ಸೆಪ್ಟೆಂಬರ್‌ನಲ್ಲಿ ಮೋದಿ ನಿವೃತ್ತ - ರಾಜೀನಾಮೆ ಪತ್ರ ಬರೆಯಲು ಮೋದಿ ಆರ್‌ಎಸ್‌ಎಸ್‌ ಕಚೇರಿಗೆ ಹೋಗಿದ್ದರು : ರಾವುತ್‌

KannadaprabhaNewsNetwork | Updated : Apr 01 2025, 04:45 AM IST

ಸಾರಾಂಶ

‘ಪ್ರಧಾನಿ  ಮೋದಿ ಸೆಪ್ಟೆಂಬರ್‌ನಲ್ಲಿ ನಿವೃತ್ತಿಯಾಗಲಿದ್ದಾರೆ.  ನಿವೃತ್ತಿ ಅರ್ಜಿ ಬರೆಯಲು ಮೋದಿ ಆರ್‌ಎಸ್‌ಎಸ್‌ ಕೇಂದ ಕಚೇರಿಗೆ ಭೇಟಿ ನೀಡಿದ್ದಾರೆ. ಸಂಘ, ನಾಯಕನನ್ನು ಬದಲಿಸಲು ಹೊರಟಿದೆ’ ಎಂದು ಮೋದಿ ನಾಗ್ಪುರ ಅರ್‌ಎಸ್‌ಎಸ್‌ ಕಚೇರಿ ಭೇಟಿ ಬಗ್ಗೆ ಶಿವಸೇನೆ ಸಂಸದ ಸಂಜಯ್ ರಾವುತ್ ವ್ಯಂಗ್ಯವಾಡಿದ್ದಾರೆ.  

ನಾಗ್ಪುರ/ ಮುಂಬೈ: ‘ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ತಮ್ಮ ನಿವೃತ್ತಿ ಅರ್ಜಿ ಬರೆಯಲು ಮೋದಿ ಆರ್‌ಎಸ್‌ಎಸ್‌ ಕೇಂದ ಕಚೇರಿಗೆ ಭೇಟಿ ನೀಡಿದ್ದಾರೆ. ಸಂಘ, ನಾಯಕನನ್ನು ಬದಲಿಸಲು ಹೊರಟಿದೆ’ ಎಂದು ಮೋದಿ ನಾಗ್ಪುರ ಅರ್‌ಎಸ್‌ಎಸ್‌ ಕಚೇರಿ ಭೇಟಿ ಬಗ್ಗೆ ಶಿವಸೇನೆ ಸಂಸದ ಸಂಜಯ್ ರಾವುತ್ ವ್ಯಂಗ್ಯವಾಡಿದ್ದಾರೆ. 

 ಇದಕ್ಕೆ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್‌ ತಿರುಗೇಟು ನೀಡಿದ್ದು ‘ 2029ಕ್ಕೂ ಮೋದಿಯೇ ಪ್ರಧಾನಿಯಾಗುತ್ತಾರೆ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಾ.30ರಂದು ನಾಗ್ಪುರದಲ್ಲಿರುವ ಆರ್‌ಎಸ್ಎಸ್‌ ಮುಖ್ಯ ಕಚೇರಿಗೆ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ ಉದ್ಧವ್‌ ಬಣದ ಸಂಸದ ಸಂಜಯ್ ರಾವುತ್‌, ‘ದೇಶದ ರಾಜಕೀಯ ನಾಯಕತ್ವ ಬದಲಿಸಲು ಆರ್‌ಎಸ್‌ಎಸ್‌ ನಿರ್ಧರಿಸಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ತಮ್ಮ ನಿವೃತ್ತಿಯ ಅರ್ಜಿ ಬರೆಯಲೆಂದೇ ಮೋದಿ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. 

ನಿಮಗೀಗ 75 ವರ್ಷ ಎಂದು ನೆನಪಿಸಲು ಮೋದಿಯನ್ನು ಆರ್‌ಎಸ್‌ಎಸ್‌ ಕರೆಸಿಕೊಂಡಿತ್ತು. ಮೋದಿಯವರ ಉತ್ತರಾಧಿಕಾರಿಯನ್ನು ಆರ್‌ಎಸ್‌ಎಸ್‌ ನಿರ್ಧರಿಸುತ್ತದೆ ಎಂದು ತೋರುತ್ತದೆ. ಅದಕ್ಕಾಗಿಯೇ ಮೋದಿಯನ್ನು ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಕರೆಸಿ ಚರ್ಚೆ ನಡೆಸಿದ್ದರು. ಸಂಘದ ಚರ್ಚೆಗಳು ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುತ್ತದೆ. ಸೂಚನೆಗಳು ಬಹಳ ಸ್ಪಷ್ಟವಾಗಿವೆ. ಮುಂದಿನ ನಾಯಕನನ್ನು ಸಂಘ ನಿರ್ಧರಿಸುತ್ತದೆ. ಆ ನಾಯಕ ಮಹಾರಾಷ್ಟ್ರದವನಾಗಿರಬಹುದು’ ಎಂದು ಕುಹಕವಾಡಿದ್ದಾರೆ.

ಫಡ್ನವೀಸ್‌ ತಿರುಗೇಟು:

ಸಂಜಯ್‌ ರಾವುತ್ ಹೇಳಿಕೆಗೆ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್‌ ಸೇರಿದಂತೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ‘ 2029ರಲ್ಲಿ ಮೋದಿಯನ್ನು ನಾವು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡುತ್ತೇವೆ. ಅವರ ಉತ್ತರಾಧಿಕಾರಿಯನ್ನು ಹುಡುಕುವ ಅಗತ್ಯವಿಲ್ಲ. ಅವರು ನಮ್ಮ ನಾಯಕ. ಅವರೇ ಮುಂದುವರೆಯುತ್ತಾರೆ. ನಮ್ಮ ಸಂಪ್ರದಾಯದಲ್ಲಿ ತಂದೆ ಬದುಕಿರುವಾಗ ಉತ್ತರಾಧಿಕಾರಿ ಬಗ್ಗೆ ಮಾತನಾಡುವುದು ಸರಿಯಲ್ಲ. ಅದು ಮುಘಲ್ ಸಂಸ್ಕೃತಿ. ಉತ್ತರಾಧಿಕಾರಿ ಬಗ್ಗೆ ಚರ್ಚಿಸುವ ಸಮಯ ಬರುವುದಿಲ್ಲ’ ಎಂದು ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್‌ ತಿರುಗೇಟು ನೀಡಿದ್ದಾರೆ.

Share this article