000 ರು.ನಿಂದ 1.40 ಲಕ್ಷ ರು.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಇಸ್ರೇಲ್ - ಹಿಜ್ಬುಲ್ಲಾ ಕದನ ವಿರಾಮ ಜಾರಿ
ಬೈರೂತ್: ಕಳೆದ ಸೆಪ್ಟೆಂಬರ್‌ನಿಂದ ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ನಡುವೆ ನಡೆಯುತ್ತಿದ್ದ ಸಂಘರ್ಷ ತಡೆಯುವ ಸಲುವಾಗಿ ಘೋಷಿಸಲಾಗಿರುವ ಕದನವಿರಾಮ ಬುಧವಾರ ಬೆಳಗ್ಗೆಯಿಂದಲೇ ಜಾರಿಗೆ ಬಂದಿದೆ. ಅಮೆರಿಕ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ 2 ತಿಂಗಳ ಅವಧಿಗೆ ಕದನ ವಿರಾಮ ಜಾರಿಗೆ ಎರಡೂ ಬಣಗಳು ಒಪ್ಪಿವೆ. ಒಪ್ಪಂದದ ಅನ್ವಯ ದಕ್ಷಿಣ ಲೆಬನಾನ್‌ನಿಂದ ಹಿಜ್ಬುಲ್ಲಾ ತಮ್ಮ ಸಶಸ್ತ್ರ ಪಡೆ ಹಿಂದಕ್ಕೆ ತೆಗೆದುಕೊಳ್ಳಬೇಕು. ಇಸ್ರೇಲಿ ಪಡೆಗಳು ಗಡಿಯ ಕಡೆಗೆ ಹಿಂದಿರುಗಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಹಿಜ್ಬುಲ್ಲಾಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಇಸ್ರೇಲ್ ಹೇಳಿದೆ. ಈ ನಡುವೆ ತೆರವುಗೊಂಡಿದ್ದ ಪ್ರದೇಶಕ್ಕೆ ತಕ್ಷಣವೇ ಮರಳದಂತೆ ಇಸ್ರೇಲಿ ಸೇನೆ ಸೂಚನೆ ನೀಡಿದ ಹೊರತಾಗಿಯೂ ಸಂಘರ್ಷ ಪೀಡಿತ ಪ್ರದೇಶಗಳಿಂದ ತೆರವುಗೊಂಡಿದ್ದ ಸಾವಿರಾರು ಲೆಬನಾನಿಗಳು ಜನರು ಮರಳಿ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದ್ದಾರೆ.
ಹಿಜ್ಬುಲ್ಲಾ ಬಳಿಕ ಹಮಾಸ್ ಕದನವಿರಾಮಕ್ಕೆ ಉತ್ಸುಕ
ಜೆರುಸಲೇಂ: ಸಾವಿರಾರು ಜನರ ಸಾವು ಕಂಡ ಇಸ್ರೇಲ್ ಹಮಾಸ್ ನಡುವಿನ ಯುದ್ಧದಲ್ಲಿ ಬಹುದೊಡ್ಡ ಬೆಳವಣಿಗೆಗೆ ಹಮಾಸ್ ಸಿದ್ಧವಾಗಿದೆ. ಲೆಬನಾನ್‌ನಲ್ಲಿನ ಹಿಜ್ಬುಲ್ಲಾಗಳ ಜೊತೆ ಇಸ್ರೇಲ್ ಕದನವಿರಾಮ ಘೋಷಿಸಿಕೊಂಡ ಬಳಿಕ ಹಮಾಸ್ ಸಹ ಕದನವಿರಾಮಕ್ಕೆ ಆಸಕ್ತಿ ತೋರಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಹಮಾಸ್‌ನ ಉನ್ನತ ಅಧಿಕಾರಿಗಳು ಟರ್ಕಿ, ಈಜಿಪ್ಟ್ ಮತ್ತು ಕತಾರ್‌ಗೆ ಮನವಿ ಸಲ್ಲಿಸಿದ್ದಾರೆ. ಕದನವಿರಾಮ ಜಾರಿಗೊಳಿಸಲು ಈ ದೇಶಗಳು ಮಧ್ಯಸ್ಥಿಕೆ ಮಾಡಬೇಕು. ಇಸ್ರೇಲ್ ಮತ್ತು ಹಮಾಸ್‌ನಲ್ಲಿ ಬಂಧಿತರಾಗಿರುವವರನ್ನು ಎರಡೂ ಕಡೆಯವರು ವಿನಿಮಯ ಮಾಡಿಕೊಳ್ಳಬೇಕು ಎಂದು ಹಮಾಸ್‌ನ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಆರೋಗ್ಯ ಸಂಸ್ಥೆ ಮುಖ್ಯಸ್ಥರಾಗಿ ಭಟ್ಟಾಚಾರ್ಯ ನೇಮಿಸಿದ ‘ಅಧ್ಯಕ್ಷ’ ಟ್ರಂಪ್
ವಾಷಿಂಗ್ಟನ್: ಅಮೆರಿಕದಿಂದ ಅತ್ಯನ್ನತ ಆರೋಗ್ಯ ಸಂಶೋಧನಾ ಸಂಸ್ಥೆಯಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಮುಂದಿನ ಮುಖ್ಯಸ್ಥರನ್ನಾಗಿ ಭಾರತೀಯ ಮೂಲದ ಜಯ್ ಭಟ್ಟಾಚಾರ್ಯ ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ. ಈ ಮೂಲಕ ಅಮೆರಿಕದ ಉನ್ನತ ಆಡಳಿತ ಹುದ್ದೆಗೆ ಡೊನಾಲ್ಡ್ ಟ್ರಂಪ್‌ರಿಂದ ನಾಮನಿರ್ದೇಶನಗೊಂಡ ಮೊದಲ ಭಾರತೀಯ-ಅಮೆರಿಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಭಟ್ಟಾಚಾರ್ಯ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ನೂತನವಾಗಿ ರಚಿಸಿದ ಸಚಿವಾಲಯಕ್ಕೆ ಟೆಕ್ ದಿಗ್ಗಜ ಎಲಾನ್ ಮಸ್ಕ್ ಜೊತೆ ಭಾರತೀಯ- ಅಮೆರಿಕ ವ್ಯಕ್ತಿ ವಿವೇಕ್ ರಾಮಸ್ವಾಮಿಯನ್ನು ಟ್ರಂಪ್ ಆರಿಸಿದ್ದರು. ಆದರೆ ಅದೊಂದು ಸ್ವಇಚ್ಛೆಯ ಹುದ್ದೆಯಾಗಿತ್ತು.