ರಾಮಮಂದಿರ ಉದ್ಘಾಟನೆ ಬಿಜೆಪಿ ಕಾರ್‍ಯಕ್ರಮ : ರಾಹುಲ್‌ ಗಾಂಧಿ

KannadaprabhaNewsNetwork | Updated : Jan 17 2024, 09:27 AM IST

ಸಾರಾಂಶ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್‌ ವಿರೋಧಿಸಿರುವ ಕಾರಣ ಅದು ಬಿಜೆಪಿ/ಆರ್‌ಎಸ್‌ಎಸ್‌ ಕಾರ್ಯಕ್ರಮವಾಗಿದೆ. ಹೀಗಾಗಿ ನಮಗೆ ಅಲ್ಲಿಗೆ ತೆರೆಳಲು ಕಷ್ಟ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂದಿ ಹೇಳಿದ್ದಾರೆ. 

ಕೊಹಿಮಾ (ನಾಗಾಲ್ಯಾಂಡ್‌): ‘ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ರಾಜಕೀಯ ಸ್ವರೂಪ ಪಡೆದುಕೊಂಡು ಬಿಜೆಪಿ/ಆರೆಸ್ಸೆಸ್‌ ಸಮಾರಂಭವಾಗಿದೆ. ಹೀಗಾಗಿ ನಾವು ಜ.22ರಂದು ಅಲ್ಲಿಗೆ ತೆರಳುವುದು ಕಷ್ಟವಾಗುತ್ತದೆ. 

ಆದರೆ ಅಲ್ಲಿಗೆ ಪಕ್ಷದ ಯಾವುದೇ ಕಾರ್ಯಕರ್ತರು ಹೋಗಲು ಅಡ್ಡಿ ಇಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ಸಿಗರು ರಾಮಮಂದಿರ ಆಹ್ವಾನ ತಿರಸ್ಕರಿಸಿದ ಬಳಿಕ ರಾಹುಲ್ ನೀಡುತ್ತಿರುವ ಮೊದಲ ಹೇಳಿಕೆ ಇದಾಗಿದೆ. ‘ಭಾರತ್‌ ಜೋಡೋ ನ್ಯಾಯ್‌ ಯಾತ್ರೆ’ಯ ಭಾಗವಾಗಿ ಹಾಲಿ ನಾಗಾಲ್ಯಾಂಡ್‌ನಲ್ಲಿರುವ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಜ.22ರ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರಾಜಕೀಯ ಮತ್ತು ನರೇಂದ್ರ ಮೋದಿ ಕಾರ್ಯಕ್ರಮವಾಗಿ ಪರಿವರ್ತಿಸಿವೆ. ಹೀಗಾಗಿ ಅದೀಗ ಆರ್‌ಎಸ್‌ಎಸ್‌-ಬಿಜೆಪಿ ಕಾರ್ಯಕ್ರಮವಾಗಿ ಬದಲಾಗಿದೆ. 

ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಅಧ್ಯಕ್ಷರು (ಮಲ್ಲಿಕಾರ್ಜುನ ಖರ್ಗೆ), ನಾನು ಜ.22ರ ಪ್ರಾಣ ಪ್ರತಿಷ್ಠಾಪನೆಗೆ ಹೋಗುವುದಿಲ್ಲ ಎಂದಿದ್ದು’ ಎಂದು ಹೇಳಿದರು.ಇದೇ ವೇಳೆ, ‘ನಾವು ಎಲ್ಲಾ ಧರ್ಮ ಮತ್ತು ಆಚರಣೆಗಳ ಬಗ್ಗೆಯೂ ಮುಕ್ತರಾಗಿದ್ದೇವೆ. 

ಹಿಂದೂ ಧರ್ಮದ ವಿಷಯದಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲವರು ಕೂಡಾ ಈಗಾಗಲೇ ಮಂದಿರ ಪ್ರಾಣ ಪ್ರತಿಷ್ಠಾಪನೆ ರಾಜಕೀಯ ಕಾರ್ಯಕ್ರಮವಾಗಿರುವ ಕಾರಣ ತಾವು ಅಲ್ಲಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎನ್ನುವ ಮೂಲಕ ಪರೋಕ್ಷವಾಗಿ ಇಬ್ಬರು ಶಂಕರಾಚಾರ್ಯರು ಕಾರ್ಯಕ್ರಮ ಬಹಿಷ್ಕರಿಸಿದ್ದನ್ನು ರಾಹುಲ್‌ ಪ್ರಸ್ತಾಪಿಸಿದರು.

ಜೊತೆಗೆ, ‘ನಾವು ರಾಜಕೀಯ ಕಾರ್ಯಕ್ರಮವೊಂದರ ಭಾಗವಾಗಲಾಗದು. ನಮ್ಮ ಪ್ರತಿಸ್ಪರ್ಧಿಗಳು ಇಡೀ ಕಾರ್ಯಕ್ರಮವನ್ನು ರಾಜಕೀಯ ಮಾಡಿ ಅದಕ್ಕೆ ಚುನಾವಣೆಯ ಸ್ವಾದ ನೀಡಿರುವಾಗ ನಾವು ಖಂಡಿತ ಅಲ್ಲಿಗೆ ಹೋಗಲಾಗದು. 

ಮೋದಿ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸುತ್ತಮುತ್ತ ರೂಪುಗೊಂಡಿರುವ ಕಾರ್ಯಕ್ರಮಕ್ಕೆ ಜ.22ರಂದು ಹೋಗುವುದು ನಮ್ಮ ಪಾಲಿಗೆ ಕಷ್ಟಕರ’ ಎಂದರು.

‘ಆದರೆ ನಮ್ಮ ಮಿತ್ರರು ಅಥವಾ ಪಕ್ಷದ ಯಾವುದೇ ವ್ಯಕ್ತಿಗಳು ರಾಮಮಂದಿರಕ್ಕೆ ಹೋಗುವುದಕ್ಕೆ ಮುಕ್ತರಾಗಿದ್ದಾರೆ ’ ಎಂದು ರಾಹುಲ್‌ ಸ್ಪಷ್ಟಪಡಿಸಿದರು.

ಬೋಧನೆ ಬೇಡ: ರಾಮಮಂದಿರವು ಪ್ರತಿಯೊಬ್ಬ ಹಿಂದೂವಿನ ಆಳವಾದ ಭಾವನೆ. ಆದರೆ ಇದನ್ನು ಅರಿಯದ ರಾಹುಲ್ ಏನಾದರೂ ಸುಳ್ಳು ಮಾತನಾಡಿ ಅದರಿಂದ ಪಾರಾಗಬಹುದು ಎಂಬ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ರಾಹುಲ್‌ರಿಂದ ಯಾರೂ ಬೋಧನೆ ಬಯಸುತ್ತಿಲ್ಲ ಎಂದು ಬಿಜೆಪಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ಹೇಳಿದರು.

Share this article