ರಷ್ಯಾಗೆ ಕೇಂದ್ರ ಸರ್ಕಾರದ ಎಚ್‌ಎಎಲ್‌ನಿಂದ ಸೂಕ್ಷ್ಮ ತಂತ್ರಜ್ಞಾನ : ನ್ಯೂಯಾರ್ಕ್‌ ಟೈಮ್ಸ್‌

KannadaprabhaNewsNetwork |  
Published : Apr 01, 2025, 12:46 AM ISTUpdated : Apr 01, 2025, 04:50 AM IST
ಎಚ್‌ಎಎಲ್‌ | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರದ ಒಡೆತನದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ.(ಎಚ್‌ಎಎಲ್‌), ರಷ್ಯಾದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಯೊಂದಕ್ಕೆ ಸೂಕ್ಷ್ಮ ತಂತ್ರಜ್ಞಾನವನ್ನು ನೀಡಿದೆ ಎಂದು ಆರೋಪಿಸಿ ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಪ್ರಕಟಿಸಿದೆ.

ನವದೆಹಲಿ: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರದ ಒಡೆತನದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ.(ಎಚ್‌ಎಎಲ್‌), ರಷ್ಯಾದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಯೊಂದಕ್ಕೆ ಸೂಕ್ಷ್ಮ ತಂತ್ರಜ್ಞಾನವನ್ನು ನೀಡಿದೆ ಎಂದು ಆರೋಪಿಸಿ ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಪ್ರಕಟಿಸಿದೆ.

ಆದರೆ ವರದಿಯನ್ನು ತಳ್ಳಿಹಾಕಿರುವ ವಿದೇಶಾಂಗ ಸಚಿವಾಲಯ, ‘ಈ ವರದಿ ವಾಸ್ತವಿಕವಾಗಿ ತಪ್ಪಾಗಿದ್ದು, ದಾರಿತಪ್ಪಿಸುವಂತಿದೆ. ತನ್ನ ರಾಜಕೀಯ ನಿರೂಪಣೆಗೆ ಸರಿಹೊಂದುವಂತೆ ಸಮಸ್ಯೆಗಳನ್ನು ಸೃಷ್ಟಿಸಲು ಮತ್ತು ಸತ್ಯಗಳನ್ನು ವಿರೂಪಗೊಳಿಸುವ ಯತ್ನವಾಗಿದೆ’ ಎಂದು ತಿರುಗೇಟು ನೀಡಿದೆ.

ವರದಿಯಲ್ಲಿ ಏನಿದೆ?:

ಮಾ.28ರಂದು ವರದಿಯೊಂದನ್ನು ಪ್ರಕಟಿಸಿದ್ದ ‘ನ್ಯೂಯಾರ್ಕ್‌ ಟೈಮ್ಸ್‌’ , ‘ಬ್ರಿಟನ್‌ನ ಎಚ್ಆರ್ ಸ್ಮಿತ್ ಗ್ರೂಪ್, 2023-24ರ ಅವಧಿಯಲ್ಲಿ 118 ಬಾರಿ ಎಚ್‌ಎಎಲ್‌ಗೆ ಟ್ರಾನ್ಸ್‌ಮಿಟರ್‌, ಕಾಕ್‌ಪಿಟ್‌ ಸಾಮಗ್ರಿ ಹಾಗೂ ಕೆಲ ಸೂಕ್ಞ್ಮ ತಂತ್ರಜ್ಞಾನವನ್ನು ಸಾಗಿಸಿತ್ತು. ಇದನ್ನು ಎಚ್‌ಎಎಲ್‌ 13 ಬಾರಿ ರಷ್ಯಾದ ರೊಸೊಬೊರೊನ್‌ ಎಕ್ಸ್‌ಪೋರ್ಟ್‌ ಎಂಬ ಕಂಪನಿಗೆ ಸಾಗಿಸಿದೆ. ಉಕ್ರೇನ್‌ನೊಂದಿಗಿನ ಯುದ್ಧದ ಹಿನ್ನೆಲೆಯಲ್ಲಿ ಈ ವ್ಯಾಪಾರವನ್ನು ನಡೆಸದಂತೆ ಅಮೆರಿಕ ಮತ್ತು ಬ್ರಿಟನ್‌ ಸೂಚಿಸಿದ್ದವು ಹಾಗೂ ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದವು. ಅದರ ಹೊರತಾಗಿಯೂ ಎಚ್‌ಎಎಲ್‌ ರಷ್ಯಾ ಕಂಪನಿಗೆ ಸೂಕ್ಷ್ಮ ರಕ್ಷಣಾ ಉಪಕರಣಗಳನ್ನು ವರ್ಗಾಯಿಸಿದೆ. ಹೀಗೆ ಎಚ್‌ಎಎಲ್‌ ಹಾಗೂ ರಷ್ಯಾದ ಕಂಪನಿ ನಡುವೆ ನಡೆದ ವ್ಯಾಪಾರದ ಮೌಲ್ಯ 119 ಕೋಟಿ ರು.’ ಎಂದು ವರದಿ ಹೇಳಿದೆ.

ಭಾರತ ತಿರುಗೇಟು:

ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನು ತಳ್ಳಿಹಾಕಿರುವ ಭಾರತದ ವಿದೇಶಾಂಗ ಸಚಿವಾಲಯ, ‘ವಾಸ್ತವಿಕವಾಗಿ ತಪ್ಪಾಗಿದ್ದು, ದಾರಿತಪ್ಪಿಸುವಂತಿದೆ. ಎಚ್‌ಎಎಲ್‌ ವ್ಯಾಪಾರ ನಿಯಂತ್ರಣ ಮತ್ತು ಅಂತಿಮ ಬಳಕೆದಾರ ಬದ್ಧತೆಗಳ ಎಲ್ಲಾ ಅಂತಾರಾಷ್ಟ್ರೀಯ ಬಾಧ್ಯತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ. ವ್ಯೂಹಾತ್ಮಕ ವ್ಯಾಪಾರದ ಕುರಿತು ಭಾರತದ ಕಾನೂನು ಮತ್ತು ನಿಯಂತ್ರಕ ಚೌಕಟ್ಟು ತನ್ನ ಸಾಗರೋತ್ತರ ಉದ್ಯಮಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರೆಸಿದೆ’ ಎಂದು ಸ್ಪಷ್ಟನೆ ನೀಡಿದೆ.

ಬ್ರಿಟನ್‌ ಕಂಪನಿ ಸ್ಪಷ್ಟನೆ:

ಅತ್ತ ಎಚ್‌ಎಎಲ್‌ಗೆ ಉಪಕರಣಗಳನ್ನು ನೀಡಿದ್ದ ಬ್ರಿಟನ್‌ನ ಎಚ್ಆರ್ ಸ್ಮಿತ್ ಗ್ರೂಪ್, ‘ಅವುಗಳನ್ನು ಶೋಧ ಮತ್ತು ರಕ್ಷಣೆಗೆ ಬಳಸಬಹುದೇ ಹೊರತು ಸೇನೆಯಲ್ಲಿ ಬಳಸಲಾಗದು’ ಎಂದಿದೆ. ಆದರೆ ಈ ಬಗ್ಗೆ ಎಚ್‌ಎಎಲ್‌ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