ಪ್ರಯಾಗದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತ ಭಾರಿ ಸಂಚಲನ ಸೃಷ್ಟಿಸಿದ್ದ ಗಾಜುಗಣ್ಣಿನ ಚೆಲುವೆ ಮೊನಾಲೀಸಾಗೆ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದ ನಿರ್ದೇಶಕ ಸನೋಜ್ ಕುಮಾರ್ ಮಿಶ್ರಾರನ್ನು ಅತ್ಯಾಚಾರದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನವದೆಹಲಿ: ಪ್ರಯಾಗದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತ ಭಾರಿ ಸಂಚಲನ ಸೃಷ್ಟಿಸಿದ್ದ ಗಾಜುಗಣ್ಣಿನ ಚೆಲುವೆ ಮೊನಾಲೀಸಾಗೆ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದ ನಿರ್ದೇಶಕ ಸನೋಜ್ ಕುಮಾರ್ ಮಿಶ್ರಾರನ್ನು ಅತ್ಯಾಚಾರದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸನೋಜ್ 2020ರಲ್ಲಿ ಉತ್ತರ ಪ್ರದೇಶದ ಮಹಿಳೆ ಜೊತೆ ಸಂಪರ್ಕ ಹೊಂದಿ, ಆಕೆಗೆ ಡ್ರಗ್ಸ್ ನೀಡಿ, ಅತ್ಯಾಚಾರ ನಡೆಸಿ, ನಗ್ನಚಿತ್ರಗಳನ್ನು ಕ್ಲಿಕ್ಕಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿ ಲಿವ್‌ಇನ್ ಸಂಗಾತಿ ರೀತಿ ನಡೆಸಿಕೊಳ್ಳುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿಸಿದ್ದಾರೆ. ಮತ್ತೊಂದೆಡೆ ದಿಲ್ಲಿ ಹೈಕೋರ್ಟ್ ಸನೋಜ್ ಅವರಿಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದೆ.
ಮೇರಠ್ ಕೇಸ್ ತರ ನಿನ್ನನ್ನು ಕೊಚ್ಚಿ ಡ್ರಂನಲ್ಲಿ ತುಂಬಿಡುವೆ: ಪತಿಗೆ ಪತ್ನಿಯಿಂದ ಬೆದರಿಕೆ
ನವದೆಹಲಿ: ಕಳೆದ ತಿಂಗಳು ಉತ್ತರ ಪ್ರದೇಶದ ಮೇರಠ್‌ನಲ್ಲಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಲೆ ಮಾಡಿ ಡ್ರಂನಲ್ಲಿ ಹಾಕಿಟ್ಟಿದ್ದ ಪ್ರಕರಣ ದೇಶದಲ್ಲಿಯೇ ಭಾರಿ ಸುದ್ದಿಯಾಗಿದ್ದು, ಅದೇ ರೀತಿ ಕೊಚ್ಚಿ ಡ್ರಂನಲ್ಲಿ ಹಾಕುವುದಾಗಿ ಮತ್ತೋರ್ವ ಮಹಿಳೆ ತನ್ನ ಗಂಡನಿಗೆ ಬೆದರಿಕೆ ಹಾಕಿದ್ದಾಳೆ.
