ಭಾರತದ ಮೇಲೆ ದಾಳಿ ನಿಲ್ಲಿಸಿದ್ದಕ್ಕೆ ಮುನೀರ್‌ಗೆ ಔತಣಕೂಟ : ಟ್ರಂಪ್‌!

KannadaprabhaNewsNetwork |  
Published : Jun 19, 2025, 11:50 PM ISTUpdated : Jun 20, 2025, 05:03 AM IST
 Donald Trump-Asim Munir Meet

ಸಾರಾಂಶ

ಭಾರತದ ಮೇಲಿನ ದಾಳಿಯನ್ನು ನಿಲ್ಲಿಸಿದ್ದಕ್ಕೆ ಧನ್ಯವಾದ ಹೇಳಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗೆ ತಾವು ಔತಣಕೂಟ ನೀಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

 ನ್ಯೂಯಾರ್ಕ್‌/ವಾಷಿಂಗ್ಟನ್‌: ಭಾರತದ ಮೇಲಿನ ದಾಳಿಯನ್ನು ನಿಲ್ಲಿಸಿದ್ದಕ್ಕೆ ಧನ್ಯವಾದ ಹೇಳಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗೆ ತಾವು ಔತಣಕೂಟ ನೀಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಯುದ್ಧ ನಿಲ್ಲಿಸಿ ಎಂದು ಪಾಕಿಸ್ತಾನ ಮಂಡಿಯೂರಿದ ಬಳಿಕವೇ ತಾನು ಯುದ್ಧ ನಿಲ್ಲಿಸಿದ್ದಾಗಿ ಭಾರತ ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ, ದಾಳಿ ನಿಲ್ಲಿಸಿದ್ದು ಪಾಕಿಸ್ತಾನ ಎನ್ನುವ ಮೂಲಕ ಆ ದೇಶ ಮೇಲುಗೈ ಸಾಧಿಸಿತ್ತು ಎಂಬ ರೀತಿಯಲ್ಲಿ ಟ್ರಂಪ್‌ ವಿವಾದಿತ ಹೇಳಿಕೆ ನೀಡಿದ್ದಾರೆ. 

ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ ಜತೆಗಿನ ಔತಣಕೂಟದ ಬಳಿಕ ತಮ್ಮ ಓವಲ್‌ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಭಾರತದೊಂದಿಗೆ ಯುದ್ಧ ನಿಲ್ಲಿಸಿದಕ್ಕಾಗಿ ಔತಣಕೂಟಕ್ಕೆ ಕರೆಸಿಕೊಂಡಿದ್ದೆ. ನಾನು ಮುನೀರ್‌ಗೆ ಕೃತಜ್ಞತೆ ಸಲ್ಲಿಸಲು ಬಯಸಿದ್ದೆ. ಇದೇ ವಿಚಾರವಾಗಿ ನಾನು ಪ್ರಧಾನಿ ಮೋದಿ ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇಬ್ಬರು ಬುದ್ಧಿವಂತ ವ್ಯಕ್ತಿಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಅಣುಸಮರಕ್ಕೆ ನಾಂದಿಯಾಗಬಹುದಾಗಿದ್ದ ಯುದ್ಧ ನಿಂತಿತು ಎಂದಿದ್ದಾರೆ.

ಇರಾನ್‌ ಯುದ್ಧ ವಿಚಾರ ಚರ್ಚೆ:

ಈ ನಡುವೆ ಮುನೀರ್‌ ಜತೆಗಿನ ಭೇಟಿ ವೇಳೆ ಇರಾನ್‌ ವಿಚಾರ ಪ್ರಸ್ತಾಪವಾಯಿತೇ ಎಂಬ ಪ್ರಶ್ನೆಗೆ, ಅವರಿಗೆ(ಪಾಕಿಸ್ತಾನ) ಇರಾನ್‌ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ. ಅಲ್ಲಿ ಏನಾಗುತ್ತಿದೆ ಎಂದು ಅವರು ಗಮನಿಸುತ್ತಿದ್ದಾರೆ. ಇರಾನ್ ವಿಚಾರದಲ್ಲಿ ಅವರು ನನ್ನ ಅಭಿಪ್ರಾಯಕ್ಕೆ ಸಹಮತ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಈ ಔತಣಕೂಟದ ಮುಖ್ಯ ಉದ್ದೇಶ ಇರಾನ್ ಜತೆಗಿನ ಸಂಘರ್ಷವೇ ಆಗಿತ್ತು. ಪಾಕಿಸ್ತಾನವು ಇರಾನ್‌ ಜತೆಗೆ ಗಡಿಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಗುಪ್ತಚರ ಮಾಹಿತಿಗಾಗಿ ನೆರವು ಪಡೆಯಲು ಪಾಕಿಸ್ತಾನದ ಸೇನಾ ಮುಖ್ಯಸ್ಥರ ಜತೆಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿ‍ಳಿಸಿವೆ. 

PREV
Read more Articles on

Recommended Stories

ಪುರುಷರ ಗರ್ಭನಿರೋಧಕ ಮಾತ್ರೆ ಪ್ರಯೋಗ ಯಶಸ್ವಿ
ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ತೀವ್ರ ತಪರಾಕಿ!