ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಲಕ್ಷಾಂತರ ಭಕ್ತರ ಆರಾಧ್ಯ ದೈವ ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಪವಿತ್ರ ತಪೋಭೂಮಿಯಾದ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಸನ್ನಿಧಾನದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ದೀಪಾವಳಿ ಜಾತ್ರಾ ಮಹೋತ್ಸವವನ್ನು ನ.6ರಿಂದ 10ರವರೆಗೆ ಐದು ದಿನಗಳ ಕಾಲ ಅತ್ಯಂತ ಭಕ್ತಿ, ಶ್ರದ್ಧೆ, ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಹನೂರು
ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಲಕ್ಷಾಂತರ ಭಕ್ತರ ಆರಾಧ್ಯ ದೈವ ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಪವಿತ್ರ ತಪೋಭೂಮಿಯಾದ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಸನ್ನಿಧಾನದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ದೀಪಾವಳಿ ಜಾತ್ರಾ ಮಹೋತ್ಸವವನ್ನು ನ.6ರಿಂದ 10ರವರೆಗೆ ಐದು ದಿನಗಳ ಕಾಲ ಅತ್ಯಂತ ಭಕ್ತಿ, ಶ್ರದ್ಧೆ, ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಧಾರ್ಮಿಕ ಪರಂಪರೆ, ಸಂಪ್ರದಾಯ ಹಾಗೂ ಆಚರಣೆಗಳ ಪ್ರತೀಕವಾಗಿರುವ ಈ ಜಾತ್ರಾ ಮಹೋತ್ಸವವು ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತಾದಿಗಳ ಪಾಲಿಗೆ ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಜಾತ್ರೆಯ ಅಂಗವಾಗಿ ವಿವಿಧ ವಿಶೇಷ ಪೂಜೆಗಳು, ಧಾರ್ಮಿಕ ವಿಧಿವಿಧಾನಗಳು, ಉತ್ಸವಗಳು ಹಾಗೂ ಮಹಾರಥೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸಾಲೂರು ಬೃಹನ್ಮಠದ ಮಠಾಧ್ಯಕ್ಷ ವಿದ್ವಾನ್ ಡಾ.ಶಾಂತಮಲ್ಲಿಕಾರ್ಜುನ ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯಬದ್ಧವಾಗಿ ನೆರವೇರಲಿವೆ.
ನ.6ರ ಶುಕ್ರವಾರ ಜಾತ್ರಾ ಮಹೋತ್ಸವಕ್ಕೆ ಚಾಲನೆ:
ದೀಪಾವಳಿ ಜಾತ್ರಾ ಮಹೋತ್ಸವದ ಮೊದಲ ದಿನವಾದ ನ. 6ರಂದು ಮಹದೇಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧಿವತ್ತಾಗಿ ಚಾಲನೆ ದೊರೆಯಲಿದೆ. ಶ್ರೀಸ್ವಾಮಿಯವರಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ಧಾರ್ಮಿಕ ಉತ್ಸವಗಳನ್ನು ನೆರವೇರಿಸಲಾಗುವುದು. ಇದರೊಂದಿಗೆ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವದ ಸಂಭ್ರಮ ಆರಂಭವಾಗಲಿದೆ.
ನ.7 ಶನಿವಾರ ಎಣ್ಣೆಮಜ್ಜನ ವಿಶೇಷ ಪೂಜೆ:
ಎರಡನೇ ದಿನವಾದ ನ.7ರಂದು ಶ್ರೀ ಮಲೆ ಮಹದೇಶ್ವರ ಸ್ವಾಮಿಯವರಿಗೆ ಎಣ್ಣೆಮಜ್ಜನ ವಿಶೇಷ ಪೂಜೆಯನ್ನು ನೆರವೇರಿಸಲಾಗುವುದು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯುವ ಈ ಪೂಜಾ ಕೈಂಕರ್ಯವು ಜಾತ್ರಾ ಮಹೋತ್ಸವದ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ವಿಶೇಷ ಸೇವೆಗಳು ಹಾಗೂ ಧಾರ್ಮಿಕ ಉತ್ಸವಗಳು ಜರುಗಲಿವೆ.