ಉತ್ತರ ಪ್ರದೇಶದ ಗೋಂಡಾದ ಮಹಿಳೆ ಬೆದರಿಕೆ ಹಾಕಿದ್ದು, ಆಕೆಯ ವಿರುದ್ಧ ಪತಿ ದೂರು ನೀಡಿದ್ದಾರೆ. ಆರೋಪಿ ಮಾಯಾ ಮೌರ್ಯ ಅನ್ಯ ಪುರುಷರ ಜೊತೆ ಅನೈತಿಕ ಸಂಪರ್ಕ ಹೊಂದಿದ್ದಳು. ಇದನ್ನು ವಿರೋಧಿಸಿದ್ದಕ್ಕೆ ಪ್ರಿಯಕರ ನೀರಜ್ ಜತೆ ಸೇರಿ ಪತಿ ಧರ್ಮೇಂದ್ರ ಅವರ ತಾಯಿ ಮೇಲೆ ಹಲ್ಲೆ ನಡೆಸಿದ್ದಳು. ಜೊತೆಗೆ ಧರ್ಮೇಂದ್ರ ಅವರಿಗೆ ‘ಮೇರಠ್ ಕೇಸ್ ರೀತಿ ನಿನ್ನನ್ನು ಕೊಚ್ಚಿ ಡ್ರಂನಲ್ಲಿ ಹಾಕುವುದಾಗಿ’ ಬೆದರಿಕೆ ಹಾಕಿದ್ದಳು. ಇದರ ಬೆನ್ನಲ್ಲೇ ಧರ್ಮೇಂದ್ರ ನೀಡಿದ ದೂರಿನ ಮೇರೆಗೆ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಾಳಿ ಹೆಚ್ಚಳ; ಬಲೂಚ್ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ
ಇಸ್ಲಾಮಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಂಡುಕೋರರು ವಾಹನ ಅಡ್ಡಗಟ್ಟಿ ಪ್ರಯಾಣಿಕರ ಹತ್ಯೆಗೈಯುತ್ತಿರುವ ಪ್ರಕರಣ ಹೆಚ್ಚಳವಾದ ಬೆನ್ನಲ್ಲೇ ಸರ್ಕಾರವು ರಾತ್ರಿ ವೇಳೆ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ನಿಷೇಧಿಸಿದೆ. ಬಂಡುಕೋರರ ಸರಣಿ ಕೃತ್ಯ ಬೆನ್ನಲ್ಲೇ ಕಛಿ , ಝೋಬ್, ಗ್ವಾದರ್, ನೊಶ್ಕಿ. ಮುಸಾಖೇಲ್ ಜಿಲ್ಲೆಗಳಲ್ಲಿ ಸಂಜೆ 6 ರಿಂದ ಮುಂಜಾನೆ 6 ರ ತನಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಬಲೂಚ್ ಬಂಡುಕೋರರು ರೈಲನ್ನೇ ಹೈಜಾಕ್ ಮಾಡಿ, ರಕ್ಷಣೆ ಬಂದಿದ್ದ ನೂರಾರು ಯೋಧರ ಹತ್ಯೆ ಮಾಡಿದ್ದರು. ಬಳಿಕ ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರು.
ವೊಡಾಫೋನ್- ಐಡಿಯಾ ಮೊಬೈಲ್‌ನಲ್ಲಿ ಕೇಂದ್ರದ ಪಾಲು ಶೇ.49ಕ್ಕೆ ಏರಿಕೆ
ನವದೆಹಲಿ: ವೊಡಾಫೋನ್ ಐಡಿಯಾ ಕಂಪನಿಯ ಸ್ಪೆಕ್ಟ್ರಮ್ ಹರಾಜಿನ 36950 ಕೋಟಿ ರು.ಬಾಕಿ ಹಣವನ್ನು ಪಾವತಿಸದೇ ಇರುವ ಕಾರಣ ಆ ಮೊತ್ತವನ್ನು ಕಂಪನಿಯಲ್ಲಿನ ತನ್ನ ಷೇರು ರೂಪದಲ್ಲಿ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಸರ್ಕಾರದ ಪಾಲು ಶೇ.22.6ರಿಂದ ಶೇ.48.99ಕ್ಕೆ ಏರಿಕೆಯಾಗಲಿದೆ. ಈ ಸಂಬಂಧ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿರುವ ವೊಡಾಫೋನ್ ಐಡಿಯಾ, ‘ಟೆಲಿಕಾಂ ವಲಯಕ್ಕೆ ಸೆಪ್ಟೆಂಬರ್ 2021ರಂದು ಘೋಷಿಸಿದ ಬೆಂಬಲ ಪ್ಯಾಕೇಜ್‌ಗೆ ಅನುಗುಣವಾಗಿ ಭಾರತ ಸರ್ಕಾರಕ್ಕೆ ನೀಡಬೇಕಾದ ಬಾಕಿ ಉಳಿದಿರುವ ಸ್ಪೆಕ್ಟ್ರಮ್ ಹರಾಜು ಶುಲ್ಕವನ್ನು ಈಕ್ವಿಟಿ ಷೇರುಗಳಾಗಿ ಪರಿವರ್ತಿಸಲು ಕೇಂದ್ರ ಸಂವಹನ ಸಚಿವಾಲಯವು ನಿರ್ಧರಿಸಿದೆ’ ಎಂದು ತಿಳಿಸಿದೆ.
ಪ್ರಧಾನಿ ಮೋದಿ ಆಪ್ತ ಕಾರ್ಯದರ್ಶಿಯಾಗಿ ನಿಧಿ ತಿವಾರಿ ನೇಮಕ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿಯಾಗಿ ಐಎಫ್‌ಎಸ್ ಅಧಿಕಾರಿ ನಿಧಿ ತಿವಾರಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ನಿಧಿ ಅವರು 2014ರ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿದ್ದು, ಪ್ರಸ್ತುತ ಪ್ರಧಾನ ಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸಂಪುಟದ ನೇಮಕಾತಿ ಸಮಿತಿಯು ಇವರ ನೇಮಕವನ್ನು ಅನುಮೋದಿಸಿದೆ. ಈ ಹಿಂದೆ ನಿಧಿ ಅವರು ವಿದೇಶಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಕೇಶಮುಂಡನ ಮಾಡಿ ಕೇರಳ ಆಶಾ ಸಿಬ್ಬಂದಿ ಪ್ರತಿಭಟನೆ
ತಿರುವನಂತಪುರಂ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇರಳದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 50ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಸಚಿವಾಲಯದ ಮುಂಭಾಗ ಕೆಲವು ಆಶಾ ಕಾರ್ಯಕರ್ತೆಯರು ತಮ್ಮ ಕೂದಲನ್ನು ಬೋಳಿಸಿಕೊಂಡು ಪ್ರತಿಭಟಿಸಿದ ಘಟನೆ ನಡೆದಿದೆ.ಜಿಲ್ಲೆಯ ವಿವಿಧ ಭಾಗದ ಆಶಾ ಕಾರ್ಯಕರ್ತೆಯರು ಒಗ್ಗೂಡಿ ಸಾಮೂಹಿಕವಾಗಿ ತಲೆ ಕೂದನ್ನು ಕತ್ತರಿಸಿಕೊಂಡಿದ್ದಾರೆ. ಬಳಿಕ ಕತ್ತರಿಸಿದ ಕೂದಲನ್ನು ಹಿಡಿದುಕೊಂಡು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲಪ್ಪುಳ , ಅಂಗಮಾಲಿಯಲ್ಲಿಯೂ ಇದೇ ರೀತಿ ಕೂದಲು ಕತ್ತರಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸಿದರೆ ಎಲ್ಲಾ ಪ್ರತಿಭಟನಾಕಾರರು ಇಲ್ಲಿಯೇ ಸಾಯುತ್ತೇವೆ ಎಂದು ಎಚ್ಚರಿಸಿದರು.
ಕೂದಲು ಬೋಳಿಸಿಕೊಂಡು ಆಶಾ ಕಾರ್ಯಕರ್ತರ ಪ್ರತಿಭಟನೆಗೆ ರಾಜ್ಯ ಕಾರ್ಮಿಕ ಸಚಿವ ವಿ.ಶಿವನ್‌ಕುಟ್ಟಿ ಪ್ರತಿಕ್ರಿಯಿಸಿದ್ದು, ‘ ಆಶಾ ಕಾರ್ಯಕರ್ತೆಯರು ತಮ್ಮ ಕೂದಲಿನ ಎಳೆಗಳನ್ನು ರಾಜ್ಯದ ಕೇಂದ್ರ ಸಚಿವರ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು’ ಎಂದಿದ್ದಾರೆ.