ನ.8, ಭಾನುವಾರ ನರಕ ಚತುರ್ದಶಿ ವಿಶೇಷ ಪೂಜೆ:
ನರಕ ಚತುರ್ದಶಿಯ ಪವಿತ್ರ ಸಂದರ್ಭದಲ್ಲಿ ನ. 8ರಂದು ಶ್ರೀಸ್ವಾಮಿಯವರಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಸೇವೆಗಳನ್ನು ಸಲ್ಲಿಸಲಾಗುವುದು. ದೀಪಾವಳಿ ಹಬ್ಬದ ಧಾರ್ಮಿಕ ಮಹತ್ವವನ್ನು ಸಾರುವ ಈ ದಿನದಂದು ಭಕ್ತಾದಿಗಳು ಶ್ರೀಸ್ವಾಮಿಯವರ ದರ್ಶನ ಪಡೆದು ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲಿದ್ದಾರೆ.
ನ.9 ಸೋಮವಾರ ದೀಪಾವಳಿ ಅಮಾವಾಸ್ಯೆ, ಹಾಲರುವೆ ಉತ್ಸವ:
ದೀಪಾವಳಿ ಜಾತ್ರಾ ಮಹೋತ್ಸವದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಹಾಲರುವೆ ಉತ್ಸವವು ನವೆಂಬರ್ 9ರಂದು ದೀಪಾವಳಿ ಅಮಾವಾಸ್ಯೆಯ ಪವಿತ್ರ ದಿನದಂದು ನಡೆಯಲಿದೆ. ಅಂದು ಬೆಳಗ್ಗೆ 9.30ರ ನಂತರ ಡಾ.ಶಾಂತಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಲರುವೆ ಉತ್ಸವ ನೆರವೇರಿಸಲಾಗುವುದು.
ನ.10 ಮಂಗಳವಾರ ಮಹಾರಥೋತ್ಸವ
ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವದ ಅತ್ಯಂತ ಪ್ರಮುಖ ಹಾಗೂ ಆಕರ್ಷಣೀಯ ಧಾರ್ಮಿಕ ಕಾರ್ಯಕ್ರಮವಾದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಮಹಾರಥೋತ್ಸವ ನ.10ರಂದು ಮಂಗಳವಾರ ಬೆಳಿಗ್ಗೆ 7.30ರಿಂದ 8.40ರ ವಿದ್ವಾನ್ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ.ಮಹಾರಥೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಶ್ರೀಸ್ವಾಮಿಯವರ ಉತ್ಸವ ಮೂರ್ತಿಯನ್ನು ಮಹಾರಥದಲ್ಲಿ ಪ್ರತಿಷ್ಠಾಪಿಸಿ ಸಂಪ್ರದಾಯದಂತೆ ರಥೋತ್ಸವವನ್ನು ನೆರವೇರಿಸಲಾಗುವುದು. ಈ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ.
ಮಹಾರಥೋತ್ಸವದ ನಂತರ ಗುರುಬ್ರಹ್ಮೋತ್ಸವ ಹಾಗೂ ಅನ್ನಬ್ರಹ್ಮೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ಮಹಾ ನೈವೇದ್ಯದ ನಂತರ ತೆಪ್ಪೋತ್ಸವವನ್ನು ನೆರವೇರಿಸಲಾಗುವುದು. ಇದರೊಂದಿಗೆ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವವು ಧಾರ್ಮಿಕ ಸಂಭ್ರಮದೊಂದಿಗೆ ಸಂಪನ್ನಗೊಳ್ಳಲಿದೆ.
ರಥ ನಿರ್ಮಾಣಕ್ಕೆ ಪೂಜೆ:
ದೀಪಾವಳಿ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಮಹಾರಥೋತ್ಸವದ ಹಿನ್ನೆಲೆಯಲ್ಲಿ ಮಹಾರಥ ನಿರ್ಮಾಣ ಕಾರ್ಯಕ್ಕೆ ಸೋಮವಾರ ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ.
ಶ್ರೀ ಸಾಲೂರು ಬೃಹನ್ಮಠದ ಮಠಾಧ್ಯಕ್ಷರಾದ ಪೂಜ್ಯ ವಿದ್ವಾನ್ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರ ನೇತೃತ್ವದಲ್ಲಿ ಮಹಾರಥ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಕಲ್ಪಿಸಲಾಗಿದೆ. ಶ್ರೀ ಸಾಲೂರು ಬೃಹನ್ಮಠದಲ್ಲಿಯೂ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದ್ದು. ದಾಸೋಹವು ಕೂಡ ಸನ್ನಿಧಾನದ ಧಾರ್ಮಿಕ ಸೇವಾ ಪರಂಪರೆಯ ಪ್ರಮುಖ ಭಾಗವಾಗಿದೆ.
ಸರದಿ ಅರ್ಚಕ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ ಇತರರು ಹಾಜರಿದ್ದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.